ಕನ್ನಡ ಚಿತ್ರರಂಗದ ಪ್ರಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ ಇಪ್ಪತ್ತು ದಿನಗಳಾಗಿದ್ದರೂ ಅವರು ನಮ್ಮೊಂದಿಗಿಲ್ಲ ಎಂಬ ಕಹಿಸತ್ಯವನ್ನ ಅರಗಿಸಿಕೊಳ್ಳಲು ಅವರ ಕುಟುಂಬಕ್ಕಾಗಲಿ, ಅಭಿಮಾನಿಗಳಿಗಾಗಲಿ, ಚಿತ್ರರಂಗದವರಿಗಾಗಲಿ ಸಾಧ್ಯವಾಗುತ್ತಿಲ್ಲ. ದೈಹಿಕವಾಗಿ ನಮ್ಮ ಜೊತೆ ಇಲ್ಲದಿದ್ದರೂ ಅವರ ಲಕ್ಷಾಂತರ ನೆನಪುಗಳ ನಮ್ಮಲ್ಲೇ ಅಮರ. ಸದಾ ನಗುಮುಖದಲ್ಲೇ ಎಲ್ಲರ ಜೊತೆ ಸಂವಹಿಸುತ್ತಿದ್ದ ಅಪ್ಪುಗೆ ನಮನ ಸಲ್ಲಿಸುವ ಉದ್ದೇಶದಿಂದ ನೆನ್ನೆ ‘ಪುನೀತ್ ನಮನ’ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತಂದಿದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ ಪ್ರಶಸ್ತಿ’ ನೀಡುವುದಾಗಿ ಘೋಷಿಸಿದರು. ಸಿಎಂ ಬೊಮ್ಮಾಯಿ ಅವರ ಈ ನಿರ್ಧಾರವನ್ನು ಕನ್ನಡಿಗರು ಸ್ವಾಗತ ಮಾಡಿದ್ದು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಅಂತೆಯೇ ಅಪ್ಪು ಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿದ್ದಕ್ಕೆ ರಾಜ್ಯಸಭಾ ಸಂಸದ ಜಿಸಿ ಚಂದ್ರಶೇಖರ್ ಅವರು ಕೂಡ ಮೆಚ್ಚುಗೆ ಸೂಚಿಸಿದ್ದು ಒಂದು ಹೆಜ್ಜೆ ಮುಂದೆ ಹೋಗಿ ಪುನೀತ್ ಅವರಿಗೆ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿ “ಭಾರತ ರತ್ನ” ಪ್ರಶಸ್ತಿ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಈ ವಿಚಾರದ ಬಗ್ಗೆ ಜಿಸಿ ಚಂದ್ರಶೇಖರ್ ಪೋಸ್ಟ್ ಹಾಕಿದ್ದಾರೆ.
“ಕರ್ನಾಟಕದ ಪ್ರತಿಯೊಬ್ಬರ ಮನೆ ಮಗನಂತಿದ್ದ ಬಹುಮುಖ ಪ್ರತಿಭೆ ನಮ್ಮ ಅಪ್ಪುವಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ ಮಾಡಿರುವುದು ಅರ್ಥಪೂರ್ಣ ಹಾಗೂ ನಿಜವಾದ ಗೌರವ, ಹಾಗೆ ಅವರಿಗೆ ಕರ್ನಾಟಕ ರತ್ನ ಮಾತ್ರವಲ್ಲದೇ ಭಾರತ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ಭಾರತ ರತ್ನವನ್ನು ಕೊಟ್ಟು ಗೌರವಿಸಬೇಕೆಂಬುದು ನಮ್ಮೆಲ್ಲರ ಒತ್ತಾಸೆ.” ಎಂದು ಜಿಸಿ ಚಂದ್ರಶೇಖರ್ ಬರೆದುಕೊಂಡಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೂಡ ಪೋಸ್ಟ್ ನಲ್ಲಿ ಟ್ಯಾಗ್ ಮಾಡಿದ್ದಾರೆ.
ಪುನೀತ್ ರಾಜಕುಮಾರ್ ಅವರು ಸಮಾಸದಲ್ಲಿ ಕೇವಲ ನಟನಾಗಿ ಮಾತ್ರ ಉಳಿದುಕೊಂಡಿರಲಿಲ್ಲ. ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಅಪ್ಪು ಮಾಡಿದ್ದರು. ಅನಾಥಾಶ್ರಮ, ಗೋಶಾಲೆ, ವೃದ್ದಾಶ್ರಮ, ಬಡ ವಿದ್ಯಾರ್ಥಿಗಳ ಶಿಕ್ಷಣ ವೆಚ್ಚ ಹೀಗೆ ಅನೇಕ ಸತ್ಕಾರ್ಯಗಳನ್ನು ಅಪ್ಪು ಮಾಡುತ್ತಿದ್ದರು. ಈ ಹಿನ್ನಲೆಯಲ್ಲಿ ಅವರ ಸಮಾಜ ಸೇವೆಯನ್ನು ಗುರುತಿಸಿ ಉನ್ನತ ಪ್ರಶಸ್ತಿ ನೀಡಬೇಕು ಎಂಬುದು ಜಿಸಿ ಚಂದ್ರಶೇಖರ್ ಸೇರಿದಂತೆ ಎಲ್ಲಾ ಕನ್ನಡಿಗರ ಒತ್ತಾಸೆಯಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ