ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ತೆರಳಿದ್ದ ನಟಿ ತಾರಾ ಅವರು, ಹರ ಸಾಹಸ ಪಟ್ಟು ನಿನ್ನೆ ಮಧ್ಯ ರಾತ್ರಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಈ ವೇಳೆ ತಿರುಪತಿಯಲ್ಲಿ ಸುರಿದ ಮಹಾಮಳೆಯ ರೌದ್ರ ಅವತಾರವನ್ನು ಹಂಚಿಕೊಂಡಿದ್ದಾರೆ.
ಪೂರ್ವನಿಗದಿಯಂತೆ ಇಂದು ದೇವರ ದರ್ಶನ ಮಾಡಲು ದಿನ ನಿಗದಿ ಮಾಡಿಕೊಂಡಿದ್ದ ನಟಿ ತಾರಾ, ನಿನ್ನೆ ಬೆಳಗ್ಗೆಯೇ ಬೆಂಗಳೂರಿನಿಂದ ತಿರುಮಲ ತಿರುಪತಿಗೆ ಕಾರಿನಲ್ಲಿ ಮನೆ ಮಂದಿ ಜತೆ ಹೊರಟಿದ್ದರು. ದಾರಿಯಲ್ಲಿ ಹೋಗುವಾಗ ಸ್ವಲ್ಪ ಮಳೆ ಬಂದಿದ್ದರಿಂದ ಅವರು ಅಲ್ಲಿನ ಪರಿಸ್ಥಿತಿ ಕುರಿತು ವಿಚಾರಿಸಿಕೊಂಡಿದ್ದಾರೆ. ಇಲ್ಲಿಯೂ ಮಳೆ ಬರುತ್ತಿದೆ, ಆದರೆ ದರ್ಶನಕ್ಕೆ ಏನೂ ತೊಂದರೆ ಇಲ್ಲ ಎಂದು ಅವರು ಖಚಿತ ಪಡಿಸಿದ್ದರಿಂದ ಪ್ರಯಾಣ ಮುಂದುವರಿಸಿದ್ದರು.
ಸ್ವಲ್ಪಹೊತ್ತಿನಲ್ಲಿ ಮುಂದಕ್ಕೆ ಹೋಗುತ್ತಿದ್ದಂತೆ ಇಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ, ತಿರುಮಲಕ್ಕೆ ಬರುವುದು ಬೇಡ, ತಿರುಪತಿಯಲ್ಲಿಯೇ ಉಳಿದುಕೊಳ್ಳಿ, ಬೆಳಗ್ಗೆ ದೇವರ ದರ್ಶನ ಮಾಡಬಹುದು ಎಂದು ಮಾಹಿತಿ ನೀಡಿದ ದೇವಸ್ಥಾನದವರೇ ತಿರುಪತಿಯಲ್ಲಿ ರೂಮ್ ವ್ಯವಸ್ಥೆ ಮಾಡಿಸಿದ್ದನ್ನು ತಾರಾ ಹೇಳಿಕೊಂಡಿದ್ದಾರೆ.
”ನಾನು, ಅಮ್ಮ, ಮಗ, ಅಣ್ಣ, ನನ್ನ ಪಿಎ, ಡ್ರೈವರ್ ಎಲ್ಲರೂ ನಿನ್ನೆ ಬೆಳಿಗ್ಗೆ ತಿರುಪತಿಗೆ ಹೋಗೋಣವೆಂದು ಹೊರಟೆವು, ದಾರಿಯುದ್ದಕ್ಕೂ ಮಳೆ ಇತ್ತು. ಆದರೆ ತಿರುಪತಿ ದೇವಸ್ಥಾನದ ಪರಿಚಯಸ್ಥರೊಬ್ಬರು ಪರವಾಗಿಲ್ಲ ಬನ್ನಿ ಎಂದರು ಹಾಗಾಗಿ ನಾವು ಹೋದೆವು. ತಿರುಪತಿ ಸೇರುವ ವೇಳೆಗಾಗಲೇ ಕತ್ತಲಾಗಿತ್ತು, ಅಲ್ಲಿ ರಸ್ತೆಗಳಲ್ಲೆಲ್ಲ ಸೊಂಟದವರೆಗೆ ನೀರು ತುಂಬಿತ್ತು. ಅಲ್ಲಿನ ಪರಿಚಿತರಿಗೆ ಕರೆ ಮಾಡಿದರೆ, ಈಗಷ್ಟೆ ರೆಡ್ ಅಲರ್ಟ್ ಘೋಷಣೆಯಾಗಿದೆ ಅಲ್ಲಿಯೇ ಬೆಟ್ಟದ ಕೆಳಗೆ ಯಾವುದಾದರೂ ರೂಂ ಮಾಡಿಕೊಂಡಿ ಇರಿ” ಎಂದು ಅನುಭವ ವಿವರಿಸಿದ್ದಾರೆ.
ತಿರುಪತಿಯಲ್ಲಿನ ರೂಮ್ಗೆ ತೆರಳುವಾಗಲೇ ನಮ್ಮ ಕಾರ್ ಕಿಟಕಿಯವರೆಗೆ ನೀರು ಬಂದಿತ್ತು. ಸ್ವಲ್ಪ ಮುಂದೆ ಹೋಗುವಷ್ಟರಲ್ಲಿ ಕಾರು ತೇಲಲಾರಂಭಿಸಿ, ಇಂಜಿನ್ ಆಫ್ ಆಯ್ತು. ಡ್ರೈವರ್ ದಿಗ್ಭ್ರಾಂತರಾದರು. ಹೇಗೋ ಮತ್ತೆ ಮತ್ತೆ ಪ್ರಯತ್ನಿಸಿದಾಗ ಕಾರು ಸ್ಟಾರ್ಟ್ ಆಯಿತು. ತಕ್ಷಣ ಅಲ್ಲಿಂದ ಹೊರಟು ಬೆಂಗಳೂರು ಹೆದ್ದಾರಿ ತಲುಪಿದೆವು. ಹಾಗೆ ಹತ್ತು ಕಿ.ಮೀ. ದೂರ ಬರುವಷ್ಟರಲ್ಲಿ ದೇವಸ್ಥಾನದಿಂದಲೂ ಕರೆ ಬಂತು. ಇನ್ನೂ ಎರಡು ದಿನ ಪರಿಸ್ಥಿತಿ ಹೀಗೇ ಇರುತ್ತದೆ, ವಾಪಸ್ ಹೊರಡಿ ಎಂದರು ಎಂಬುದಾಗಿ ತಾರಾ ವಿವರಿಸಿದ್ದಾರೆ. ‘ಅಲ್ಲಿಯವರೆಗೆ ಹೋದರೂ ದೇವರ ದರ್ಶನ ಮಾಡಲು ಆಗಿಲ್ಲ ಎನ್ನುವ ಬೇಸರ ಒಂದು ಕಡೆಯಾದರೆ, ಸುರಕ್ಷಿತವಾಗಿ ಬೆಂಗಳೂರು ತಲುಪಿದ್ದೇವೆ ಎನ್ನುವ ಸಂತೋಷ ಮತ್ತೊಂದು ಕಡೆ’ ಎಂಬುದು ತಾರಾ ಮಾತು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
