ಕರ್ನಾಟಕದ ರಾಜಕಾರಣಿಗಳಲ್ಲಿ ಅತಿ ಶ್ರೀಮಂತ ನಾಯಕರು ಯಾರೆಂದರೆ ತಕ್ಷಣ ನೆನಪಾಗುವ ಹೆಸರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಬಿಜೆಪಿ ಸಚಿವ ಎಂಟಿಬಿ ನಾಗರಾಜ್, ಮಾಜಿ ಸಚಿವ ಜನಾರ್ಧನ್ ರೆಡ್ಡಿ. ಆದರೆ ಅವರನ್ನೂ ಮೀರಿಸುವ ವ್ಯಕ್ತಿಯೊಬ್ಬರು ಹೊಸದಾಗಿ ರಾಜಕಾರಣಕ್ಕೆ ಎಂಟ್ರಿಯಾಗಿದ್ದಾರೆ. ಅವರೇ ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಂಗಳೂರು ನಗರದ ಕಾಂಗ್ರೆಸ್ ಅಭ್ಯರ್ಥಿ ಕೆಜಿಎಫ್ ಬಾಬು ಅಲಿಯಾಸ್ ಯೂಸುಫ್ ಷರೀಫ್.
‘ಕೆಜಿಎಫ್ ಬಾಬು’ ಎಂದೇ ಪ್ರಸಿದ್ಧಿ ಪಡೆದಿರುವ ಯೂಸೂಫ್ ಷರೀಫ್ ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು, ಬರೋಬ್ಬರಿ 1,743 ಕೋಟಿ ರೂ. ಆಸ್ತಿ ಘೋಷಣೆ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಸಮ್ಮುಖದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಮಂಗಳವಾರ ನಾಮಪತ್ರ ಸಲ್ಲಿಕೆ ಮಾಡಿದರು.
ಆಸ್ತಿ ಎಷ್ಟಿದೆ?
ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಅವರು 97.98 ಕೋಟಿ ರೂ. ಮೌಲ್ಯದ ಚರಾಸ್ತಿ, 1643.59 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು 1,741.57 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದಾರೆ. ರಾಜ್ಯ ರಾಜಕಾರಣದ ಮಟ್ಟಿಗೆ ಇದೊಂದು ದಾಖಲೆಯೇ ಸರಿ.
ಕೋಟ್ಯಂತರ ರೂ. ಮೌಲ್ಯದ ಸ್ಥಿರಾಸ್ತಿ:
ಬೆಂಗಳೂರಿನಲ್ಲಿ ನೂರಾರು ಎಕರೆ ಕೃಷಿ ಹಾಗೂ ಕೃಷಿಯೇತರ ಜಮೀನು ಹೊಂದಿರುವ ಯೂಸೂಫ್ ಷರೀಫ್ ತಮ್ಮ ಹೆಸರಿನಲ್ಲೇ 47.31 ಕೋಟಿ ರೂ. ಮೌಲ್ಯದ ಕೃಷಿಯೇತರ ಜಮೀನು ಹಾಗೂ ಪತ್ನಿಯ ಹೆಸರಿನಲ್ಲಿ 1.30 ಕೋಟಿ ರೂ. ಮೌಲ್ಯದ ಕೃಷಿಯೇತರ ಜಮೀನು ಹೊಂದಿದ್ದಾರೆ. ಅಷ್ಟೇ ಅಲ್ಲದೇ 1,593.27 ಕೋಟಿ ರೂ. ಮೌಲ್ಯದ ಕೃಷಿಯೇತರ ಜಮೀನು, ಬೆಂಗಳೂರಿನಲ್ಲಿ 3.01 ಕೋಟಿ ರೂ. ಮೌಲ್ಯದ ವಸತಿ ಕಟ್ಟಡ ಹೊಂದಿದ್ದು, ಒಟ್ಟು 67.24 ಕೋಟಿ ರೂ. ಸಾಲ ಹೊಂದಿರುವುದಾಗಿ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಚರಾಸ್ತಿ ಎಷ್ಟಿದೆ?
4.8 ಕೆ.ಜಿ. ಚಿನ್ನಾಭರಣ ಹಾಗೂ 1.10 ಕೋಟಿ ರೂ. ಮೌಲ್ಯದ ವಾಚ್ ಸೇರಿದಂತೆ ದುಬಾರಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಕೈಯಲ್ಲಿ 19.53 ಲಕ್ಷ ರೂ. ನಗದು, ಬ್ಯಾಂಕ್‌ಗಳಲ್ಲಿ16.87 ಕೋಟಿ ರೂ. ಠೇವಣಿ, 17.61 ಕೋಟಿ ರೂ.. ಹೂಡಿಕೆ, 58.10 ಕೋಟಿ ರೂ. ವೈಯಕ್ತಿಕ ಸಾಲ ಮಾಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
