fbpx
ಸಮಾಚಾರ

ಇಎಸ್ಐ ಆಸ್ಪತ್ರೆಯ ಎಡವಟ್ಟು: ಶವಾಗಾರದಲ್ಲೇ 15 ತಿಂಗಳು ಕೊಳೆತ 2 ಕೋವಿಡ್‌ ಶವ!

ಕೊರೋನಾ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ 15 ತಿಂಗಳ ಬಳಿಕ ಇಬ್ಬರ ಮೃತದೇಹಗಳನ್ನು ರಾಜಾಜಿನಗರದ ಕಾರ್ಮಿಕ ವಿಮಾ ಆಸ್ಪತ್ರೆ ಶೈತ್ಯಾಗಾರದಿಂದ ಹೊರತೆಗೆದಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

2020ರ ಜುಲೈನಲ್ಲಿ ಕೊರೊನಾ ಸೋಂಕಿನಿಂದ ಬಳಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದವರನ್ನು ಶವಗಾರದಲ್ಲಿ ಇಡಲಾಗಿತ್ತು. ಆದರೆ ಆ ಶವಗಳಿಗೆ ಅಂದೇ ಮುಕ್ತಿ ಕೊಡದೆ ಮರೆತಿದ್ದಾರೆ. ಸದ್ಯ 15 ತಿಂಗಳ ಬಳಿಕ ಶವಗಳನ್ನು ಎರಡು ದಿನಗಳ ಹಿಂದೆ ಹೊರಕ್ಕೆ ತೆಗೆಯಲಾಗಿದೆ. ಚಾಮರಾಜಪೇಟೆಯ ದುರ್ಗಾ(40) ಮತ್ತು ಕೆ.ಪಿ. ಅಗ್ರಹಾರದ ಮುನಿರಾಜು (35) ಮೃತರು. ಮರಣೋತ್ತರ ಪರೀಕ್ಷೆಗೆ ಎರಡು ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ರಾಜಾಜಿನಗರದ ಇಎಸ್‌ಐ ಆಸ್ಪತ್ರೆ ಆವರಣದಲ್ಲಿ ಆರು ಶೈತ್ಯಾಗಾರದ ಶವಾಗಾರವಿತ್ತು. ಆದರೆ ಕೊರೋನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿ ಶವಾಗಾರದಲ್ಲಿ ಮೃತದೇಹಗಳನ್ನು ಶೇಖರಿಸಿಡಲು ಕಷ್ಟವಾಯಿತು. ಆಗ ಸರ್ಕಾರವು 2020ರಲ್ಲಿ ಇಎಸ್‌ಐ ಆಸ್ಪತ್ರೆಯ ಆವರಣದಲ್ಲಿ ಹೊಸದಾಗಿ ಶವಾಗಾರ ನಿರ್ಮಿಸಿತು. ಈ ಶವಾಗಾರಕ್ಕೆ 2020ರ ಕೊನೆಯಲ್ಲಿ ಚಾಲನೆ ನೀಡಲಾಗಿತ್ತು. ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವ ಮುನ್ನ ಹಳೇ ಶವಾಗಾರವನ್ನು ಬಿಬಿಎಂಪಿಗೆ ಆಸ್ಪತ್ರೆಯ ಆಡಳಿತ ಮಂಡಳಿ ಒಪ್ಪಿಸಬೇಕಿತ್ತು. ಆದರೆ ಆಸ್ಪತ್ರೆ ಸಿಬ್ಬಂದಿ, ಹೊಸ ಶವಾಗಾರದ ಕಾರ್ಯಚಟುವಟಿಕೆ ಶುರುವಾದ ಬಳಿಕ ಹಳೆ ಕಟ್ಟಡದ ಕಡೆಗೆ ಸುಳಿಯದೆ ನಿರ್ಲಕ್ಷಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top