ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿರುವ ಕೇಜಿಫ್ ಬಾಬು ಸುದ್ದಿಗೋಷ್ಠಿಯಲ್ಲಿ ಗಳಗಳನೆ ಕಣ್ಣೀರಿಟ್ಟಿದ್ದಾರೆ. ಯುಸೂಫ್ ಷರೀಫ್ (ಕೆಜಿಎಫ್ ಬಾಬು) ತಮ್ಮ ಇಬ್ಬರು ಪತ್ನಿಯರು ಮತ್ತು ಮಕ್ಕಳ ಜತೆ ಸುದ್ದಿಗೋಷ್ಠಿ ನಡೆಸಿ, ತಮ್ಮ ವಿರುದ್ಧ ಸಚಿವ ಎಸ್.ಟಿ.ಸೋಮಶೇಖರ್ ಅಪಪ್ರಚಾರ ನಡೆಸಿದ್ದಾರೆ ಎಂದು ದೂರಿದರು. ಈ ವೇಳೆ ಭಾವುಕರಾಗಿ ಕಣ್ಣೀರು ಹಾಕಿದರೂ.
ಕೆಜಿಎಫ್ ಬಾಬು ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಅವರ ಆರೋಪದ ಕುರಿತು ಮಾತನಾಡಿದ್ದಾರೆ. ಕೆಜಿಎಫ್ ಬಾಬು ತಮ್ಮ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಈ ಸಂಬಂಧ ಬಾಬು ಪತ್ನಿ ಮತ್ತು ಮಕ್ಕಳೇ ದೂರು ನೀಡಿದ್ದಾರೆ ಎಂದು ಎಸ್. ಟಿ. ಸೋಮಶೇಖರ್ ಅವರು ಆರೋಪಿಸಿದ್ದರು.ಈ ಸಂಬಂಧ ಮಾತನಾಡಿದ ಅವರು ಬಿಜೆಪಿಯವರು ಸುಖಾ ಸುಮ್ಮನೆ ನನ್ನ ಮೇಲೆ ಆರೋಪ ಮಾಡಿದ್ದಾರೆ. ನಾನು ಯಾರಿಗೂ ಅನ್ಯಾಯ ಮಾಡಿಲ್ಲ, ಮೋಸವನ್ನೂ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಯುಸೂಫ್ ಷರೀಫ್ ಅವರು, ‘ನನ್ನ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದೇನೆ ಎಂಬುದು ನಿಜವಲ್ಲ. ನನಗೆ ಪತ್ನಿ ಮತ್ತು ನನ್ನ ಮಗಳು ಎಂದರೆ ಪ್ರಾಣ. ನವೀದ್ ಎಂಬಾತ ₹300 ಕೋಟಿ ಮೌಲ್ಯದ ಆಸ್ತಿ ಖರೀದಿ ಮಾಡಿದ್ದ. ಆದರೆ ಆತ ₹6 ಲಕ್ಷ ಕೊಟ್ಟು ಉಳಿದ ಹಣವನ್ನು ಕೊಡದೇ ಮೋಸ ಮಾಡಿದ್ದ. ಈ ಸಂಬಂಧ ನಮ್ಮಿಬ್ಬರ ಮಧ್ಯೆ ಮನಸ್ತಾಪವಾಗಿತ್ತು. ಆತ ನನ್ನ ಹೆಂಡತಿಯ ಬ್ರೈನ್ವಾಶ್ ಮಾಡಿ, ಹೆಂಡತಿ ಮತ್ತು ಮಗಳನ್ನು ಅಪಹರಣ ಮಾಡಿದ್ದ’ ಎಂದು ಹೇಳಿದರು.
‘ಹೆಂಡತಿ ಮತ್ತು ಮಗಳನ್ನು ಮೈಸೂರು, ಬೆಂಗಳೂರು, ತಮಿಳುನಾಡಿನಲ್ಲಿ ಸುಮಾರು ಆರು ತಿಂಗಳು ಬಚ್ಚಿಟ್ಟಿದ್ದ. ನನ್ನ ಹಣವನ್ನು ಹೊಡೆಯಲು ಈ ಕೃತ್ಯ ಮಾಡಿದ್ದ. ನನ್ನ ಮೇಲೆ ಕೌಟುಂಬಿಕ ದೌರ್ಜನ್ಯ ಕೇಸ್ ಹಾಕಿಸಿದರು. ₹1,000 ಕೋಟಿ ಪರಿಹಾರ ಕೇಳಿದರು. ಹೆಂಡತಿಗೆ ಬುದ್ದಿವಾದ ಹೇಳಿದೆ. ಬಳಿಕ ಹೆಂಡತಿ ಪ್ರಕರಣವನ್ನು ಹಿಂದಕ್ಕೆ ಪಡೆದಳು. ಇವೆಲ್ಲ ಮಾಡಿಸಿದ್ದು ನವೀದ್. ನನ್ನ ಬಳಿ ಹತ್ತು ತಲೆಮಾರು ಕೂತು ತಿನ್ನುವಷ್ಟೇ ಆಸ್ತಿ ಇದೆ ಅದಕ್ಕಾಗಿ ನವೀದ್ ಈ ಸಂಚು ರೂಪಿಸಿದ್ದ’ ಎಂದು ಯುಸೂಫ್ ಕಣ್ಣೀರು ಹಾಕಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
