ಕರ್ನಾಟಕದ ರಾಜ್ಯಪಾಲರಾಗಿ ಎರಡು ತಿಂಗಳು ಕಾರ್ಯ ನಿರ್ವಹಿಸಿದ್ದ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕೆ. ರೋಸಯ್ಯ ಅವರು ಶನಿವಾರ ಬೆಳಿಗ್ಗೆ ನಿಧನರಾದರು. 88 ವರ್ಷದ ರೋಸಯ್ಯ ಅವರು ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ರೋಸಯ್ಯ ಅವರನ್ನು ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಕಾಂಗ್ರೆಸ್ ನಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದ ರೋಸಯ್ಯ ಅವರು, ಶಾಸಕರಾಗಿ, ಸಂಸದರಾಗಿ ಮುಖ್ಯಮಂತ್ರಿಯಾಗಿ, ತಮಿಳುನಾಡಿನ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದಾರೆ.
ರಾಜಕೀಯ ಜೀವನ :
ರೋಸಯ್ಯ ಸ್ವತಂತ್ರ ಪಕ್ಷದ ಮೂಲಕ ತಮ್ಮ ರಾಜಕೀಯ (Politics) ಜೀವನವನ್ನು ಅರಂಭಿಸಿ ಹೋರಾಟಗಾರ ಎನ್.ಜಿ ರಂಗ (NG Ranga) ಅವರೊಂದಿಗೆ ಕೈ ಜೋಡಿಸಿದ್ದರು. 1968 ರಲ್ಲಿಮೊದಲ ಬಾರಿ ಎಂಎಲ್ಸಿ (MLC ) ಆಗಿ ಆಯ್ಕೆಯಾದ ಅವರು, 1974, 1980,2009ರಲ್ಲಿಯೂ ಎಂಎಲ್ಸಿ ಯಾಗಿ ಕಾರ್ಯ ನಿರ್ವಹಿಸಿದರು. 1989ರಲ್ಲಿ ಎಂಎಲ್ಎ ಆಗಿ ಚುನಾಯಿತರಾದರು. ಅದಾದ ಬಳಿಕ 2004ರಲ್ಲಿ ಚಿರಾಲಾ ಕ್ಷೇತ್ರದಿಂದ ಶಾಸಕರಾಗಿ (MLA) ಗೆದ್ದು ಬಂದರು. 1998 ರಲ್ಲಿ ನರಸರಾವ್ ಪೇಟೆಯ ಸಂಸದರಾಗಿ (MP) ಆಯ್ಕೆಯಾದರು.
2009ರ ಸೆಪ್ಟೆಂಬರ್ 13ರಿಂದ, 2010ರ ನವೆಂಬರ್ 24ರವರೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅದಾದ ಬಳಿಕ 2011ರ ಆಗಸ್ಟ್ 31ರಿಂದ 2016ರ ಆಗಸ್ಟ್ 30ರವರೆಗೆ ತಮಿಳುನಾಡಿನ ರಾಜ್ಯಪಾಲರಾಗಿದ್ದರು. ಈ ಮಧ್ಯೆ 2014ರಲ್ಲಿ ಎರಡು ತಿಂಗಳು (ಜೂನ್-ಆಗಸ್ಟ್) ಕರ್ನಾಟಕ ರಾಜ್ಯಪಾಲರಾಗಿದ್ದರು. ಆಗ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ನಂತರ ವಜುಭಾಯಿ ವಾಲಾ ಕರ್ನಾಟಕಕ್ಕೆ ರಾಜ್ಯಪಾಲರಾಗಿ ಬಂದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
