fbpx
ಸಮಾಚಾರ

ಹೊಸ ಪ್ರಯೋಗ: ‘ಅಬ ಜಬ ದಬ’ ಚಿತ್ರದಲ್ಲಿ ನಟ ಶಂಕರ್‌ ನಾಗ್: ಮತ್ತೆ ಬಿಗ್ ಸ್ಕ್ರೀನ್‌ಗೆ ಕರಾಟೆ ಕಿಂಗ್ ಎಂಟ್ರಿ! ಹೇಗೆ ಅಂತೀರಾ?

ಕನ್ನಡ ಚಿತ್ರರಂಗದಲ್ಲಿ ಕರಾಟೆ ಕಿಂಗ್ ಎಂತಲೇ ಸುಪ್ರಸಿದ್ಧಿಯಾಗಿದ್ದವರು ದಿವಂಗತ ನಟ ಶಂಕರ್ ನಾಗ್. ಅಭಿಮಾನಿಗಳಿಂದ ಪ್ರೀತಿಯಿಂದ ಶಂಕ್ರಣ್ಣ ಎಂದೇ ಕರೆಸಿಕೊಳ್ಳುತ್ತಿದ್ದ ಶಂಕರ್ ನಾಗ್ ಅವರು ತಮ್ಮ ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿರುವಾಗಲೇ ನಮ್ಮನ್ನೆಲ್ಲ ಬಿಟ್ಟು ನಿಧನ ಹೊಂದಿದ್ದರು. ಅವರು ದೈಹಿಕವಾಗಿ ನಮ್ಮಿಂದ ದೂರವಾಗಿ ಬರೋಬ್ಬರಿ 31 ವರ್ಷಗಳಾಗಿದ್ದರೂ ಇನ್ನೂ ಅಭಿಮಾನಿಗಳು ಮಾತ್ರ ಅವರನ್ನು ಮರೆತಿಲ್ಲ.

ಸದಭಿರುಚಿಯ ಚಿತ್ರಗಳನ್ನೇ ಹೆಚ್ಚಾಗಿ ಮಾಡುತ್ತಿದ್ದ ಅವರು ಇದ್ದಿದ್ದರೆ ಈಗ ಕನ್ನಡ ಚಿತ್ರರಂಗದ ರೇಂಜ್ ಹೇಗಿರುತ್ತಿತ್ತು ಅಂತ ಮರುಗುವವರೂ ಕಮ್ಮಿಯಾಗಿಲ್ಲ. ಶಂಕರ್ ನಾಗ್ ಇಲ್ಲದೆ ಇದ್ದರೆ ಏನಂತೆ, ಅವರನ್ನು ಬೆಳ್ಳಿತೆರೆ ಮೇಲೆ ತರುವುದಕ್ಕೆ ನಿರ್ದೇಶಕರು ತುದಿಗಾಲಲ್ಲಿ ನಿಂತಿದ್ದಾರೆ. ‘ಕನ್ನಡ್ ಗೊತ್ತಿಲ್ಲ’ ನಿರ್ದೇಶಕ ಮಯೂರ ರಾಘವೇಂದ್ರ ಮತ್ತೊಂದು ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು ಅದರಲ್ಲಿ ಕರಾಟೆ ಕಿಂಗ್ ಶಂಕರ್ ನಾಗ್ ರನ್ನು ತೆರೆಮೇಲೆ ತರಲು ಹೊರಟಿದ್ದಾರೆ.

 

 

ಸದ್ಯಕ್ಕೆ ಚಿತ್ರಕ್ಕೆ ‘ಅಬ ಜಬ ದಬ’ ಎಂಬ ವಿಭಿನ್ನ ಶೀರ್ಷಿಕೆ ನೀಡಲಾಗಿದ್ದು ಮಂತ್ರಾಲಯದಲ್ಲಿ ಚಿತ್ರಕ್ಕೆ ಸರಳ ಮುಹೂರ್ತ ಪೂಜೆಯನ್ನು ಕೂಡ ಮಾಡಿ ಮುಗಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಥೀಮ್ ಪೋಸ್ಟರ್ ಹಂಚಿಕೊಂಡಿರುವ ನಿರ್ದೇಶೇಕರು ಸಿನಿಮಾದಲ್ಲಿ ಕರಾಟೆ ಕಿಂಗ್ ಶಂಕರ್​ ನಾಗ್​ ಇದ್ದಾರೆ ಎಂದು ಪೋಸ್ಟರ್ ನಲ್ಲಿ ಉಲ್ಲೇಖಿಸಿದ್ದಾರೆ.

ಈ ಚಿತ್ರಕ್ಕೆ ಗಿರಿಧರ್ ದಿವಾನ್ ಛಾಯಾಗ್ರಹಣ ಮಾಡುತ್ತಿದ್ದರೆ, ಸತೀಶ್‌ ರಘುನಾಥನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ‘ಎಸ್. ರಾಮ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಅನಂತ ಕೃಷ್ಣ ಈ ಸಿನಿಮಾಕ್ಕೆ ಹಣ ಹಾಕುತ್ತಿದ್ದಾರೆ. ಚಿತ್ರದ ಶೀರ್ಷಿಕೆಯನ್ನು ಮಂತ್ರಾಲಯದ ರಾಯರ ಸಾನಿಧ್ಯದಲ್ಲಿ ಬಿಡುಗಡೆ ಮಾಡಿರುವುದು ವಿಶೇಷ.

ಶಂಕರ್​ ನಾಗ್​ ಅವರು ಮೃತಪಟ್ಟು ಅನೇಕ ದಶಕಗಳು ಕಳೆದಿವೆ. ಹೀಗಿರುವಾಗ, ‘ಅಬ ಜಬ ದಬ’ ಸಿನಿಮಾದಲ್ಲಿ ಶಂಕರ್​ ನಾಗ್​ ನಟಿಸೋದು ಹೇಗೆ? ಈ ಪ್ರಶ್ನೆಯನ್ನು ನಿರ್ದೇಶಕರ ಮುಂದೆ ಇಟ್ಟರೆ ಅವರು ಉತ್ತರ ನೀಡದೆ ರಹಸ್ಯ ಕಾಪಾಡಿಕೊಂಡಿದ್ದಾರೆ. ಹೀಗಾಗಿ, ಸದ್ಯಕ್ಕೆ ಈ ವಿಚಾರವನ್ನು ಅವರು ಬಿಟ್ಟುಕೊಟ್ಟಿಲ್ಲ. ಸಿನಿಮಾದ ಒಳಗೊಂದು ಸಿನಿಮಾದ ಕಥೆ ಇರುವಂತಹ ಕೌತುಕ ಕೂಡ ಅಭಿಮಾನಿಗಳಲ್ಲಿ ಮೂಡಿದೆ. ಈ ಎಲ್ಲಾ ಪ್ರಶ್ನೆಗೆ ನಿರ್ದೇಶಕರ ಕಡೆಯಿಂದಲೇ ಉತ್ತರ ಸಿಗಬೇಕಿದೆ.

“ಶಂಕರ್‌ನಾಗ್ ಬಗ್ಗೆ ಹೆಚ್ಚು ವಿಷಯಗಳನ್ನು ನಾನು ಬಿಟ್ಟುಕೊಡಲು ಸಾಧ್ಯವಿಲ್ಲ. ಇಡೀ ಸಿನಿಮಾದಲ್ಲಿಯೂ ಇರುತ್ತಾರಾ? ಅನ್ನುವುದನ್ನೂ ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ ಶಂಕರ್ ನಾಗ್ ಇಡೀ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಾರೆ ಅನ್ನುವುದನ್ನು ಮಾತ್ರ ಹೇಳುತ್ತೇನೆ. ಅವರು ಸಿನಿಮಾದಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ ಅಂತ ಹೇಳಿದರೂ ಕಥೆ ಬಿಟ್ಟುಕೊಟ್ಟ ಹಾಗೆ. ಅದಕ್ಕೆ ಸಿನಿಮಾದಲ್ಲಿಯೇ ನೋಡಬೇಕು.” ಅಂತಾರೆ ನಿರ್ದೇಶಕ ಮಯೂರ ರಾಘವೇಂದ್ರ.

ಡಾ.ವಿಷ್ಣುವರ್ಧನ್ ಅವರು ಮರಣದ ಐದಾರು ವರ್ಷಗಳ ನಂತರ ಬಂದಿದ್ದ ನಾಗರಹಾವು ಚಿತ್ರದಲ್ಲಿ ‘ವಿಷ್ಣುದಾದ’ ರನ್ನು ಗ್ರಾಫಿಕ್ಸ್ ನಲ್ಲಿ ಸೃಷ್ಟಿಸಿ ತೋರಿಸಲಾಗಿತ್ತು. ಆ ಚಿತ್ರದ ಒಂದೊಳ್ಳೆ ಪ್ರಯತ್ನಕ್ಕೆ ಪ್ರೇಕ್ಷಕರಿಂದಲೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ‘ಅಬ ಜಬ ದಬ’ ಚಿತ್ರತಂಡ ಕೂಡ ಅದೇ ರೀತಿ ಶಂಕರ್ ನಾಗ್ ಅವರನ್ನು ಗ್ರಾಫಿಕ್ಸ್ ಮೂಲಕ ಸೃಷ್ಟಿಸಿ ತೆರೆಗೆ ತರುತ್ತಾರೆಯೇ? ಎಂಬುದನ್ನು ಕಾದು ನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top