fbpx
ಸಮಾಚಾರ

ನಾಯಕತ್ವ ವಿವಾದ: ಕೊನೆಗೂ ಮೌನ ಮುರಿದ ವಿರಾಟ್ ಕೊಹ್ಲಿ ಹೇಳಿದ್ದೇನು ಗೊತ್ತಾ?

ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಏಕದಿನ ನಾಯಕತ್ವದಿಂದ ವಜಾಗೊಂಡ ಬಳಿಕ ಇದೇ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ್ದಾರೆ. ಒಂದೆಡೆ ಟೀಮ್ ಇಂಡಿಯಾ ನಾಯಕತ್ವದ ಚರ್ಚೆಗಳು ಜೋರಾಗಿದ್ದರೆ, ಮತ್ತೊಂದೆಡೆ ಸುದ್ದಿಗೋಷ್ಠಿಯಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ಭಾರತ ಟೆಸ್ಟ್​ ತಂಡದ ನಾಯಕ ವಿರಾಟ್ ಕೊಹ್ಲಿ ಈ ಚರ್ಚೆಗಳಿಗೆ ವಿರಾಮ ಹಾಕಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸದ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟೆಸ್ಟ್ ಸರಣಿಗೆ ತಂಡವನ್ನು ಆಯ್ಕೆ ಮಾಡಲು ಡಿಸೆಂಬರ್ 8ರಂದು ಆಯ್ಕೆ ಸಮಿತಿಯ ಸಭೆ ನಡೆಯುವುದಕ್ಕೂ ಒಂದೂವರೆ ಗಂಟೆ ಮೊದಲು ನನ್ನನ್ನು ಸಂಪರ್ಕಿಸಲಾಯಿತು. ಟಿ20 ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದ ನನಗೆ ಡಿಸೆಂಬರ್ 8ರವರೆಗೆ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸುವ ಬಗ್ಗೆ ನನಗೆ ಯಾವುದೇ ಪೂರ್ವ ಮಾಹಿತಿ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಡಿಸೆಂಬರ್ 8ರಂದು ಆಯ್ಕೆ ಸಮಿತಿ ಸಭೆಗೂ ಮೊದಲು ನನಗೆ ಫೋನ್ ಕರೆ ಬಂತು. ಮುಖ್ಯ ಆಯ್ಕೆದಾರರು ನನ್ನೊಂದಿಗೆ ಟೆಸ್ಟ್ ತಂಡದ ಬಗ್ಗೆ ಚರ್ಚೆ ನಡೆಸಿದರು, ನಾವಿಬ್ಬರೂ ಅದಕ್ಕೆ ಒಪ್ಪಿಕೊಂಡೆವು. ಆ ಫೋನ್ ಕರೆ ಕೊನೆ ಆಗುವುದಕ್ಕೂ ಮೊದಲು ನಾನು ಇನ್ಮುಂದೆ ಏಕದಿನ ತಂಡದ ನಾಯಕನಾಗಿ ಮುಂದುವರಿಯಲ್ಲ ಎಂದು ಐವರು ಆಯ್ಕೆದಾರರು ನಿರ್ಧರಿಸಿದ್ದಾರೆ ಎಂದು ನನಗೆ ಹೇಳಲಾಯಿತು. ಅದಕ್ಕೆ ನಾನು ಆಯ್ತು, ಒಳ್ಳೆದು ಎಂದು ಉತ್ತರಿಸಿದೆ. ತಂಡದ ಆಯ್ಕೆ ಬಳಿಕ ಈ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ ಇದು ನಿಜವಾಗಿ ನಡೆದದ್ದು ನನ್ನನ್ನು ನಾಯಕತ್ವದಿಂದ ತೆಗೆಯುವ ಬಗ್ಗೆ ನನಗೆ ಮುಂಚಿತವಾಗಿ ಯಾವುದೇ ಮಾಹಿತಿ ಇರಲಿಲ್ಲ ಎಂದು ಕೊಹ್ಲಿ ತಿಳಿಸಿದ್ದಾರೆ.

ಇದೆ ವೇಳೆ ದಕ್ಷಿಣ ಆಫ್ರಿಕಾ ವಿರುದ್ದ ಏಕದಿನ ಸರಣಿ ಆಡುವುದಿಲ್ಲ ಎಂಬ ಸುದ್ದಿಗಳಿಗೆ ಸ್ಪಷ್ಟನೆ ನೀಡಿದ, ನಾನು ಅಂತಹ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ನಾನು ಬಿಸಿಸಿಐಗೆ ಯಾವುದೇ ರೀತಿಯ ವಿಶ್ರಾಂತಿಗೆ ಮನವಿ ಮಾಡಿಲ್ಲ. ನನಗೆ ಯಾವುದೇ ವಿಶ್ರಾಂತಿಯ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೇ ಅಲ್ಲದೆ ಮುಂಬರುವ ಏಕದಿನ ಸರಣಿಗೆ ಲಭ್ಯರಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಕಳೆದ ಕೆಲ ದಿನಗಳಿಂದ ಹರಿದಾಡಿದ್ದ ಕೊಹ್ಲಿ ಏಕದಿನ ಸರಣಿ ಆಡುವುದಿಲ್ಲ ಎಂಬ ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top