fbpx
ಸಮಾಚಾರ

ಹಿಂದೂಗಳ ಭಾವನೆಗೆ ದಕ್ಕೆ: ಪುಷ್ಪ ಸಂಗೀತ ನಿರ್ದೇಶಕನ ವಿರುದ್ಧ ದೂರು ದಾಖಲು

ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಸಿನಿಮಾ ಬಿಡುಗಡೆಗೂ ಮುನ್ನ ಚಿತ್ರದ ಹಾಡುಗಳು ಈಗಾಗಲೇ ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿ ಹಿಟ್ ಆಗಿದ್ದವು. ಹಾಡುಗಳೇ ಜನರನ್ನು ಚಿತ್ರಮಂದಿರಕ್ಕೆ ಕರೆತಂದಿವೆ ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ. ‘ಪುಷ್ಪ’ ಸಿನಿಮಾದ ಹಾಡುಗಳು ಹಿಟ್ ಆದ ಖುಷಿಯಲ್ಲಿರುವ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್‌ಗೆ ಸಂಕಷ್ಟವೊಂದು ಎದುರಾಗಿದೆ. ದೇವಿಶ್ರೀ ಪ್ರಸಾದ್ ಮೇಲೆ ದೂರು ದಾಖಲಾಗಿದೆ.

‘ಪುಷ್ಪ’ ಸಿನಿಮಾದ ಪ್ರಚಾರಕಾಗಿ ಮುಂಬೈಗೆ ತೆರಳಿದ್ದ ದೇವಿಶ್ರೀ ಪ್ರಸಾದ್​ ಆ ವೇಳೆ ಸಿನಿಮಾಗಳ ಐಟಂ ಹಾಡುಗಳ ಕುರಿತು ಮಾತನಾಡಿದರು. ‘ಜನರ ಪಾಲಿಗೆ ಅವು ಐಟಂ ಸಾಂಗ್​ ಆಗಿರಬಹುದು. ಆದರೆ ನನಗೆ ಅವು ಭಕ್ತಿಗೀತೆಗಳಿದ್ದಂತೆ. ಅದೇ ರಾಗದಲ್ಲಿ ದೇವರ ಹಾಡುಗಳನ್ನು ಹೇಳಬಹುದು. ಅದೊಂದು ಧ್ಯಾನ’ ಎಂದು ಅವರು ಹೇಳಿಕೆ ನೀಡಿದ್ದಾರೆ. ಆ ವೇದಿಕೆಯಲ್ಲಿ ‘ಉ ಅಂಟಾವಾ ಮಾವ ಉಊ ಅಂಟಾವಾ ಮಾವ..’ ಹಾಡಿನ ಸಾಹಿತ್ಯಕ್ಕೆ ಬದಲಾಗಿ ಅವರು ದೇವರ ಕುರಿತಾದ ಸಾಲುಗಳನ್ನು ಹಾಡಿದ್ದಾರೆ. ಅದನ್ನು ಕೇಳಿ ಅಲ್ಲಿದ್ದ ಅನೇಕರು ನಕ್ಕು ಎಂಜಾಯ್​ ಮಾಡಿದ್ದಾರೆ. ಆದರೆ ಹಿಂದೂಗಳು ದೇವಿಶ್ರೀ ಪ್ರದಾದ್​ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಇನ್ನು ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿರುವ ದೇವಿ ಶ್ರೀ ಪ್ರಸಾದ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಗೋಶಮಹಲ್ ಶಾಸಕ ರಾಜಾ ಸಿಂಗ್​ ಹೈದರಾಬಾದ್‌ನ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ದೇವಿಶ್ರೀ, ಐಟಂ ಸಾಂಗ್​ಗೆ ಭಕ್ತಿ ಗೀತೆಯನ್ನು ಹೇಗೆ ಹೋಲಿಸುತ್ತಾರೆ? ಅನಗತ್ಯವಾಗಿ ಹಿಂದೂ ಭಕ್ತಿ ಗೀತೆಗಳ ವಿರುದ್ಧ ಅರ್ಥವಿಲ್ಲದ ಹೇಳಿಕೆ ನೀಡಿದ್ದಾರೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದು, ಕೂಡಲೇ ಬೇಷರತ್​ ಕ್ಷಮೆಯಾಚಿಸಬೇಕೆಂದಿದ್ದಾರೆ. ಕ್ಷಮೆಯಾಚಿಸದಿದ್ದರೆ, ಹಿಂದೂ ಸಮುದಾಯದಿಂದ ತೀವ್ರ ವಿರೋಧ ಎದುರಿಸಬೇಕಾಗುತ್ತದೆ ಎಂದು ಕಿಡಿ ಕಾರಿದ್ದಾರೆ. ಕ್ಷಮೆಯಾಚಿಸದಿದ್ದರೆ, ದೇವಿಶ್ರೀ ಅವರನ್ನು ತೆಲಂಗಾಣದಲ್ಲಿ ಸ್ವತಂತ್ರವಾಗಿ ತಿರುಗಾಡಲು ಬಿಡುವುದಿಲ್ಲ ಎಂದು ಗುಡುಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top