ತೆಲುಗಿನ ‘ಈಗ’ ಸಿನಿಮಾದಲ್ಲಿ ಸುದೀಪ್ ಜೊತೆ ಸಣ್ಣದೊಂದು ಪಾತ್ರ ಮಾಡಿದ್ದ ನಟಿ ಹಂಸ ನಂದಿನಿಗೆ ಯಾಕೋ ಟೈಮೇ ಸರಿಯಿಲ್ಲ ಅಂತ ಕಾಣುತ್ತೆ. ಯಾಕೆಂದರೆ ಒಂದಾದರೊಂದರ ನಂತರ ನಂದಿನಿ ಅವರಿಗೆ ಹೊಡೆತಗಳು ಬೀಳುತ್ತಿವೆ. ಇತ್ತೀಚಿಗೆ ತಾನೇ ತಮ್ಮ ತಾಯಿಯನ್ನು ಕಳೆದುಕೊಂಡ ದುಃಖ ದಲ್ಲಿದ್ದ ನಂದಿನಿ ಅವರು ಇದೀಗ ಮಾರಣಾಂತಿಕ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದಾರೆ.
ಹಂಸ ನಂದಿನಿ ಇತ್ತೀಚೆಗೆ ಸೋಶಿಯಲ್ ಮೀಡಿಯಾದಿಂದ ದೂರವೇ ಉಳಿದಿದ್ದರು. ಅವರು ಯಾವುದೇ ಪೋಸ್ಟ್ಗಳನ್ನು ಹಾಕಿರಲಿಲ್ಲ. ಇದನ್ನು ಕಂಡು ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿದ್ದರು. ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳನ್ನು ಕೂಡ ಇಟ್ಟಿದ್ದರು. ಇದೆಲ್ಲದಕ್ಕೂ ಅವರು ಒಂದೇ ಪೋಸ್ಟ್ ಮೂಲಕ ಉತ್ತರ ನೀಡಿದ್ದಾರೆ. ತಲೆಯ ಕೂದಲನ್ನು ಸಂಪೂರ್ಣವಾಗಿ ತೆಗೆದ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಅಲ್ಲದೆ, ತಮಗೆ ಕ್ಯಾನ್ಸರ್ ಇದೆ ಎಂದು ಬರೆದುಕೊಂಡಿದ್ದಾರೆ.
ನಂದಿನಿ ಪೋಸ್ಟ್ ನಲ್ಲಿ ಇರುವುದೇನು?
‘ಜೀವನವು ನನ್ನನ್ನು ಎಲ್ಲೇ ಎಸೆದರೂ, ಎಷ್ಟೇ ಅನ್ಯಾಯ ತೋರಿದರೂ, ನಾನು ಬಲಿಪಶು ಆಗಲು ನಿರಾಕರಿಸುತ್ತೇನೆ. ನಾನು ಭಯದಿಂದ, ನಿರಾಶಾವಾದದಿಂದ ಮತ್ತು ನಕಾರಾತ್ಮಕತೆಯಿಂದ ಆಳಲ್ಪಡಲು ನಿರಾಕರಿಸುತ್ತೇನೆ. ನಾನು ಹೋರಾಟದಿಂದ ಹಿಂದೆ ಸರಿಯುವುದನ್ನು ನಿರಾಕರಿಸುತ್ತೇನೆ. ಆದರೆ, ಧೈರ್ಯ ಮತ್ತು ಪ್ರೀತಿಯಿಂದ, ನಾನು ಮುಂದೆ ಹೋಗುತ್ತೇನೆ. ನಾಲ್ಕು ತಿಂಗಳ ಹಿಂದೆ, ನನ್ನ ಸ್ತನದಲ್ಲಿ ಸಣ್ಣ ಗಡ್ಡೆಯೊಂದು ಇರುವುದು ಗೊತ್ತಾಯಿತು. ನನ್ನ ಜೀವನ ಒಂದೇ ರೀತಿ ಇರುವುದಿಲ್ಲ ಎಂದು ಆ ಕ್ಷಣವೇ ನನಗೆ ತಿಳಿಯಿತು. ಒಂದೆರಡು ಗಂಟೆಗಳಲ್ಲಿ ಎಲ್ಲ ರೀತಿಯ ಪರೀಕ್ಷೆಗಳನ್ನು ಮಾಡಲಾಯಿತು. ನನಗೆ ಸ್ತನ ಕ್ಯಾನ್ಸರ್ ಮೂರನೇ ಸ್ಟೇಜ್‌ನಲ್ಲಿರುವುದು ಗೊತ್ತಾಯಿತು. 18 ವರ್ಷಗಳ ಹಿಂದೆ ಭೀಕರ ಕಾಯಿಲೆಯಿಂದಾಗಿ ನನ್ನ ತಾಯಿಯನ್ನು ನಾನು ಕಳೆದುಕೊಂಡಿದ್ದೆ. ಅದರ ಕರಾಳ ನೆರಳಿನಲ್ಲೇ ಅಂದಿನಿಂದ ನಾನು ವಾಸಿಸುತ್ತಿದ್ದೆ ಮತ್ತು ನಾನು ಭಯಗೊಂಡಿದ್ದೆ’ ಎಂದಿದ್ದಾರೆ ಹಂಸ ನಂದಿನಿ.
‘ಮಹಾಮರಿ ಕ್ಯಾನ್ಸರ್ಗೆ ನನ್ನ ಬದುಕು ಬಲಿಯಾಗಲು ನಾನು ಬಯಸುವುದಿಲ್ಲ. ನಗುತ್ತಲೇ ಧೈರ್ಯದಿಂದ ಕ್ಯಾನ್ಸರ್ ವಿರುದ್ಧ ಹೋರಾಡುವೆ. ಗುಣಮುಖವಾಗಿ ಮತ್ತೊಮ್ಮೆ ನಿಮ್ಮ ಮುಂದೆ ಬರುತ್ತೇನೆ. ನನ್ನ ಕಥೆ ಎಲ್ಲರಿಗೂ ಸ್ಫೂರ್ತಿಯಾಗಲಿ’ ಎಂದು ಬರೆದುಕೊಂಡಿದ್ದಾರೆ. ನೋವಿನಲ್ಲೂ ಹಂಸ ನಂದಿನಿಯ ಸ್ಫೂರ್ತಿದಾಯಕ ಮಾತು ನೋಡಿದ ಅಭಿಮಾನಿಗಳು ಭಾವುಕರಾಗಿದ್ದಾರೆ. ಶೀಘ್ರವೇ ಗುಣಮುಖವಾಗಿ ಎಂದು ಹಾರೈಸುತ್ತಿದ್ದಾರೆ.
2004ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಹಂಸ ನಂದಿನಿ, ಟಾಲಿವುಡ್ನ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದರು. 2006ರಲ್ಲಿ ತೆರೆಗೆ ಬಂದ ಕನ್ನಡದ ‘ಮೋಹಿನಿ 9886788888’ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೂ ಕಾಲಿಟ್ಟಿದ್ದರು. ಪ್ರಭಾಸ್ ನಟನೆಯ ‘ಮಿರ್ಚಿ’, ಪವನ್ ಕಲ್ಯಾಣ್ ಅಭಿನಯದ ‘ಅತ್ತಾರಿಂಟಿಕಿ ದಾರೇದಿ’ ಚಿತ್ರಗಳಲ್ಲಿ ವಿಶೇಷ ಪಾತ್ರದ ಮೂಲಕ ತೆಲುಗು ಜನರಿಗೆ ಹತ್ತಿರವಾಗಿದ್ದರು. ಸುದೀಪ್ ಅಭಿನಯದ ‘ಈಗ’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದರು. 2018ರಲ್ಲಿ ತೆರೆಕಂಡ ‘ಪಂತಂ’ ಸಿನಿಮಾವೇ ಹಂಸ ನಂದಿನಿ ಅಭಿನಯದ ಕೊನೇ ಸಿನಿಮಾ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
