ಒಂದು ಕಾಲದಲ್ಲಿ ರಾಯಲ್ ಚೇಲೆಂಜರ್ಸ್ ಬೆಂಗಳೂರು ತಂಡದಲ್ಲಿ ಮಿಂಚಿದ್ದ ನ್ಯೂಜಿಲೆಂಡ್ ನ ಸ್ಟಾರ್ ಆಟಗಾರ ರಾಸ್ ಟೇಲರ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಸರಣಿ ಬಳಿಕ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲಿದ್ದಾರೆ. ಆಸ್ಟ್ರೇಲಿಯಾ ಮತ್ತು ನೆದರ್ಲೆಂಡ್ ವಿರುದ್ಧ ತಮ್ಮ ಕೊನೆಯ ಸೀಮಿತ ಓವರ್‌ಗಳ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲಿದ್ದಾರೆ.
ತಮ್ಮ ನಿವೃತ್ತಿಯ ನಿರ್ಧಾರದ ಬಗ್ಗೆ ರಾಸ್ ಟೇಲರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. “ಇದೊಂದು ಅದ್ಭುತವಾದ ಪ್ರಯಾಣವಾಗಿತ್ತು. ನನಗೆ ಸಾಧ್ಯವಿರುವವರೆಗೆ ನನ್ನ ದೇಶವನ್ನು ಪ್ರತಿನಿಧಿಸುವ ಅವಕಾಶ ದೊರೆತಿರುವುದಕ್ಕೆ ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ” ಎಂದು ಟೇಲರ್ ಪ್ರಕಟಣೆಯಲ್ಲಿ ಹೇಳಿಕೊಂಡಿದ್ದಾರೆ.
“ಅನೇಕ ಶ್ರೇಷ್ಠ ಆಟಗಾರರ ಜೊತೆಗೆ ಹಾಗೂ ವಿರುದ್ಧವಾಗಿ ಆಡುವ ಅವಕಾಶ ನನಗೆ ದೊರೆತಿದೆ. ಈ ಹಾದಿಯುದ್ದಕ್ಕೂ ನನಗೆ ಸಾಕಷ್ಟು ಸ್ಮರಣೀಯ ಕ್ಷಣಗಳು ಹಾಗೂ ಗೆಳೆತನಗಳು ದೊರೆತಿದೆ. ಆದರೆ ಎಲ್ಲಾ ಉತ್ತಮ ಸಂಗತಿಗಳು ಒಂದು ದಿನ ಅಂತ್ಯವಾಗಬೇಕಿದೆ. ನನ್ನ ಪಾಲಿಗೆ ಇದು ಸೂಕ್ತವಾದ ಸಮಯ ಎನಿಸುತ್ತಿದೆ” ಎಂದು ರಾಸ್ ಟೇಲರ್ ಪ್ರಕಟಣೆಯಲ್ಲಿ ಬರೆದುಕೊಂಡಿದ್ದಾರೆ.
37 ವರ್ಷದ ಕಿವೀಸ್ ಕ್ರಿಕೆಟಿಗ ರಾಸ್ ಟೇಲರ್, 2007 ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬಳಿಕ ನ್ಯೂಜಿಲೆಂಡ್ ತಂಡದ ಮುಖ್ಯ ಆಧಾರವಾಗಿದ್ದಾರೆ, 100 ಟೆಸ್ಟ್ ಪಂದ್ಯಗಳನ್ನು ಆಡಿದ ನಾಲ್ಕು ನ್ಯೂಜಿಲೆಂಡ್ ಆಟಗಾರರರಲ್ಲಿ ಒಬ್ಬರಾಗಿದ್ದು, 110 ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿ 44.87ರ ಸರಾಸರಿಯಲ್ಲಿ ಅವರು 7,584 ರನ್ ಗಳಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
