fbpx
ಸಮಾಚಾರ

ಕಾಶ್ಮೀರದ ವೈಷ್ಣೋದೇವಿ ದೇಗುಲದಲ್ಲಿ ಭೀಕರ ಕಾಲ್ತುಳಿತ: 12 ಭಕ್ತರು ದುರ್ಮರಣ

ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತಾ ವೈಷ್ಣೋದೇವಿ ದೇವಾಲಯದಲ್ಲಿ ಇಂದು ಬೆಳಗ್ಗೆ ಭಾರೀ ಜನಸಂದಣಿ ನೆರೆದು ನೂಕುನುಗ್ಗುಲಿನಿಂದ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠಪಕ್ಷ 12 ಮಂದಿ ಮೃತಪಟ್ಟು ಇತರ 20 ಮಂದಿ ಗಾಯಗೊಂಡ ದುರ್ಘಟನೆ ಜರುಗಿದೆ.

ತ್ರಿಕೂಟ ಬೆಟ್ಟದ ಗರ್ಭಗುಡಿಯ ಹೊರಭಾಗದಲ್ಲಿ ಈ ಘಟನೆ ನಡೆದಿದೆ. ಹೊಸ ವರ್ಷದ ಆರಂಭದ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ಏಕಾಏಕಿ ವೈಷ್ಣೋದೇವಿ ಭವನವನ್ನು ಪ್ರವೇಶಿಸಿದಾಗ ನೂಕುನುಗ್ಗಲು ಉಂಟಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಹೀಗೆ ಒಂದೇ ಸಮನೆ ಒಳನುಗ್ಗಿದ ಭಕ್ತರ ಬಳಿ ಅನುಮತಿ ಪತ್ರಗಳು ಇರಲಿಲ್ಲ ಎಂದು ಅವರು ಹೇಳಿದ್ದಾರೆ.

ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ(Hospital) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೊಸ ವರ್ಷಾಚಣೆಗೆಂದು ಭಕ್ತರು ಭಾರೀ ಸಂಖ್ಯೆಯಲ್ಲಿ ಶುಕ್ರವಾರ ರಾತ್ರಿಯಿಂದಲೇ ಜಮಾವಣೆಗೊಂಡಿದ್ದರು. ಮಧ್ಯರಾತ್ರಿ ದಾಟುತ್ತಿದ್ದಂತೆ ಜನ ವಿಪರೀತ ಸಂಖ್ಯೆಯಲ್ಲಿ ಮಂದಿರದತ್ತ ನುಗ್ಗಿ ಬಂದಾಗ ಈ ಕಾಲ್ತುಳಿತದ ದುರ್ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಕಾಲ್ತುಳಿತದಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಏರುವ ಸಂಭವವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ಮಾಹಿತಿಯ ಪ್ರಕಾರ ವೈಷ್ಣೋದೇವಿ ಪುಣ್ಯಕ್ಷೇತ್ರದಲ್ಲಿ ಮಾತಾ ವೈಷ್ಣೋದೇವಿ ಭವನದ ಬಳಿ ಬೆಳಗಿನ ಜಾವ 2.45ರ ಸುಮಾರಿಗೆ ದುರ್ಘಟನೆ ಸಂಭವಿಸಿದೆ. ಭವನದಲ್ಲಿ ಜಮಾಯಿಸಿದ್ದ ಜನರ ನಡುವೆ ಗಲಾಟೆ ಶುರುವಾಗಿದೆ. ಮಾತಿಗೆ ಮಾತು ಬೆಳೆದು ತಳ್ಳಾಟ ಜೋರಾಗಿದೆ. ಮುಂದೆ ಅದು ಕಾಲ್ತುಳಿತ ಸಂಭವಿಸಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top