fbpx
ಸಮಾಚಾರ

“ಕೊರೋನಾಗಿಂತ ಹಸಿವು, ನಿರುದ್ಯೋಗ, ಸಾಲಗಾರರ ಕಿರುಕುಳದಿಂದ ಸಾಯುವವರ ಸಂಖ್ಯೆ ಜಾಸ್ತಿಯಾಗಲಿದೆ” ಚಿತ್ರಸಾಹಿತಿ ಕವಿರಾಜ್

ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಾಗುತ್ತಿವೆ. ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುವುದನ್ನು ತಪ್ಪಿಸಲು ಕರ್ನಾಟಕ ರಾಜ್ಯ ಸರ್ಕಾರ ಈಗಾಗಲೇ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಕೋವಿಡ್ ಪ್ರಕರಣಗಳು ಇನ್ನಷ್ಟು ಹೆಚ್ಚಳವಾದರೆ ಲಾಕ್‌ ಡೌನ್ ಹೇರುವ ಸಾಧ್ಯತೆಯೂ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಿರುವಾಗಲೇ, ಕನ್ನಡ ನಿರ್ದೇಶಕ, ಚಿತ್ರ ಸಾಹಿತಿ ಕವಿರಾಜ್ ‘’ಲಾಕ್‌ ಡೌನ್ ಕೊನೆಯ ಆಯ್ಕೆಯಾಗಿರಲಿ’’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದನ್ನು ಹಾಕಿರುವ ನಿರ್ದೇಶಕ ಕವಿರಾಜ್, ಕೋವಿಡ್ ತಡೆಗೆ ಸರಕಾರ ಹೇರಿರುವ ಕಠಿಣ ನಿಯಮದ ಕುರಿತು ಪ್ರತಿಕ್ರಿಯಿಸಿದ್ದಾರೆ.

 

 

ಕವಿರಾಜ್ ಅವರ ಫೇಸ್ಬುಕ್ ಬರಹದ ಸಾರಾಂಶ ಈ ರೀತಿ ಇದೆ:
ಒಮಿಕ್ರಾನ್ ವೇಗವಾಗಿ ಹರಡುವುದಾದರು ಅದು ಪ್ರಾಣಾಪಾಯ ತರುವುದಿಲ್ಲ ಎಂದು ಸ್ವತಃ WHO ಹೇಳಿದೆ. ಅದೇ ಪ್ರಕಾರ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರು ಆಸ್ಪತ್ರೆ ಸೇರುತ್ತಿರುವವರ ಅನುಪಾತ ಬಹಳ ಕಡಿಮೆಯೇ ಇದೆ‌
ಸಾಮರ್ಥ್ಯದ ಮಾಪನದಲ್ಲಿ ಒಮಿಕ್ರಾನ್ ಈಗಾಗಲೇ ಶಕ್ತಿಗುಂದಿರುವ ಕೊರೊನಾ ವೈರಾಣು. ಒಮಿಕ್ರಾನ್ ಒಂದು ಸಾಮಾನ್ಯ ಶೀತ , ಕೆಮ್ಮಿನಂತೆ ಕಾಡುವುದು. ಅದು ಒಮ್ಮೆ ಎಲ್ಲರಿಗೂ ಬಂದು ಹೋದರೆ ಒಂದು ಲೆಕ್ಕಾಚಾರದಲ್ಲಿ ಒಳ್ಳೆಯದೆ . ಅದರಿಂದ ಹರ್ಡ್ ಇಮ್ಯೂನಿಟಿ ಬೆಳೆಯುತ್ತದೆ. ಆ ಮೂಲಕ ಪ್ಯಾಂಡೆಮಿಕ್ ಎಂಡೆಮಿಕ್ ಹಂತ ತಲುಪಲಿದೆ ಎಂದು WHO ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಸೇರಿದಂತೆ ಹಲವು ತಜ್ಞ ವೈದ್ಯರು ಹೇಳುತ್ತಿದ್ದಾರೆ. ಆದರೂ ಸರ್ಕಾರಗಳು ಈ ಬೆದರು ಬೊಂಬೆಯಂತ ಲಾಕ್ ಡೌನ್ ಬಗ್ಗೆ ಯಾಕೆ ಚಿಂತಿಸುತ್ತಿವೆಯೋ ??

ಈಗಾಗಲೇ ಸುಮಾರು 20 ತಿಂಗಳಿಂದ ಈ ಕರೊನಾ ,ಲಾಕ್ ಡೌನ್ ಹೊಡೆತಕ್ಕೆ ಸಿಲುಕಿ ಬಡ ಮತ್ತು ಮದ್ಯಮ ವರ್ಗದ ಆರ್ಥಿಕ ಪರಿಸ್ಥಿತಿ ಜರ್ಝರಿತವಾಗಿದೆ. ಹೇಗೊ ಒದ್ದಾಡಿ ಚಿಗುರುತ್ತಿರುವ ಹೊತ್ತಿಗೆ ಮತ್ತೆ ಲಾಕ್ ಡೌನ್ ಹೇರಿದರೆ ಅವರ ಬದುಕು ಇನ್ನಷ್ಟು ದುಸ್ತರವಾಗಲಿದೆ. ಆಗ ಕರೊನಾದಿಂದ ಸಾಯುವವರ ಸಂಖ್ಯೆಗಿಂತ ಹಸಿವು , ಹತಾಶೆ , ನಿರುದ್ಯೋಗ, ಆರ್ಥಿಕ ಜಂಜಾಟ , ಸಾಲಗಾರರ ಕಿರುಕುಳ , ಅವಮಾನದಿಂದ ಸಾಯುವವರ ಸಂಖ್ಯೆಯೇ ಜಾಸ್ತಿಯಾಗಲಿದೆ. ಈ ನಡುವೆ ಲಕ್ಷಾಂತರ ಜನರನ್ನು ಸೇರಿಸಿ ಬೃಹತ್ ಸಮಾವೇಶಗಳನ್ನು ನಡೆಸಿ ಬೀಗುತ್ತಿರುವ ರಾಜಕಾರಣಿಗಳು ಜನರು ಸಹಕರಿಸದಿರುವುದೇ ಕರೊನಾ ಹೆಚ್ಚಾಗಲು ಕಾರಣ ಎಂದು ತಪ್ಪನ್ನು ಜನರ ಮೇಲೆ ಹೇರಲು ಪ್ರಯತ್ನಿಸುತ್ತಿರುವುದು ಅತ್ಯಂತ ಅನೈತಿಕವಾಗಿದೆ.

ನಿಮ್ಮ ಅವಾಂತರ , ಅವಿವೇಕತನ, ಅಸಮರ್ಥತೆಗಳಿಗೆ ಜನರನ್ನು ಹೊಣೆಗಾರರಾಗಿಸಿ ಇನ್ನಷ್ಟು ಸಂಕಷ್ಟಕ್ಕೆ ದೂಡಬೇಡಿ. ಪರಿಣಾಮಕಾರಿ ಮುನ್ನೆಚ್ಚರಿಕೆ , ನಿಯಂತ್ರಣ ಕ್ರಮಗಳನ್ನು ಬಿಗಿಯಾಗಿ ಜಾರಿಗೊಳಿಸಿ ಸಾಧ್ಯವಾದಷ್ಟು ಸಹಜ ಜನಜೀವನಕ್ಕೆ ಅನುವು ಮಾಡಿಕೊಡಿ. ತೀರಾ ಕಡಿಮೆ ಜನ ಓಡಾಡುವ ನೈಟ್ ಹೊತ್ತಲ್ಲಿ ಕರ್ಫ್ಯೂ , ಒಂದು ಸೀಟ್ ಗ್ಯಾಪ್ ಬಿಟ್ಟು ಕುಳಿತ ಕೂಡಲೇ ಕರೊನಾ ಬರುವುದಿಲ್ಲವೇನೋ ಎನ್ನುವಂತಿರುವ 50:50 ರೂಲ್ಸ್ ಗಳೆಲ್ಲ ಒಂದು ರೀತಿ ಹಾಸ್ಯಾಸ್ಪದ ರೂಲ್ಸ್ ಗಳೇ . ಅದರ ಬದಲು ಎಲ್ಲರೂ ವ್ಯಾಕ್ಸಿನ್ ಹಾಕಿಸುವ ವ್ಯವಸ್ಥೆ ಆಗಲಿ . ಜೊತೆಗೆ ಮಾಸ್ಕ್ , ಸಾಮಾಜಿಕ ಅಂತರ , ಎಲ್ಲಿಗೆ ಆಗಲಿ ಪ್ರವೇಶಕ್ಕೆ ಮುನ್ನ ಸ್ಯಾನಿಟೈಸೇಷನ್ ಕಡ್ಡಾಯವಾಗಲಿ.
ಲಾಕ್ ಡೌನ್ ಕೊನೆಯ ಆಯ್ಕೆಯಾಗಿರಲಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top