fbpx
ಸಮಾಚಾರ

ವಿವಾದಿತ ಕಿಸ್ಸಿಂಗ್ ಕೇಸ್: 15 ವರ್ಷದ ನಂತ್ರ ನಟಿಗೆ ಸಿಕ್ತು ಬಿಗ್​ ರಿಲೀಫ್​!

ಸಿನಿಮಾ ಮಾಡಿದರೂ, ತನ್ನ ಪಾಡಿಗೆ ತಾನು ಮನೆಯಲ್ಲೇ ಇದ್ದರೂ ಬಾಲಿವುಡ್ ಪಾಲಿಗೆ ಎವರ್‌ಗ್ರೀನ್ ಫಿಟ್ನೆಸ್ ಮಾಡೆಲ್ ಅಂದರೆ ಶಿಲ್ಪಾ ಶೆಟ್ಟಿ. ಮೂಲತಃ ಮಂಗಳೂರಿನವಳಾಗಿರುವ ಕನ್ನಡತಿ ಶಿಲ್ಪಾ ಶೆಟ್ಟಿ ಅವರು ಬಾಲಿವುಡ್ ನಲ್ಲಿ ತಮ್ಮದೇ ಆದ ಛಾಪನ್ನ ಮೂಡಿಸಿದ್ದಾರೆ.. ಇಂಥಾ ಶಿಲ್ಪಾಗೆ ಬರೋಬ್ಬರಿ 15 ವರ್ಷಗಳ ಹಳೆಯ ಪ್ರಕರಣವೊಂದಕ್ಕೆ ಸಂಭಂದಿಸಿದಂತೆ ಬಿಗ್ ರಿಲೀಫ್ ಸಿಕ್ಕಿದೆ.

2007ರಲ್ಲಿ ಶಿಲ್ಪಾ ಶೆಟ್ಟಿ ರಾಜಸ್ಥಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಹಾಲಿವುಡ್​ ನಟ ರಿಚರ್ಡ್​ ಗಿಯರ್ ಕೂಡ ಭಾಗವಹಿಸಿದ್ದರು. ಈ ವೇಳೆ​ ರಿಚರ್ಡ್ ಗಿಯರ್ ಶಿಲ್ಪಾಗೆ ಮುತ್ತಿಟ್ಟಿದ್ದರು. ಶಿಲ್ಪಾ ಶೆಟ್ಟಿಯನ್ನು ವೇದಿಕೆ ಮೇಲೆಯೇ ಎಳೆದು ಮುತ್ತುಕೊಟ್ಟಿದ್ದರು. ರಿಚರ್ಡ್‌ನ ಮುತ್ತಿನಿಂದ ತಪ್ಪಿಸಿಕೊಳ್ಳಲು ಶಿಲ್ಪಾ ಪ್ರಯತ್ನ ಪಟ್ಟಿದ್ದರಾದರೂ ರಿಚರ್ಡ್ ಮುತ್ತಿನ ಸುರಿಮಳೆಯನ್ನೇ ಸುರಿಸಿದ್ದರು.

ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಈ ಕಾರ್ಯಕ್ರಮದಲ್ಲಿ ಶಿಲ್ಪಾ ಶೆಟ್ಟಿ ಅಶ್ಲೀಲತೆ ಮೆರೆದಿದ್ದಾರೆ ಎಂದು ಆರೋಪಿಸಿ ಶಿಲ್ಪಾ ಶೆಟ್ಟಿ ವಿರುದ್ಧ ಕೇಸ್​ ದಾಖಲಾಗಿತ್ತು. ಹಲವರು ದೂರುಗಳನ್ನು ನೀಡಿದ್ದರು. ದೂರುಗಳ ನಂತರ, ಗೆರ್ ಮತ್ತು ಶೆಟ್ಟಿ ಇಬ್ಬರ ವಿರುದ್ಧವೂ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅಶ್ಲೀಲತೆಗಾಗಿ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಕಳೆದ 15 ವರ್ಷಗಳಿಂದ ಈ ಪ್ರಕರಣ ಕೋರ್ಟ್​ನಲ್ಲಿಯೇ ಇತ್ತು. ಈಗ ಅವರಿಗೆ ಈ ಪ್ರಕರಣದಲ್ಲಿ ರಿಲೀಫ್​ ಸಿಕ್ಕಿದೆ.

2017 ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ರಾಜಸ್ಥಾನದ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ ನ್ಯಾಯಾಲಯದಿಂದ ಪ್ರಕರಣವನ್ನು ಮುಂಬೈಗೆ ವರ್ಗಾಯಿಸಲಾಗಿತ್ತು. ಇದೀಗ ಕೋರ್ಟ್ ಈ ಪ್ರಕರಣವನ್ನು ಕೈಬಿಟ್ಟಿದೆ. 2007ರಲ್ಲಿ ಈ ಘಟನೆ ನಡೆದ ಬಳಿಕ ಶಿಲ್ಪಾ ಶೆಟ್ಟಿ ಅವರು ಸ್ಪಷ್ಟನೆ ನೀಡಿದ್ದರು. ಪೊಲೀಸರ ವರದಿ ಹಾಗೂ ದಾಖಲೆಗಳನ್ನು ಪರಿಗಣಿಸಿದಾಗ ಶಿಲ್ಪಾ ಅವರ ವಿರುದ್ಧ ದಾಖಲಾದ ಪ್ರಕರಣ ಆಧಾರ ರಹಿತವಾದದ್ದು ಎಂಬುದು ಗೊತ್ತಾಗಿದೆ. ಹೀಗಾಗಿ ಪ್ರಕರಣವನ್ನು ಕೈ ಬಿಡಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top