fbpx
ಸಮಾಚಾರ

“ಕನ್ನಡಿಗರಿಗೆ ಕಿರುಕುಳ ನೀಡಿ ವಿಕೃತ ಸಂತೋಷಪಡುವ ಮನಃಸ್ಥಿತಿ ಅಳಿಯಲಿ” ಕೇಂದ್ರದ ವಿರುದ್ಧ HDK ವಾಗ್ದಾಳಿ

FMರೇನ್ ಬೋ ಕನ್ನಡ ಕಾಮನಬಿಲ್ಲು ರೇಡಿಯೋ ವಾಹಿನಿಯ ಕತ್ತು ಕುಯ್ಯುವ ಕೆಲಸಕ್ಕೆ ಕೇಂದ್ರ ಸರಕಾರ ಮುಂದಾಗಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

 

 

 

ಈ ಬಗ್ಗೆ ಕುಮಾರಸ್ವಾಮಿ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದು ಹೀಗೆ:
ಕನ್ನಡದ ಕೆಚ್ಚನ್ನು ಮಣಿಸಿ, ಕರ್ನಾಟಕವನ್ನು ಸಾಂಸ್ಕೃತಿಕವಾಗಿ ಬೆಂಗಾಡು ಮಾಡುವ ಸಕಲ ಪ್ರಯತ್ನವನ್ನೂ ಕೇಂದ್ರ ಸರಕಾರ ಮಾಡುತ್ತಿದೆ ಎನ್ನುವುದಕ್ಕೆ ಇಲ್ಲಿದೆ ಇನ್ನೊಂದು ಸಾಕ್ಷಿ. ಈಗ ನೇರವಾಗಿ ಕನ್ನಡದ ಎದೆ ಮೇಲೆ ಕಾಲಿಡುವ ದುಷ್ಟ ಸಂಚು ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ.
ಸೂರ್ಯೋದಯಕ್ಕೆ ಮುನ್ನವೇ ಪ್ರಸಾರ ಆರಂಭಿಸಿ ರಾತ್ರಿ 11ರ ತನಕ ಸತತ 18 ಗಂಟೆ ಕಾಲ ನಿರಂತರವಾಗಿ ಕನ್ನಡ ಕಾರ್ಯಕ್ರಮಗಳನ್ನು ನೀಡುತ್ತಿರುವ ʼ101.3 ಎಫ್ ಎಂ ರೇನ್ ಬೋ ಕನ್ನಡ ಕಾಮನಬಿಲ್ಲುʼ ರೇಡಿಯೋ ವಾಹಿನಿಯ ಕತ್ತು ಕುಯ್ಯುವ ಕೆಲಸಕ್ಕೆ ಕೇಂದ್ರ ಸರಕಾರ ಹೊರಟಿರುವುದು ಅಕ್ಷಮ್ಯ. ಕನ್ನಡಕ್ಕೆ ಕೊಡಲಿ ಪೆಟ್ಟು.

ʼರೇನ್ ಬೋ ಕನ್ನಡ ಕಾಮನಬಿಲ್ಲುʼ ಕೇವಲ ರೇಡಿಯೋ ವಾಹಿನಿ ಮಾತ್ರವಲ್ಲ, ಕನ್ನಡಿಗರ ಹೃದಯಬಡಿತ, ಕನ್ನಡದ ಅಸ್ಮಿತೆ ಕೂಡ. ಆದರೆ, ಕೇಂದ್ರ ಸರಕಾರ ಕನ್ನಡಿಗರ ಭಾವನೆಗಳ ಜತೆ ಚೆಲ್ಲಾಟ ಆಡುತ್ತಿದೆ. ಅಧಿಕಾರಿಗಳ ಮೂಲಕ ಕನ್ನಡಮ್ಮನ ರಕ್ತ ಬಗೆಯುವ ಹೀನ ಕೆಲಸ ಮಾಡುತ್ತಿದೆ.
ಈ ಹಿಂದೆ ಕನ್ನಡಿಗರ ಮನೆಮನದಲ್ಲಿ ತುಂಬಿದ್ದ ʼಅಮೃತವರ್ಷಿಣಿʼಯನ್ನು ಮುಗಿಸಲಾಯಿತು. ಈಗ ಕನ್ನಡ ಕಾಮನಬಿಲ್ಲನ್ನು ಮುಗಿಸಲು ಹೊರಟಿದ್ದಾರೆ. ಕನ್ನಡ ವಿರೋಧಿ ಕೇಂದ್ರ ಸರಕಾರ, ಕನ್ನಡದ್ರೋಹಿ ಅಧಿಕಾರಿಗಳ ಕಪಿಮುಷ್ಠಿಯಲ್ಲಿ ಸಿಲುಕಿರುವ ಕನ್ನಡದ ಆಕ್ರಂದನವನ್ನು ಇನ್ನು ಸಹಿಸಲು ಸಾಧ್ಯವಿಲ್ಲ.
ಆಯಕಟ್ಟಿನಲ್ಲಿ ಕೂತಿರುವ ಹಿರಿಯ ಅಧಿಕಾರಿಗಳು ಕಸಾಯಿಗಳಂತೆ ಸಾವಿರಾರು ವರ್ಷಗಳ ಅಭಿಜಾತ ಭಾಷೆ ಕನ್ನಡದ ಮೇಲೆ ದಾಳಿ ನಡೆಸಿ ಕ್ರೂರವಾಗಿ ವಧೆ ಮಾಡುತ್ತಿದ್ದಾರೆ. ಕನ್ನಡನಾಡನ್ನು ಉದ್ಧಾರ ಮಾಡುತ್ತೇವೆಂದು ಗೆದ್ದುಹೋದ ಸಂಸದ ಮಹಾಶಯರು ಕನ್ನಡಕ್ಕೆ ಆಗುತ್ತಿರುವ ಅನ್ಯಾಯವನ್ನು ಸಹಿಸುತ್ತಿರುವುದು ಹೊಣೆಗೇಡಿತನವೇ ಸರಿ.

ಕನ್ನಡಿಗರು ಸಹಿಷ್ಣುಗಳು, ಸೌಮ್ಯರು ಹೌದು. ಹಾಗೆಂದು, ತಾಯಿಭಾಷೆಗೆ ಕೊಳ್ಳಿ ಇಡುತ್ತಿರುವ ʼಭಾಷಾಂತಕʼರನ್ನು ನೋಡುತ್ತಾ ಸುಮ್ಮನೆ ಕೂರಲಾರರು, ನೆನಪಿರಲಿ. ಸಂಸದರೆಲ್ಲರೂ ದನಿಯೆತ್ತಿ ಈ ರೇಡಿಯೋ ವಾಹಿನಿಯನ್ನು ಉಳಿಸಬೇಕು. ಮುಚ್ಚುವುದು ಅಥವಾ ಇನ್ನೊಂದರಲ್ಲಿ ವಿಲೀನ ಮಾಡುವುದನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಎಫ್ ಎಂ ರೇನ್ ಬೋದ ಬಹುತೇಕ ನಿರೂಪಕರು ಅರೆಕಾಲಿಕ ಉದ್ಯೋಗಿಗಳು. ಸ್ಪಷ್ಟ ಕನ್ನಡ, ಅಚ್ಚ ಕನ್ನಡದ ರಾಯಭಾರಿಗಳು. ಅರ್ಥಪೂರ್ಣ ಕಾರ್ಯಕ್ರಮ, ಸುಶ್ರಾವ್ಯ ಹಾಡುಗಳ ಮೂಲಕ ಕೇಳುಗರೊಂದಿಗೆ ಸಂವಾದಿಯಾದವರು. ಈಗ ವಾಹಿನಿಯನ್ನೇ ನಿಲ್ಲಿಸುವ ಒಳಸಂಚು ಇವರೆಲ್ಲರಿಗೂ ಆಗುವ ಅನ್ಯಾಯ ಹಾಗೂ ಕನ್ನಡ, ಕನ್ನಡಿಗರಿಗೆ ಮಾಡುವ ಅಪಚಾರ.

ಕನ್ನಡಿಗರಿಗೆ ಕಿರುಕುಳ ನೀಡಿ ವಿಕೃತ ಸಂತೋಷಪಡುವ ಮನಃಸ್ಥಿತಿ ಅಳಿಯಲಿ. ಭಾರತ ಒಕ್ಕೂಟ ರಾಜ್ಯಗಳ ಆಗರ ಎನ್ನುವುದು ನೆನಪಿರಲಿ.
ಆ ಆಶಯಕ್ಕೆ ಮುಕ್ಕಾಗುವುದು ಖಂಡಿತಾ ಬೇಡ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top