ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣವರ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ರವಿ ಚನ್ನಣ್ಣನವರ್ ಭ್ರಷ್ಟಾಚಾರ ಮಾಡಿ ಕೋಟ್ಯಂತರ ರೂ ಬೆಲೆ ಬಾಳುವ ಅಸ್ತಿ ಸಂಪಾದಿಸಿದ್ದಾರೆ ಎಂಬ ಆರೋಪ ಅವರ ವಿರುದ್ಧ ಕೇಳಿಬಂದಿತ್ತು. ಜೊತೆಗೆ ಅವರ ತಾಯಿಯ ಹೆಸರಿನಲ್ಲಿರುವ ಪಹಣಿಗಳ ಫೋಟೋವನ್ನು ಹಂಚಿಕೊಂಡು ವೈರಲ್ ಮಾಡಲಾಗಿತ್ತು.
ಇದೀಗ ರವಿ ಚನ್ನಣ್ಣವರ್ ಲಿಖಿತ ಹೇಳಿಕೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. “ನನ್ನ ಮೇಲಿನ ಎಲ್ಲ ಆರೋಪಗಳು ಸುಳ್ಳು. ನನ್ನ ಎಲ್ಲ ಆಸ್ತಿಯನ್ನು ಕಾನೂನು ಬದ್ಧವಾಗಿ ಖರೀದಿಸಿದ್ದೇನೆ. ಈ ಎಲ್ಲದರ ಮಾಹಿತಿ ಆದಾಯ ತೆರಿಗೆ ಇಲಾಖೆಗೆ ನೀಡಲಾಗಿದೆ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.”
ರವಿ ಚನ್ನಣ್ಣವರ್ ಮಾಧ್ಯಮ ಹೇಳಿಕೆ ಹೀಗಿದೆ
ಇತ್ತೀಚಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ವ್ಯಕ್ತಿಗಳು ನನ್ನ ಮೇಲೆ ಮತ್ತು ನನ್ನ ಕುಟುಂಬದ ಮೇಲೆ ಆಧಾರರಹಿತ ಆರೋಪ ಮಾಡಿರುವುದು ನನ್ನ ಗಮನಕ್ಕೆ ಬಂದಿರುತ್ತದೆ. ಇವೆಲ್ಲವೂ ಸುಳ್ಳಾಗಿದ್ದು, ದುರುದ್ದೇಶದಿಂದ ಕೂಡಿರುತ್ತವೆ. ಸಾಮಾಜಿಕ ಜಾಲತಾಣದಲ್ಲಿ, ನನ್ನ ತಂದೆ-ತಾಯಿಯವರ ಹೆಸರಲ್ಲಿರುವ ಕೆಲ ಪಹಣಿ ಹಾಕಿ, ಆರೋಪಿಸಿದ್ದು, ಅವುಗಳೆಲ್ಲ ಕಾನೂನು ಬದ್ಧವಾಗಿಯೇ ಖರೀದಿಸಿದ್ದು, ಪಿತ್ರಾರ್ಜಿತ ಹಾಗೂ ಸ್ವಯಾರ್ಜಿತ ಆಸ್ತಿ ಗಳಾಗಿವೆ. ಅವುಗಳನ್ನೆಲ್ಲ ಆಯಾ ವರ್ಷವೇ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿರುತ್ತಾರೆ.
ಇವುಗಳನ್ನು ನಾನು ಭ್ರಷ್ಟ ರೀತಿಯಿಂದ ಸಂಪಾದಿಸಿದ್ದೇನೆ ಎಂದು ಸುಳ್ಳು ಸುದ್ದಿಗಳನ್ನು ಹರಡಿ ನನ್ನನ್ನು ತೇಜೋವಧೆ ಮಾಡಬೇಕೆಂದೇ ಸಾಮಾಜಿಕ ಜಾಲತಾಣದಲ್ಲಿ ಬಿಂಬಿಸುತ್ತಿದ್ದು, ನಾನೊಬ್ಬ ಅಖಿಲ ಭಾರತೀಯ ಸೇವಕನಾಗಿದ್ದು, ಸೇವಾ ನಿಯಮಗಳ ಅಡಿ ವರ್ತಿಸಬೇಕಾದ್ದು ನನ್ನ ಕರ್ತವ್ಯ. ಆದ್ದರಿಂದ ಈ ಕುರಿತಂತೆ ನಾನು ಇದಾವುದಕ್ಕೂ ನಾನು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸದೇ ಕಾನೂನುಬದ್ಧವಾಗಿ ಈ ಕೆಳಕಂಡಂತೆ ಕ್ರಮ ಕೈಗೊಂಡಿರುತ್ತೆನೆ.
1.ನಾನು ಈಗಾಗಲೇ ಕಾನೂನಾತ್ಮಕವಾಗಿ ನಮ್ಮ ನ್ಯಾಯವಾದಿಗಳ ಮೂಲಕ ಲೀಗಲ್ ನೋಟಿಸ್ ನೀಡಿರುತ್ತೇನೆ. ಇದಕ್ಕೆ ಉತ್ತರ ಬಂದಿರುವುದಿಲ್ಲ
2.ನಾನು ಈ ಕುರಿತು ಸಂಬಂಧಪಟ್ಟ ಮಾನ್ಯ ನ್ಯಾಯಾಲಯದಲ್ಲಿ , ರೂಪಾಯಿ 3 ಕೋಟಿಗೆ ಮಾನನಷ್ಟ ಮೊಕದ್ದಮೆಯನ್ನ ದಾಖಲಿಸಲಿದ್ದೇನೆ
3.ಹಾಗೆಯೇ ಸುಳ್ಳು ಆಪಾದನೆ ಮಾಡಿದ್ದಕ್ಕೆ, ಎರಡು ವರ್ಷ ಜೈಲು ಶಿಕ್ಷೆ ವಿಧಿಸುವಂತೆ ಸಂಬಂಧಪಟ್ಟ ಮಾನ್ಯ ನ್ಯಾಯಾಲಯದಲ್ಲಿ ಕ್ರಿಮಿನಲ್ DEFEMATION ಕೇಸ್ ಹೂಡಲಿದ್ದೇನೆ.
ನನಗೆ ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಂಪೂರ್ಣ ನಂಬಿಕೆ ಇದೆ. ನ್ಯಾಯಾಲಯ ತೀರ್ಪು ಕೊಡುವವರಿಗೆ, ಎಲ್ಲಾ ಸುಳ್ಳು ಸುದ್ದಿಗಳನ್ನು ನಂಬದಂತೆ, ಎಲ್ಲ ಆತ್ಮೀಯರಲ್ಲಿ ಮನವಿ ಮಾಡಿಕೊಳ್ಳುತ್ತೇನೆ.
ಮಾಧ್ಯಮಗಳು ಪ್ರಚಾರ ಮಾಡದಂತೆ ತಡೆಯಜ್ಞೆ ತಂದದ್ದು ಅವುಗಳ ಅಭಿವ್ಯಕ್ತಿ ಸತ್ವವನ್ನು ಕುಗ್ಗಿಸಲು ಅಲ್ಲ. ಅನೇಕ ಸಂಕಷ್ಟಗಳ ನಡುವೆ ಬೆಳೆದ ನಾನು ನನ್ನ ಸ್ವಾಭಿಮಾನ ಮತ್ತು ವ್ಯಕ್ತಿತ್ವದ ಬಗ್ಗೆ ಸದಾ ಎಚ್ಚರದಲ್ಲಿ ಇದ್ದೇನೆ. ಕೆಲವು ಸುಳ್ಳು ಸುದ್ದಿಗಳು ನನ್ನ ಬಗ್ಗೆ ಹರಿದಾಡಿದ ಕಾರಣ ನಾನು ತಡೆಯಜ್ಞೆ ತಂದದ್ದನ್ನು ಅನ್ಯತಾ ಭಾವಿಸಬಾರದೆಂದು ಈ ಮೂಲಕ ತಮ್ಮ ಗಮನಕ್ಕೆ ತರಲು ಇಚ್ಚಿಸಿದ್ದೇನೆ.
ಹಾಗೆಯೇ ನನಗೆ ನ್ಯಾಯವಾದಿಗಳ ಬಗ್ಗೆ ಸ್ವಚ್ಛ ವ್ಯವಸ್ಥೆ ಬಯಸುವವರ ಬಗ್ಗೆ, ಅಪಾರ ಗೌರವವಿದೆ. ಈ ಮೂಲಕ ನನ್ನ ಆತ್ಮೀಯರೆಲ್ಲರಿಗೂ ಮನವಿ ಮಾಡುವುದೇನೆಂದರೆ, ತಾವು ದಯಮಾಡಿ ಯಾವುದೇ ಪ್ರತಿಕ್ರಿಯೆ ನೀಡಬಾರದು, ಅಶ್ಲೀಲ ಪದ ಬಳಕೆ, ಹೀಯಾಳಿಸುವುದನ್ನು ಮಾಡಬಾರದು ಎಂದು ಎಲ್ಲಾ ಮಾಧ್ಯಮಗಳ ಮೂಲಕ ಕೇಳಿಕೊಳ್ಳುತ್ತೇನೆ ಎಂದು ರವಿ ಚನ್ನಣವರ್ ಹೇಳಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
