fbpx
ಸಮಾಚಾರ

ಗೀತಾ, ದೊರೆಸಾನಿ ಖ್ಯಾತಿಯ ಕಿರುತೆರೆ ನಟಿ ಚೇತನಾ ಸಾವು

ಕನ್ನಡ ಕಿರುತೆರೆ ನಟಿ ಚೇತನಾ ರಾಜ್ ನಿಧನರಾಗಿದ್ದಾರೆ. ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿದ್ದ ನಟಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬೆಂಗಳೂರಿನ ನವರಂಗ ಸರ್ಕಲ್‌ನ ಡಾ. ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಯಲ್ಲಿ ಚೇತನಾ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಫ್ಯಾಟ್ ಸರ್ಜರಿ ನಡೆಯುವಾಗಲೇ ಚೇತನಾ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ.

ಬೆಂಗಳೂರಿನ ಉತ್ತರ ತಾಲೂಕಿನ ಅಬ್ಬಿಗೆರೆಯಲ್ಲಿ ನಟಿ ಕುಟುಂಬ ವಾಸವಿದೆ. ವೈದ್ಯರ ನಿರ್ಲಕ್ಷ್ಯದಿಂದಾಗಿಯೇ ನಮ್ಮ ಪುತ್ರಿ ಸಾವಿಗೀಡಾಗಿದ್ದಾಳೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಫ್ಯಾಟ್ ಸರ್ಜರಿ ವೇಳೆ ಶ್ವಾಸಕೋಶಕ್ಕೆ ನೀರಿನ ಅಂಶ ಶೇಖರಣೆಯಾಗಿ ಸಾವು ಸಂಭವಿಸಿದೆ ಎನ್ನಲಾಗಿದೆ. ಫ್ಯಾಟ್ ಚಿಕಿತ್ಸೆಗೆಂದು ನಿನ್ನೆ ಬೆಳಗ್ಗೆ ಖಾಸಗಿ ಆಸ್ಪತ್ರೆಗೆ ಆಡ್ಮಿಟ್ ಆಗಿದ್ದರು. ಸಂಜೆ ನಾಲ್ಕು ಗಂಟೆ ಹೊತ್ತಿಗೆ ಸಿರಿಯಸ್‌ ಆಗಿ ಶಂಕರಮಠದ ಕಾಡೇ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಪೋಷಕರಿಗೆ ಹೇಳದೆ ನಿನ್ನೆ (ಮೇ 16) ಬೆಳಿಗ್ಗೆ 9,30 ಕ್ಕೆ ಆಸ್ಪತ್ರೆಗೆ ದಾಖಲಾಗಿ ಸರ್ಜರಿ ಮಾಡಿಸಿಕೊಂಡಿದ್ದರು. ನಂತರ ವಿಚಾರ ಗೊತ್ತಾಗಿ ಶೆಟ್ಟಿ ಆಸ್ಪತ್ರೆಗೆ ಪೋಷಕರು ಧಾವಿಸಿದ್ದರು. ಶಸ್ತ್ರಚಿಕಿತ್ಸೆ ವೇಳೆ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡು ಪರಿಸ್ಥಿತಿ ಗಂಭೀರವಾಗಿತ್ತು. ನಾಲ್ಕು ಗಂಟೆಗೆ ಹೆಚ್ಚಿನ ಚಿಕಿತ್ಸೆಗೆ ಪ್ರಯತ್ನಿಸಲಾಯಿತು. ಆದರೆ ಅಷ್ಟರಲ್ಲಿ ಅವರು ಮೃತಪಟ್ಟರು. ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಲೇ ಚೇತನಾ ರಾಜ್ ಮೃತಪಟ್ಟಿದ್ದಾರೆ. ಪೋಷಕರ ಅನುಮತಿ ಇಲ್ಲದೆ ಸರ್ಜರಿ ಹೇಗೆ ಮಾಡಿದರು. ಶೆಟ್ಟಿ ಆಸ್ಪತ್ರೆಯವರೇ ಚೇತನಾ ರಾಜ್ ಸಾವಿಗೆ ಕಾರಣ ಎಂದು ಮೃತ ಚೇತನಾ ರಾಜ್ ಕುಟುಂಬಸ್ಥರು ತಿಳಿಸಿದ್ದಾರೆ.

ಯುವ ಕಿರುತೆರೆ ನಟಿ ಚೇತನ ರಾಜ್ ಕೆಲ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದರು. ಸದ್ಯ ಕಲರ್ಸ್ ಕನ್ನಡದಲ್ಲಿ ಬರುತ್ತಿರುವ ಗೀತಾ, ದೊರೆಸಾನಿ ಜೊತೆಗೆ ಒಲವಿನ ನಿಲ್ದಾಣ ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು. ಅಲ್ಲದೇ ಇನ್ನೂ ಬಿಡುಗಡೆಯಾಗದ ಹವಾಯಾಮಿ ಎಂಬ ಹೊಸ ಸಿನಿಮಾದಲ್ಲೂ ನಟನೆ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top