fbpx
ಸಮಾಚಾರ

ಸ್ಯಾಂಡಲ್‌ವುಡ್ ನಿರ್ದೇಶಕ ಕೆ.ಎನ್‌.ಮೋಹನ್‌ ಕುಮಾರ್‌ ವಿಧಿವಶ

ಖ್ಯಾತ ಕಿರುತೆರೆ ಹಾಗೂ ಚಲನಚಿತ್ರ ನಿರ್ದೇಶಕ ಕೆ.ಎನ್‌.ಮೋಹನ್‌ ಕುಮಾರ್‌ ಸೋಮವಾರ ನಿಧನ ಹೊಂದಿದ್ದಾರೆ. ೫೬ ವರ್ಷ ವಯಸ್ಸಿನ ಮೋಹನ್ ಕುಮಾರ್ ಅವರು ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತ ಮೋಹನ್ ಕುಮಾರ್ ಅವರು ತಾಯಿ ಕಮಲಮ್ಮ, ಪತ್ನಿ ಹಾಗೂ ನಟಿ, ನಿರೂಪಕಿ ವತ್ಸಲಾ ಮೋಹನ್, ಪುತ್ರಿ ಮತ್ತು ನಟಿ ಅನನ್ಯಾ ಮೋಹನ್ ಅವರನ್ನು ಅಗಲಿದ್ದಾರೆ.

ಎನ್‌.ಆರ್‌.ಕಾಲೋನಿಯ ರಾಮಲೀಲಾ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ ಮೋಹನ್‌ ಅವರು, ಸ್ನಾನದ ಕೋಣೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ತೀವ್ರ ಅಸ್ವಸ್ಥರಾಗಿದ್ದರು. ತಕ್ಷಣವೇ ಅವರನ್ನು ಸಮೀಪದ ರಂಗ ದೊರೈ ಆಸ್ಪತ್ರೆಗೆ ಕುಟುಂಬ ಸದಸ್ಯರು ಕರೆದೊಯ್ಯುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಜಯನಗರ 3ನೇ ಬ್ಲಾಕ್ ಪೂರ್ಚ 8ನೇ ಮುಖ್ಯರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆನೇಕಲ್ ತಾಲೂಕಿನ ಸಮಂದೂರಿನಲ್ಲಿ ಇಂದು ಅಂದರೆ ಮಂಗಳವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ರಂಗಭೂಮಿ ಹಿನ್ನೆಲೆಯಿಂದ ಬಂದು ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜಾನಪದ ಕಾರ್ಯಕ್ರಮದಲ್ಲಿ ನಿರೂಪಕರಾಗುವ ಮೂಲಕ ಕಿರುತೆರೆ ಪ್ರವೇಶಿಸಿದರು. ಎಂಜಿನಿಯರ್ ಪದವಿಧರರಾಗಿದ್ದ ಕೆ.ಎನ್.ಮೋಹನ್ ರಂಗಭೂಮಿ, ಧಾರವಾಹಿ, ಪತ್ರಿಕೋದ್ಯಮ ಹೀಗೆ ಹಲವರು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ತಮ್ಮ ಪತ್ನಿ ವತ್ಸಲಾ ಮೋಹನ್ ಅವರ ಸಜ್ಜಾದನಾ ಗಣೇಶ ಕಾದಂಬರಿ ಆಧರಿಸಿ 2016ರಲ್ಲಿ ಬೊಂಬೆಯಾಟ ಎಂಬ ಮಕ್ಕಳ ಸಿನಿಮಾವನ್ನು ನಿರ್ದೇಶಿಸಿದ್ದರು. ಈ ಸಿನಿಮಾಕ್ಕೆ ಹಲವಾರು ಪ್ರಶಸ್ತಿಗಳು ಲಭಿಸಿತ್ತು. ಮೈಸೂರು ಮಲ್ಲಿಗೆ ಎಂಬ ಸಿನಿಮಾದಲ್ಲಿ ನಾಯಕನಿಗೆ ಕಂಠದಾನ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top