ಪ್ರಪಂಚದಾದ್ಯಂತ ವ್ಯವಹಾರದಲ್ಲಿ ಪ್ರಮುಖ ಅಸ್ತಿತ್ವವನ್ನು ಹೊಂದಿರುವ ಜೈನ ಸಮುದಾಯ ಇಂಟರ್‌ನ್ಯಾಶನಲ್ ಟ್ರೇಡ್ ಆರ್ಗನೈಸೇಶನ್ (JITO) ಯ ಸ್ವಂತ ವೇದಿಕೆಯಡಿ ಫ್ಲಿಪ್ ಕಾರ್ಟ್, ಅಮೆಜಾನ್ ಮಾದರಿಯಲ್ಲಿ ಜಾಗತಿಕ ಇ-ವಾಣಿಜ್ಯ ವ್ಯಾಪಾರ ಸಂಸ್ಥೆ ಸ್ಥಾಪಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ದಾರೆ.
ಬೆಂಗಳೂರು ಅರಮನೆ ಮೈದಾನದ ಚಾಮರ ವಜ್ರ ಆವರಣದಲ್ಲಿ ಎರಡು ದಿನಗಳ ಜೈನರ ಜಾಗತಿಕ ಶೃಂಗ ಸಭೆ- ಜೀತೋ ಗ್ರ್ಯಾಂಡ್ ಸಮ್ಮಿಟ್ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು “ಜೈನ ಸಮುದಾಯ ವ್ಯಾಪಾರ ವಹಿವಾಟಿನಲ್ಲಿ ವಿಶೇಷ ಪರಿಣಿತಿ ಸಾಧಿಸಿದೆ. ಜಗತ್ತಿನಾದ್ಯಂತ ಅತ್ಯುತ್ತಮ ಸಂಪರ್ಕ ಜಾಲ ಹೊಂದಿದ್ದು, ಇ – ವಾಣಿಜ್ಯ ಮಾರುಕಟ್ಟೆ ಸಂಸ್ಥೆ ಸ್ಥಾಪಿಸಿದರೆ ಅದ್ಭುತ ಯಶಸ್ಸು ಸಾಧಿಸಬಹುದು. ಇದರಿಂದ ಬರುವ ಲಾಭವನ್ನು ಜೀತೋ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಬಳಸಿಕೊಳ್ಳಬಹುದು “ಎಂದು ಹೇಳಿದರು.
ಬೇರೆ ಸಮುದಾಯದವರು ಜೇಬಲ್ಲಿ ಹಣವಿದ್ದರೆ ಮಾತ್ರ ಉದ್ಯಮ ಆರಂಭಿಸುತ್ತಾರೆ. ಹಣ ಇಲ್ಲವೆಂದರೆ ಬೇರೆ ಯಾವುದಾದರೂ ಉದ್ಯೋಗ ಮಾಡುತ್ತಾರೆ. ಆದರೆ ಜೈನ ಸಮುದಾಯದವರು ಜೇಬಲ್ಲಿ ಒಂದು ಪೈಸೆ ಇಲ್ಲದಿದ್ದರೂ ತಮ್ಮ ಒಳ್ಳೆಯ ನಡವಳಿಕೆ, ಪರಿಶ್ರಮದಿಂದ ವ್ಯಾಪಾರ ಮಾಡುವುದರ ಜತೆಗೆ ಲಾಭವನ್ನೂ ಗಳಿಸುತ್ತಾರೆ ಎಂದು ಶ್ಲಾಘಿಸಿದರು. ಒಂದು ವೇಳೆ ಜೈನರು ಇಲ್ಲದಿದ್ದರೆ, ಇಡೀ ದೇಶ ಸಾಕಷ್ಟುಹಿಂದುಳಿದಿರುತ್ತಿತ್ತು. ಜೈನ ಸಮುದಾಯ ಈಗಾಗಲೇ ಅನೇಕ ಪುಣ್ಯದ ಕಾರ್ಯಗಳಿಗೆ ಕೊಡುಗೆ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ಪುಣ್ಯದ ಕೆಲಸಗಳಲ್ಲಿ ಮತ್ತಷ್ಟು ಸಕ್ರಿಯವಾಗಬೇಕಿದೆ ಎಂದರು
ಕರ್ನಾಟಕದೊಂದಿಗೆ ಜೈನ ಸಮುದಾಯದ ಸಂಪರ್ಕವನ್ನು ಉಲ್ಲೇಖಿಸಿದ ಬೊಮ್ಮಾಯಿ, ಮೂರನೇ ಶತಮಾನದ ಕವಿ ರನ್ನ ಜೈನರಾಗಿದ್ದರು ಎಂದು ನೆನಪಿಸಿಕೊಂಡರು. ಬಿಹಾರದಿಂದ ಬಂದ ಬಾಹುಬಲಿ ಶ್ರವಣಬೆಳಗೊಳದಲ್ಲಿ ಮೋಕ್ಷ ಪಡೆದಿದ್ದಾನೆ ಎಂದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
