fbpx
ಸಮಾಚಾರ

ಹಂಸಲೇಖ ಬರೆದ ಡಾ.ವಿಷ್ಣುವರ್ಧನ್ ಅವರ ಜೀವನ ಪಾಠ ಭೋದಿಸುವ ಹಾಡನ್ನೇ ಪಠ್ಯದಿಂದ ಕೈಬಿಟ್ಟ ಚಕ್ರತೀರ್ಥ ಸಮಿತಿ

ಪಠ್ಯಪುಸ್ತಕ ಪರಿಶೀಲನಾ ಸಮಿತಿಯ ಎಡವಟ್ಟುಗಳು ಒಂದೊಂದಾಗಿ ಹೊರಬೀಳತೊಡಗಿವೆ. ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹೆಚ್ಚಾಗಿ ಡಬಲ್ ಮೀನಿಂಗ್ ಪೋಲಿ ಪೋಸ್ಟ್ ಗಳು, ಮಹನೀಯರ ಬಗ್ಗೆ ಕೀಳು ಮಟ್ಟದ ಅವಮಾನಕಾರಿ ಪೋಸ್ಟ್ ಹಾಕುವ ಮೂಲಕ ಸದ್ದುಮಾಡುತ್ತಿದ್ದ ಬಲಪಂಥೀಯ ಲೇಖಕ ರೋಹಿತ್‌ ಚಕ್ರತೀರ್ಥ ಅವರ ಅಧ್ಯಕ್ಷತೆಯಲ್ಲಿ ಚನೆಯಾಗಿರುವ ಪಠ್ಯಪುಸ್ತಕಗಳಲ್ಲಿ ಎಕ್ಕಿ ತೆಗೆದಂತೆ ತಪ್ಪುಗಳು ರಾಶಿ ರಾಶಿ ಸಿಗುತ್ತಿವೆ.

ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ʼಕೇಸರೀಕರಣʼವನ್ನು ಮಾಡಲಾಗಿದೆ, ಕೇವಲ ಬ್ರಾಹ್ಮಣ ಲೇಖಕರನ್ನು, ಆರ್‌ಎಸ್‌ಎಸ್‌ ಅನ್ನು ವೈಭವೀಕರಿಸಲಾಗಿದೆ ಅಲ್ಲದೆ ಅಂಬೇಡ್ಕರ್, ಕುವೆಂಪು, ಬಸವಣ್ಣರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಪಠ್ಯ ಪುಸ್ತಕ ಮರು ಪರಿಷ್ಕರಣೆಯ ವಿರುದ್ಧ ಸಾಹಿತಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಮದ್ಯೆ ರೋಹಿತ್ ಚಕ್ರತೀರ್ಥ ಸಮಿತಿ ಮತ್ತೊಂದು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.

 

 

ಚಕ್ರತೀರ್ಥ ಸಮಿತಿ ಡಾ.ವಿಷ್ಣು ವರ್ಧನ್ ಅವರ ನಟನೆಯ ಮಹಾಕ್ಷತ್ರಿಯ ಚಿತ್ರದ ‘ಈ ಭೂಮಿ ಬಣ್ಣದ ಬುಗುರಿ” ಹಾಡನ್ನು ಪಠ್ಯದಿಂದ ಕೈಬಿಟ್ಟಿದೆ.. ಡಾ. ಹಂಸಲೇಖ ಅವರು ಬರೆದು ಸಂಗೀತ ಸಂಯೋಜನೆ ಮಾಡಿದ್ದ ಈ ಹಾಡು ಏಳನೇ ತರಗತಿಯ ಪ್ರಥಮ ಭಾಷಾ ಕನ್ನಡ ಪಠ್ಯಪುಸ್ತಕ ‘ಸಿರಿ ಕನ್ನಡ’ದ ಈ ಹಿಂದಿನ ಪಠ್ಯದಲ್ಲಿ ನೀಡಲಾಗಿತ್ತು. ಆದರೆ ಚಕ್ರತೀರ್ಥ ಸಮಿತಿ ಜೀವನದ ನೀತಿ ಭೋದಿಸುವ ಈ ಹಾಡನ್ನು ಕೈಬಿಟ್ಟಿರುವುದು ಅನೇಕ ಸಂದೇಹಕ್ಕೆ ಕಾರಣವಾಗಿದೆ.

ಹಂಸಲೇಖ ಅವರು ದಲಿತರ ಮೇಲೆ ನಡೆಯುತ್ತಿರುವ ಅಸ್ಪೃಶ್ಯತೆ, ಸಮಾಜದಲ್ಲಿನ ಜಾಲಾತಿದೋರಣೆಗಳ ವಿಚಾರವಾಗಿ ನೀಡಿದ್ದ ಹೇಳಿಕೆ ಸಮಾಜದಲ್ಲಿ ಸಂಚಲವನ್ನೇ ಸೃಷ್ಟಿಸಿತ್ತು. ಹಂಸಲೇಖ ಅವರು ‘ಮಾಂಸಾಹಾರ ಹಾಗೂ ಅಸ್ಪಶ್ಯತೆ’ ಕುರಿತು ಮಾತನಾಡುತ್ತಾ, ಪೇಜಾವರ ಶ್ರೀಗಳನ್ನು ಉಲ್ಲೇಖಿಸಿದ್ದಕ್ಕೆ ಒಂದು ವರ್ಗದ ಜನರು ವಿರೋಧ ತೋರಿದ್ದರು. ಮೂಲತಃ ಬಲಪಂಥೀಯರಾಗಿ ಗುರುತಿಸಿಕೊಂಡಿರುವ ಚಕ್ರತೀರ್ಥ ಹಂಸಲೇಖ ಅವರ ಮೇಲಿನ ಕೋಪದಿಂದ ಬೇಕಂತಲೇ ಈ ಅದ್ಭುತ ಹಾಡನ್ನು ಕೈಬಿಟ್ಟಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ.

ಅಂದಹಾಗೆ ‘ಈ ಭೂಮಿ ಬಣ್ಣದ ಬುಗುರಿ” ಹಾಡಿನ ಜಾಗದಲ್ಲಿ ಡಾ.ರಾಜ್ ನಟನೆಯ ಕಸ್ತೂರಿ ನಿವಾಸ ಚಿತ್ರದ ‘ಆಡಿಸಿ ನೋಡು ಬೀಳಿಸಿ ನೋಡು’ ಹಾಡನ್ನು ಸೇರಿಸಿಲಾಗಿದೆ.. ‘ಆಡಿಸಿ ನೋಡು ಬೀಳಿಸಿ ನೋಡು’ ಹಾಡನ್ನು ಸೇರಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಯಾವುದೇ ಆಕ್ಷೇಪವಿಲ್ಲ. ಆದರೆ, ‘ಈ ಭೂಮಿ ಬಣ್ಣದ ಬುಗುರಿ” ಹಾಡನ್ನು ತೆಗೆಯುವ ಬದಲು ಅದನ್ನು ಹಾಗೇ ಉಳಿಸಿಕೊಂಡು ‘ಆಡಿಸಿ ನೋಡು ಬೀಳಿಸಿ ನೋಡು’ ಹಾಡನ್ನು ಬೇರೆಡೆ ಸೇರಿಸಬಹುದಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top