ಶ್ರೀ ದತ್ತಾತ್ರೇಯ ದೇವಾಲಯದ ಹೆಸರಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿ ಪೂಜಾರಿಗಳಿಂದಲೇ ಸರಕಾರಕ್ಕೆ ಕೋಟ್ಯಂತರ ರೂಪಾಯಿ ವಂಚನೆಯಾಗಿರುವ ಆರೋಪ ಕೇಳಿಬಂದಿದೆ. ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ದೇವಲಗಾಣಗಾಪುರದಲ್ಲಿನ ಶ್ರೀ ದತ್ತಾತ್ರೇಯ ದೇವಸ್ಥಾನದ ಹೆಸರಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿ ಕೆಲ ಅರ್ಚಕರು ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಜಿಲ್ಲಾಧಿಕಾರಿಗಳೂ ಹಾಗೂ ದೇವಸ್ಥಾನದ ಅಧ್ಯಕ್ಷರೂ ಆದ ಯಶವಂತ್ ವಿ. ಗುರುಕರ್ ಅವರು ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕೆಲವು ಅರ್ಚಕರು ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್‍ಸೈಟ್ ತೆರೆದು ಭಕ್ತರಿಗೆ ವಂಚಿಸಿದ್ದಾರೆ ಎಂಬುದು ಬಯಲಿಗೆ ಬಂದ ಹಿನ್ನೆಲೆಯಲ್ಲಿ ದೇಶದ ಮೂಲೆಮೂಲೆಗಳಿಂದ ಭಕ್ತರು ಇರುವುದನ್ನು ಬಂಡವಾಳ ಮಾಡಿಕೊಂಡ ಅರ್ಚಕರಿಗೆ ಈಗ ಸಂಕಷ್ಟ ಎದುರಾಗಿದೆ.
ದೇವಸ್ಥಾನದ ಅಧಿಕೃತ ವೆಬ್‌ಸೈಟ್ www.devalgangapur.com (Shri dattatreya temple.ghanagapur) ಎಂದಿದೆ. ಆದ್ರೆ ಅಧಿಕೃತ ವೆಬ್ ಸೈಟ್ ಹೊರತುಪಡಿಸಿ ಅರ್ಚಕರೇ ಏಳೆಂಟು ನಕಲಿ ವೆಬ್ ಸೈಟ್‌ಗಳನ್ನು ಕ್ರಿಯೇಟ್ ಮಾಡಿದ್ದಾರೆ. ದರ್ಶನ, ವಿಶೇಷ ಪೂಜೆ, ಅರ್ಚನೆ ಸೇರಿ ದೂರದ ಊರಿನಲ್ಲಿಯೇ ಕುಳಿತು ಆನ್‌ಲೈನ್ ಬುಕ್ ಮಾಡಿವ ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ದೇವಸ್ಥಾನಕ್ಕೆ ಸಲ್ಲಿಸುವ ಹಣವನ್ನು ಕೂಡ ವಂಚಕರು ತಮ್ಮ ಖಾತೆಗಳಿಗೆ ಹಾಕಿಸಿಕೊಂಡು ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ವಂಚಿಸಿದ್ದಾರೆ.
ಇದು ಆನ್‌ಲೈನ್ ವೆಬ್‌ಸೈಟ್ ಮೂಲಕ ಅವ್ಯವಹಾರವಾದರೆ ಇನ್ನು ವಿಐಪಿ ದರ್ಶನ ಮೂಲಕ ಅರ್ಚಕರು ಪ್ರತಿ ದಿನ ಲಕ್ಷಾಂತರ ರೂ. ಜೇಬಿಗೆ ಹಾಕಿರುವ ದೂರು ಸಹ ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗಮನಕ್ಕೆ ಬಂದಿದೆ. ಒಟ್ಟಾರೆ ದೇವಸ್ಥಾನದ ಅವ್ಯವಹಾರ ತನಿಖೆ ನಡೆದಲ್ಲಿ ಇನ್ನಷ್ಟು ಹಗರಣಗಳು ಬಯಲಿಗೆ ಬರುವ ಸಾಧ್ಯತೆಗಳಿವೆ. ಇದರ ಹಿಂದೆ ದೊಡ್ಡ ಪೂಜಾರಿಗಳ ಹಾಗೂ ಕೆಲ ರಾಜಕೀಯ ಮುಖಂಡರ ಕೈವಾಡ ಸಹ ಇರಬಹುದೆಂದು ಶಂಕಿಸಲಾಗಿದೆ.
ದೇವಸ್ಥಾನದ ಅಧ್ಯಕ್ಷ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಅವರ ಸೂಚನೆ ಮೇರೆಗೆ ದೇವಲಗಾಣಗಾಪುರ ಠಾಣೆಯಲ್ಲಿ ಗಂಗಾಧರ್ ಪೂಜಾರಿ, ಶರತ್ ಭಟ್ ಪೂಜಾರಿ, ವಲ್ಲಭ ಪೂಜಾರಿ, ಅಂಕುರ ಪೂಜಾರಿ, ಪ್ರತಿಕ್ ಪೂಜಾರಿ ಸೇರಿದಂತೆ ಒಟ್ಟು 7 ವಂಚಕರ ಮೇಲೆ ದೂರು ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
