ಸ್ವಾತಂತ್ರ ದಿನಾಚರಣೆ ಎಂದರೆ ಸಾಕು ನಮ್ಮ ಮನಸಲ್ಲಿ ದೇಶ ಪ್ರೇಮ ಎದ್ದು ಕಾಣುತ್ತದೆ. ಅದರಲ್ಲೂ ಈ ದಿನ ದೇಶದ ನಾನಾ ಕಡೆಗಳಲ್ಲಿ ವಿಜೃಂಭಣೆಯಿಂದ ಹರಡುತ್ತಿರುವ ನಮ್ಮ ರಾಷ್ಟ್ರ ಧ್ವಜ ನೋಡಲು ಚಂದ. ಆದರೆ ಇದೀಗ ರಾಷ್ಟ್ರ ಧ್ವಜ ತಯಾರು ಮಾಡುವ ಖಾದಿ ಸಂಸ್ಥೆಗೆ ಒಂದು ದೊಡ್ಡ ಹೊಡೆತ ಬಿದ್ದಿರೋದು ಪಕ್ಕ ಎಂದು ಹೇಳಬಹುದು.
ಕೇಂದ್ರ ಸರ್ಕಾರವು ‘ಧ್ವಜ ಸಂಹಿತೆ-2002’ಕ್ಕೆ ತಿದ್ದುಪಡಿ ತಂದಿರುವ ಕಾರಣ ದೇಶದ ಏಕೈಕ ಖಾದಿ ಧ್ವಜವನ್ನು ತಯಾರು ಮಾಡುವ ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಏಕೈಕ ಖಾದಿ ಗ್ರಾಮೋದ್ಯೋಗ ಕೇಂದ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.
ಭಾರತೀಯ ಮಾನಕ ಸಂಸ್ಥೆಯಿಂದ ಮಾನ್ಯತೆ ಪಡೆದಿರುವ ಈ ಕೇಂದ್ರದಲ್ಲಿ ಪ್ರತಿ ವರ್ಷ ಸುಮಾರು 3 ರಿಂದ 3.5 ಕೋಟಿ ವಹಿವಾಟು ನಡೆಯುತ್ತಿತ್ತು. ಅಂದರೆ ಸುಮಾರು 70 ಸಾವಿರ ತ್ರಿವರ್ಣ ಧ್ವಜಗಳು ಮಾರಾಟವಾಗುತ್ತಿದ್ದವು. ಈ ಬಾರಿಯ ಭಾರತದ ಸ್ವಾತಂತ್ರೋತ್ಸವದಲ್ಲಿ ಬಾರಿ ಮಟ್ಟದ ವಹಿವಾಟು ನಡೆಯಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಇದೀಗ ಇವರ ಆಸೆ ಆಸೆಯಾಗಿ ಉಳಿಯುವ ಪ್ರಸಂಗ ಎದುರಾಗಿದೆ.
ಧ್ವಜ ತಯಾರಿಸಲು ಪೂರ್ವ ತಯಾರಿಕೆ ಮಾಡಿಕೊಂಡಿದ್ದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ತಮ್ಮ ಸಿಬ್ಬಂದಿಗಳಿಗೆ ಧ್ವಜ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಳ್ಳಿ ಎಂದು ಆದೇಶ ನೀಡಿತ್ತು. ಈ ಬಾರಿ ನಮಗೆ 5 ಕೋಟಿಗಿಂತಲೂ ಹೆಚ್ಚಿನ ಲಾಭವಾಗುತ್ತದೆ ಎಂದು ಅಂದುಕೊಂಡಿದ್ದರು. ಆದರೆ ಇದೀಗ ಕೇಂದ್ರ ಸರ್ಕಾರದ ಧ್ವಜ ಸಂಹಿತೆಗೆ ತಂದಿರುವ ತಿದ್ದುಪಡಿಯಿಂದ ನಮ್ಮ ವಹಿವಾಟು ಸಂಪೂರ್ಣವಾಗಿ ಕುಸಿಯುತ್ತದೆ ಎಂದು ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಮಠಪತಿ ಅವರು ಸುದ್ದಿ ಮಾಧ್ಯಮದ ಸಂಧರ್ಶನವೊಂದರಲ್ಲಿ ತಿಳಿಸಿದರು.
ಮುಂದುವರೆಸಿ ಕೇಂದ್ರ ಸರಕಾರ ಮಾಡಿರುವ ತಿದ್ದುಪಡಿಯ ಕಿರಿತು ಯಾವ ರೀತಿ ಹೋರಾಟ ಮಾಡಬೇಕೆಂಬುದನ್ನು ಸಭೆ ಬಳಿಕ ತೀರ್ಮಾನಿಸುತ್ತೇವೆ. ಸತ್ಯಾಗ್ರಹ ಮೂಲಕ ಮಾಡಬೇಕೋ ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಬೇಕೋ ಅಥವಾ ಕೇಂದ್ರ ಸರ್ಕಾರಕ್ಕೆ ನಿಯೋಗ ಹೋಗಿ ಭೇಟಿ ಮಾಡುವುದು ಸೂಕ್ತವೇ ಎನ್ನುವುದರ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
