ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಷೋ ಎಂದರೆ ಅದು ಬಿಗ್ ಬಾಸ್. ಸತತ 8 ಸೀಸನ್ ಗಳನ್ನು ಮುಗಿಸಿರುವ ಟೀಮ್ ಇದೀಗ 9 ನೇ ಸೀಸನ್ ಗಾಗಿ ತಯಾರಿ ನಡೆಸಿಕೊಳ್ಳುತ್ತಿದೆ. ಹೀಗಾಗಲೇ ಇದರ ಪ್ರೊಮೊ ಶೂಟ್ ಕೂಡ ಮುಗಿದಿದ್ದು, ವಿಭಿನ್ನ ಗೆಟಪ್ ನಲ್ಲಿ ಕಿಚ್ಚ ಕಂಗೊಳಿಸುತ್ತಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಜನರು ಬಿಗ್ ಬಾಸ್ ಮನೆಗೆ ಯಾರೆಲ್ಲ ಹೋಗಬಹುದು ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳುತ್ತಿದ್ದಾರೆ.
ಆದರೆ ಇಂಥಾ ಅತ್ಯಂತ ಜನಪ್ರಿಯ ಷೋ ಹೆಸರಿಯಲ್ಲಿ ಹಣ ಪೀಕಲು ಕಿಡಿಗೇಡಿಗಳು ಹೊಂಚು ಹಾಕಿ ಕೂತಿರುವ ವಿಚಾರ ಬೆಳಕಿಗೆ ಬಂದಿದೆ. ಈ ವಿಚಾರವನ್ನು ಸ್ವತಃ ಚಾನೆಲ್ ಅವರೇ ಬಹಿರಂಗ ಪಡಿಸಿದ್ದಾರೆ. ಜೊತೆಗೆ ಕಲರ್ಸ್ ವಾಹಿನಿಯು ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಆಕಾಂಕ್ಷಿಗಳ ಗಮನಕ್ಕೆಂದೇ ವಿಶೇಷ ಪೋಸ್ಟ್ ಹಂಚಿಕೊಂಡು, ಸೂಚನೆ ನೀಡಿದೆ.
ಬಿಗ್ ಬಾಸ್ ಆಕಾಂಕ್ಷಿಗಳು ಗಮನಿಸಬೇಕಾದ ಬಹುಮುಖ್ಯ ವಿಚಾರಗಳು.#BBKOTT #BBK9 #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/kCMkoSA2Og
— Colors Kannada (@ColorsKannada) July 21, 2022
ಕಲರ್ಸ್ ಕನ್ನಡ ಪೋಸ್ಟ್ ನಲ್ಲಿ ಇರುವುದೇನು?
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನೀವು ಯಾರಿಗೂ ಹಣ ಕೊಡಬೇಕಾಗಿಲ್ಲ. ಸ್ಪರ್ಧಿಗಳನ್ನು ಆರಿಸುವ ಹೊಣೆಯನ್ನು ಕಲರ್ಸ್ ಕನ್ನಡವು ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗೆ ವಹಿಸಿಲ್ಲ. ಕಲರ್ಸ್ ಕನ್ನಡ ತಂಡವೇ ನೇರವಾಗಿ ಸ್ಪರ್ಧಿಗಳನ್ನು ಆಯ್ಕೆ ಮಾಡುತ್ತದೆ. ಹಾಗಾಗಿ ಈ ಸಂಬಂಧ ಯಾವುದೇ ಆಡಿಶನ್ ನಡೆಸಲಾಗುತ್ತಿಲ್ಲ.
ಬಿಗ್ ಬಾಸ್ ಮನೆಗೆ ಕಳಿಸುವ ಭರವಸೆ ನೀಡಿ ಯಾರಾದರೂ ನಿಮ್ಮಿಂದ ಹಣ ಕೇಳಿದರೆ ತಕ್ಷಣ ಅಂಥವರ ವಿರುದ್ಧ ಪೊಲೀಸರಿಗೆ ದೂರು ಕೊಡಿ. ಪ್ರವೇಶ ಶುಲ್ಕ, ಠೇವಣಿ, ತರಬೇತಿ ಇಂಥ ಯಾವುದೇ ಹೆಸರಿನಲ್ಲೂ ನಾವು ಸ್ಪರ್ಧಿಗಳಿಂದ ಹಣ ಪಡೆಯುವುದಿಲ್ಲ ಎಂಬುದು ನೆನಪಿರಲಿ. ಬಿಗ್ ಬಾಸ್ ಕುರಿತ ಸರಿಯಾದ ಮಾಹಿತಿಗೆ ಕಲರ್ಸ್ ಕನ್ನಡ ವಾಹಿನಿ ಅಥವಾ ವೂಟ್‌ನ ಅಧಿಕೃತ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಗಳನ್ನು ಮಾತ್ರ ಪರಿಗಣಿಸಿ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
