fbpx
ಸಮಾಚಾರ

ನಾಗರ ಪಂಚಮಿ ಹಬ್ಬವನ್ನು ಆಚರಣೆ ಮಾಡುವುದರ ಹಿಂದೆ ಇರುವ ಪೌರಾಣಿಕ ಕಥೆ: ನಿಮಗೆ ಗೊತ್ತೇ ?

ಶ್ರಾವಣ ಮಾಸಗಳಲ್ಲಿ ಬರುವ ಹಬ್ಬಗಳಿಗೆ ಮುನ್ನುಡಿ ಬರೆಯುವ ಹಬ್ಬವೇ ನಾಗರಪಂಚಮಿ ಹಬ್ಬ.ಶ್ರಾವಣ ಮಾಸದ, ಶುಕ್ಲ ಪಕ್ಷದಲ್ಲಿ , ಪಂಚಮಿ ತಿಥಿಯ ದಿನ ನಾಗರಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ನಾಗರ ಪಂಚಮಿ ಎಂದರೆ ಒಡಹುಟ್ಟಿದವರ ಹಬ್ಬ . ಅದು ಹೆಣ್ಣು ಮಕ್ಕಳ ಹಬ್ಬ . ನಾಗಪ್ಪನಿಗೆ ಹಾಲು ಎರೆದು ಆಚರಿಸುವಂತಹ ಹಬ್ಬ. ಈ ಹಬ್ಬಕ್ಕೆ ಗರುಡ ಪಂಚಮಿ ಎಂಬ ಹೆಸರು ಕೂಡ ಇದೆ.

ಶ್ರದ್ಧೆ, ಭಕ್ತಿಯಿಂದ ನಾಗರ ಕಲ್ಲಿಗೆ ಅಥವಾ ಹುತ್ತಗಳಿಗೆ ಹಾಲನ್ನೆರೆದು ಪೂಜೆಯನ್ನು ಸಲ್ಲಿಸಲಾಗುತ್ತದೆ. ನಾಗಪ್ಪನಿಗೆ ಹಲವು ವಿಧವಾದ ಉಂಡೆಗಳನ್ನು ಸಮರ್ಪಿಸಲಾಗುತ್ತದೆ.ಕಪ್ಪು ಎಳ್ಳಿನಿಂದ ಮಾಡಿದ ಎಳ್ಳುoಡೆ , ಹಸಿ ಅಕ್ಕಿಯಿಂದ ಮಾಡಿದ ತಂಬಿಟ್ಟು, ಬೆಲ್ಲವನ್ನು ಸೇರಿಸಿ ಮಾಡಿದ ತಂಬಿಟ್ಟನ್ನು ನಾಗಪ್ಪನಿಗೆ ನೈವೇದ್ಯ ಮಾಡಲಾಗುತ್ತದೆ . ಸಹೋದರ ಸಹೋದರಿಯರ ಪ್ರೀತಿಯನ್ನು ಸಾರುವ ಈ ಹಬ್ಬದಲ್ಲಿ ಅಕ್ಕ – ತಂಗಿಯರು, ಅಣ್ಣ-ತಮ್ಮಂದಿರ ಆಯಸ್ಸು, ಆರೋಗ್ಯ ಮತ್ತು ಸಕಲ ಸುಖಗಳನ್ನು ನೀಡುವಂತೆ ನಾಗ ದೇವತೆಯರಲ್ಲಿ ಪ್ರಾರ್ಥಿಸಿ ಕೊಳ್ಳುವ ದಿನವಾಗಿದೆ.ಹುತ್ತಕ್ಕೆ ಹಾಲೆರೆದು ಹುತ್ತದ ಮಣ್ಣನ್ನು ಹಣೆಗೆ ಮತ್ತು ಬೆನ್ನಿಗೆ ಹಚ್ಚಿ ಒಳ್ಳೆಯದಾಗಲಿ ಎಂದು ಹರಸುತ್ತಾರೆ.

 

ನಾಗ ದೇವತೆಗಳಿಗೆ ಅನುಗ್ರಹ ಮತ್ತು ನಿಗ್ರಹ ಮಾಡುವಂತಹ ಸಾಮರ್ಥ್ಯ ಇರುವುದರಿಂದ ಸ್ವಲ್ಪ ಪೂಜೆಗೆ ವಿಶೇಷವಾದ ಮಾನ್ಯತೆ ನೀಡಲಾಗಿದೆ. ಉತ್ತರ ಕರ್ನಾಟಕದಲ್ಲಿ ಈ ಹಬ್ಬ ಮತ್ತಷ್ಟು ವಿಶೇಷವಾಗಿ ಆಚರಿಸಲಾಗುತ್ತದೆ . ಈ ಹಬ್ಬದ ದಿನ ಮನೆಗಳಲ್ಲಿ ಊರಿನಲ್ಲಿ ಜೋಕಾಲಿಯನ್ನು ಕಟ್ಟಿ ಆಡುವಂತಹ ವಿಶೇಷ ಪದ್ಧತಿ ಕೂಡ ಆಚರಣೆಯಲ್ಲಿದೆ . ಹಿರಿಯರು ಕಿರಿಯರು ಎನ್ನುವ ಭೇದವಿಲ್ಲದೆ ಜೋಕಾಲಿಯನ್ನು ಆಡುತ್ತಾರೆ. ನಾಗರಪಂಚಮಿ ಹಬ್ಬ ಉತ್ತರ ಕರ್ನಾಟಕದ ಭಾಗದಲ್ಲಿ “ಜೋಕಾಲಿ ಹಬ್ಬವೆಂದು” ಕೂಡ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ನಾಗರಪಂಚಮಿ ಹಬ್ಬದ ದಿನ ಸುಬ್ರಹ್ಮಣ್ಯನನ್ನು ಆರಾಧನೆ ಮಾಡಿದರೆ ಇಡೀ ಕುಟುಂಬವನ್ನೇ ನಾಗಪ್ಪ ಕಾಯುತ್ತಾನೆ ಎಂಬ ನಂಬಿಕೆ ಇದೆ.

ಪೌರಾಣಿಕ ಹಿನ್ನೆಲೆಯ ಪ್ರಕಾರ

ಶ್ರೀ ಕೃಷ್ಣನು ಯಮುನಾ ನದಿಯ ಆಳದಲ್ಲಿದ್ದ ಕಾಳಿಯ ನಾಗನನ್ನು ಮರ್ದನ ಮಾಡಿದ. ಅಂದಿನ ಆ ದಿನ ಶುಕ್ಲ ಪಕ್ಷದ ಶ್ರಾವಣ ಮಾಸದ ಪಂಚಮಿಯ ದಿನವಾಗಿತ್ತು. ಬಾಲಕೃಷ್ಣನು ನದಿಯ ತೀರದಲ್ಲಿ ಆಡುತ್ತಿದ್ದಾಗ, ನದಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಚೆಂಡನ್ನು ಎತ್ತಿಕೊಳ್ಳಲು ಹೋದಾಗ ಕೃಷ್ಣನ ಜಾರಿ ನದಿಯಲ್ಲಿ ಬಿದ್ದನು.ಕೃಷ್ಣ ನದಿಗೆ ಬಿದ್ದಾಗ ಕಾಳಿಯ ಎಂಬ ವಿಷ ಸರ್ಪವೊಂದು ವಾಸವಾಗಿತ್ತು. ನದಿಯಲ್ಲಿ ಬಿದ್ದಾಗ ಕೃಷ್ಣನ ಮೇಲೆ ಕಾಳಿಯ ಸರ್ಪ ದಾಳಿ ಮಾಡಿತು ಕೃಷ್ಣನು ಅದರ ಜೊತೆಗೆ ಹೋರಾಟ ಮಾಡುತ್ತಾನೆ.ಕೃಷ್ಣನು ಸಾಮಾನ್ಯ ಬಾಲಕನಲ್ಲ ಎಂಬುದು ಕಾಳಿಯ ಹಾವಿಗೆ ಅರಿವಿಗೆ ಬರುತ್ತದೆ. ಕೃಷ್ಣನನ್ನು ತನ್ನನ್ನು ಕೊಲ್ಲಬೇಡ ಎಂದು ಕಾಳಿಯ ಹಾವು ಕ್ಷಮೆ ಕೇಳಿಕೊಳ್ಳುತ್ತದೆ. ಕಾಳಿಯ ಹಾವನ್ನು ಕ್ಷಮಿಸಿದ ಕೃಷ್ಣನು ಜನರಿಗೆ ತೊಂದರೆ ಮಾಡಬೇಡ ಎಂದು ಬುದ್ಧಿವಾದ ಹೇಳಿ , ಆ ಹಾವನ್ನು ಬಿಟ್ಟು ಬಿಡುತ್ತಾನೆ. ಹೀಗಾಗಿ ಕಾಳಿಯ ಹಾವನ್ನು ಮರ್ದನ ಮಾಡಿದ ದಿನವನ್ನೇ ನಾಗರ ಪಂಚಮಿಯೆಂದು ಆಚರಿಸಲಾಗುತ್ತದೆ.

ಮತ್ತೊಂದು ಪೌರಾಣಿಕ ಕಥೆಯ ಪ್ರಕಾರ

ತನ್ನ ತಂದೆ ಪರೀಕ್ಷಿತ ರಾಜನು ಸಾವಿಗೆ ಸರ್ಪ ಒಂದು ಕಾರಣವೆಂದು ತಿಳಿದು, ರಾಜಾ ಜನಮೇಜಯ ಭೂಲೋಕದಲ್ಲಿ ಸರ್ಪ ಸಂಕುಲವನ್ನು ನಿರ್ನಾಮ ಮಾಡಲು ಒಂದು ಸರ್ಪ ಯಜ್ಞವನ್ನು ಮಾಡಲಾರಂಭಿಸುತ್ತಾನೆ. ಎಲ್ಲಾ ಸರ್ಪಗಳು ಬಂದು ಅ ಯಜ್ಞದ ಹೋಮ ಕುಂಡಕ್ಕೆ ಬಂದು ಬೀಳುತ್ತವೆ. ಆಗ ಈ ಸಂದರ್ಭದಲ್ಲಿ ಕೆಲವು ಸಂದರ್ಭಗಳು ಪ್ರಾರ್ಥನೆ ಮಾಡಿಕೊಂಡಾಗ ಆಸ್ತಿಕ ಮುನಿಗಳು ಸರ್ಪಯಜ್ಞ ಮಾಡುವ ಜನಮೇಜಯ ರಾಜನನ್ನು ಪ್ರಸನ್ನ ಗೊಳಿಸುತ್ತಾರೆ .
ಜನಮೇಜಯ ರಾಜ ವರವನ್ನು ಕೇಳು ಎಂದಾಗ ಆಸ್ತಿಕ ಮುನಿಗಳು ಪ್ರಾಣಿ ಹಿಂಸೆ ಮಹಾ ಪಾಪವಾಗಿದ್ದು. ನೀವು ಈಗಾಗಲೇ ಮಾಡುತ್ತಿರುವ ಸರ್ಪಯಜ್ಞವನ್ನು ಕೂಡಲೇ ನಿಲ್ಲಿಸಬೇಕು ಎಂಬ ವರವನ್ನು ಕೇಳಿಕೊಳ್ಳುತ್ತಾನೆ. ಆಗ ರಾಜ ಜನಮೇಜಯನು ಆಸ್ತಿಕ ಮುನಿಗಳ ಮಾತಿಗೆ ಬೆಲೆ ಕೊಟ್ಟು ಸರ್ಪ ಯಜ್ಞವನ್ನು ನಿಲ್ಲಿಸುತ್ತಾನೆ. ಆ ಸರ್ಪ ಯಜ್ಞವನ್ನು ನಿಲ್ಲಿಸಿದ ದಿನವನ್ನು ನಾಗರ ಪಂಚಮಿಯ ದಿನ ಎಂದು ಸಹ ಕರೆಯಲಾಗುತ್ತದೆ. ಹೀಗೆ ನಾಗರ ಪಂಚಮಿಯ ಹಬ್ಬ ರಾಜ್ಯದ್ಯಂತ ಸಾಕಷ್ಟು ಭಕ್ತಿ, ಶ್ರದ್ಧೆಗಳಿಂದ ಆಚರಿಸಲಾಗುತ್ತದೆ. ಅಣ್ಣ ತಂಗಿಯರಿಗೆ ಇದೊಂದು ವಿಶೇಷವಾದ ಬಾಂಧವ್ಯದ ಹಬ್ಬವಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top