ಸ್ವರ್ಣಗೌರಿ ಹಬ್ಬ.ಪ್ರತಿ ವರ್ಷ ಗಣೇಶ ಚತುರ್ಥಿಯ ಮುನ್ನಾ ದಿನ ಬರುವ ಗೌರಿ ಹಬ್ಬ ಮುತೈದೆಯರಿಗೆಲ್ಲಾ ಸಕಲ ಸೌಭಾಗ್ಯ ನೀಡುವ ಹಬ್ಬವಾಗಿದೆ.ಈ ಗೌರಿ ಹಬ್ಬ ಭಾದ್ರಪದ ಶುದ್ಧ ತದಿಗೆ ದಿನ ಬರುತ್ತದೆ.ಗೌರಿ ಹಬ್ಬ ಎಂದರೆ ಮುಖ್ಯವಾಗಿ ಹೆಂಗೆಳೆಯರ ಹಬ್ಬ ಎಂದೇ ಖ್ಯಾತಿ ಪಡೆದಿದೆ.ಇದು ಮುತೈದೆಯರಿಗೆಲ್ಲಾ ಸೌಭಾಗ್ಯ ನೀಡುವ ಹಬ್ಬ ಎಂಬ ನಂಬಿಕೆ ಇದೆ.ಪುರಾಣ ಗ್ರಂಥಗಳ ಪ್ರಕಾರ ಪೌರಾಣಿಕ ಹಿನ್ನೆಲೆಯನ್ನು ಈ ಹಬ್ಬ ಒಳಗೊಂಡಿದೆ .ಪಾರ್ವತಿ ದೇವಿ ತನ್ನ ತವರು ಮನೆಗೆ ಹೋಗುವ ಸಂಭ್ರಮ ಇಲ್ಲಿ ಸಾಂಕೇತಿಕವಾಗಿದೆ.ಈ ಗೌರಿ ಹಬ್ಬವನ್ನು ದಕ್ಷಿಣ ಕರ್ನಾಟಕದ ಭಾಗದಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಸ್ವರ್ಣ ಗೌರಿ ಪೂಜೆ ಹೇಗೆ ಆಚರಣೆಯಲ್ಲಿ ಬಂತು ಎನ್ನುವ ಕುರಿತು ಒಂದು ಸುಂದರವಾದ ಪೌರಾಣಿಕ ಕಥೆ ಚಾಲ್ತಿಯಲ್ಲಿದೆ.
ಚಂದ್ರಪ್ರಭು ಎನ್ನುವ ಅರಸನು ಬೇಟೆಯಾಡಲು ಆರಣ್ಯಕ್ಕೆ ಹೋದಾಗ ಅಲ್ಲಿ ಒಂದು ಸುಂದರವಾದ ನೈಸರ್ಗಿಕ ಅರಣ್ಯ ಸಂಪತ್ತು ಮತ್ತು ಸರೋವರದ ಬಳಿ ಅನೇಕ ಅಪ್ಸರೆಯರು ಸ್ವರ್ಣ ಗೌರಿ ಪೂಜೆಯನ್ನು ಮಾಡುವುದರಲ್ಲಿ ನಿರತರಾಗಿರುವುದನ್ನು ಕಾಣುತ್ತಾನೆ.ಪೂಜೆಯ ನಂತರ ಈ ಪೂಜೆಯ ಮಹತ್ವದ ಬಗ್ಗೆ ತಮಗೆ ತಿಳಿಸಬೇಕು ಎಂದು ಕೇಳುತ್ತಾನೆ .ಆ ಅಪ್ಸರೆಯರು ವ್ರತದ ಬಗ್ಗೆ ತಿಳಸುವರು. ಈ ವ್ರತವನ್ನು ಆಚರಿಸುವುದರಿಂದ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ಹೇಳಿ ಇದನ್ನು ಭಾದ್ರಪದ ಶುದ್ಧ ತದಿಗೆ ದಿನ ಆಚರಿಸಬೇಕೆಂದು ತಿಳಿಸಿ 16 ಗಂಟು ಹಾಕಿದ ದಾರವನ್ನು ನೀಡುತ್ತಾರೆ.
ರಾಜನು ಅರಮನೆಗೆ ಬಂದ ನಂತರ ತನ್ನ ಇಬ್ಬರು ಪತ್ನಿಯರಿಗೆ ಆ ದಾರವನ್ನು ಕೊಡುತ್ತಾನೆ.ಮೊದಲನೇ ಪತ್ನಿ ಆ ದಾರವನ್ನು ತಿರಸ್ಕರಿಸಿ ಒಣಗಿದ ಗಿಡದ ಮೇಲೆ ಎಸೆಯುತ್ತಾಳೆ. ಕೆಲವು ದಿನಗಳ ನಂತರ ಆ ಗಿಡವು ಆ ದಾರದ ಮಹಿಮೆಯಿಂದ ತಕ್ಷಣ ಚಿಗುರಿ ಬೆಳೆಯತೊಡಗಿತು.ಅದನ್ನು ಕಂಡ ಎರಡನೇ ಪತ್ನಿಯು ಆ ದಾರವನ್ನು ಧರಿಸಿ ರಾಜನು ಹೇಳಿದ ರೀತಿಯಲ್ಲಿ ಸ್ವರ್ಣಗೌರಿ ವ್ರತವನ್ನು ಆಚರಿಸಿದಳು.ನಂತರ ಅವರಿಗೆ ಪುತ್ರ ಸಂತಾನ ಪ್ರಾಪ್ತಿಯಾಗಿ ಸತಿಪತಿಯರಿಬ್ಬರು ಸುಖವಾಗಿ ಸಂಸಾರ ನೆಡೆಸಿ,ಜೀವನದ ಕೊನೆಯ ಹಂತದಲ್ಲಿ ಶಿವಲೋಕವನ್ನು ಹೊಂದಿ ಮುಕ್ತಿ ಪಡೆದರು ಎಂಬ ಪ್ರತೀತಿ ಪುರಾಣ ಕಥೆಗಳಲ್ಲಿ ಉಲ್ಲೇಖವಾಗಿದೆ.ಈ ಸ್ವರ್ಣಗೌರಿ ಹಬ್ಬದಲ್ಲಿ ಬಾಗಿನ ಕೊಡುವುದು ಒಂದು ವಿಶೇಷ,ಅಂದರೆ ಗೌರವ ಪೂರ್ವಕವಾಗಿ ಕೊಡುವ ದಾನ ಅಥವಾ ಸತ್ಕಾರವೆಂದು ಕರೆಯುತ್ತಾರೆ.
ಅಕ್ಕ ತಂಗಿಯರಿಗೆ ಸಹೋದರನು ಬಾಗಿನ ಕೊಡಬೇಕು.ಈ ಬಾಗಿನವನ್ನು ಪಡೆಯುವುದರಿಂದ ಮುತೈದೆಯರು ಸೌಭಾಗ್ಯವನ್ನು ಪಡೆಯುತ್ತಾರೆ ಎನ್ನುವ ನಂಬಿಕೆ ಇದೆ.ಗೌರಿಯನ್ನು ಕೂರಿಸಿ ಪೂಜೆ ಮಾಡುವ ಪದ್ದತಿ ಎಲ್ಲರ ಮನೆಯಲ್ಲಿ ಇರುವುದಿಲ್ಲ.ಆದ್ದರಿಂದ ಸುಮಂಗಲಿಯರು ಗೌರಿಯನ್ನು ಪೂಜಿಸುವವರ ಮನೆಗೆ ಹೋಗಿ ಪೂಜೆ ಸಲ್ಲಿಸಿ ಬರುತ್ತಾರೆ.ಮುತೈದೆಯರು ಸ್ವರ್ಣಗೌರಿ ವ್ರತವನ್ನು ಭಕ್ತಿ, ಶ್ರದ್ದೆ,ನಿಷ್ಠೆಯಿಂದ ಆಚರಿಸಿದ್ದಲ್ಲಿ ಖಂಡಿತವಾಗಿಯೂ ಸಂತಾನ ಪ್ರಾಪ್ತಿ,ಅವಿವಾಹಿತರಿಗೆ ವಿವಾಹಯೋಗ ಮತ್ತು ವಿದ್ಯಾರ್ಥಿಗಳಿಗೆ ಜ್ಞಾನ ದೊರೆಯುತ್ತದೆ ಎನ್ನುವುದು ಪುರಾಣ ಕಥೆಗಳಲ್ಲಿ ಉಲ್ಲೇಖವಾಗಿದೆ.ಈಗಿನ ಆಧುನಿಕ ಯುಗದಲ್ಲಿ ಗೌರಿ ಮತ್ತು ಗಣೇಶನ ಮೂರ್ತಿಗಳನ್ನು ವಿವಿಧ ರೂಪದಲ್ಲಿ ತಯಾರಿಸಿದರೂ ಬಣ್ಣ ರಹಿತವಾದ ಮೂರ್ತಿಗಳೇ ಪೂಜೆಗೆ ಶ್ರೇಷ್ಠ ಎನ್ನುವುದು ನಂಬಿಕೆ.
ಸ್ವರ್ಣಗೌರಿ ಹಬ್ಬದ ದಿನ ಈ ಶ್ಲೋಕವನ್ನು 108 ಬಾರಿ ಜಪಿಸಿದರೆ ತಮ್ಮ ಬೇಡಿಕೆಗಳು ಪೂರೈಸುತ್ತವೆ ಎನ್ನುವ ನಂಬಿಕೆ ಇದೆ.“ಸರ್ವ ಮಂಗಳ ಮಾಂಗಲ್ಯೇ ,ಶಿವೇ ಸರ್ವಾರ್ಥ ಸಾಧಿಕೇ,ಶರಣ್ಯೇ ತ್ರೈಯಂಬಕೇ ಗೌರಿ ,ನಾರಾಯಾಣಿ ನಮೋಸ್ತುತೇ”
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
