ನೆನ್ನೆ (ಬುಧವಾರ) ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವೆ ನಡೆದ ಪಂದ್ಯ ಬಹಳ ರೋಚಕತೆಯಿಂದ ಕೂಡಿತು. ಕೊನೆಯ ಹಂತದವರೆಗೂ ನಡೆದ ಈ ಪಂದ್ಯದಲ್ಲಿ ಪಾಕಿಸ್ತಾನ 1 ವಿಕೆಟ್ ಗಳ ರೋಚಕ ಗೆಲುವನ್ನು ಸಾದಿಸಿ ಏಷ್ಯಾ ಕಪ್ ಫೈನಲ್ ತಲುಪಿತು. ಆದರೆ ಈ ಪಂದ್ಯದ ವೇಳೆ ಪಾಕಿಸ್ತಾನ ಬ್ಯಾಟರ್ ಹಾಗೂ ಅಫ್ಘಾನಿಸ್ತಾನ ಬೌಲರ್ ನಡುವೆ ಜಗಳ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.
ಅಫ್ಘಾನಿಸ್ತಾನ ತಂಡ ನೀಡಿದ 129 ರನ್ ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ಆರಂಭಿಕ ಆಘಾತ ಅನುಭವಿಸಿತು. ಬ್ಯಾಟರ್ ಗಳು ಬಂದ ದಾರಿಯಲ್ಲಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಆದರೆ ಪಾಕಿಸ್ತಾನ ತಂಡಕ್ಕೆ ನೆರವಾಗಿದ್ದು ಏಳನೇ ಕ್ರಮಾಂಕದಲ್ಲಿ ಬಂದ ಆಸೀಫ್ ಅಲಿ. ಕೇವಲ 7 ಎಸೆತದಲ್ಲಿ ಎರಡು ಸಿಕ್ಸರ್ ಗಳ ನೆರವಿನಿಂದ 18 ರನ್ ಪೂರೈಸಿದರು. ಆದರೆ ಇವರು ಕೊನೆಯವರೆಗೂ ಉಳಿಯಲಿಲ್ಲ.
The fight between Asif Ali and the Afghan bowler💥 Very unfortunate
#PAKvAFG pic.twitter.com/AQzxurWNB7
— Nadir Baloch (@BalochNadir5) September 7, 2022
ಈ ವೇಳೆ 19 ನೇ ಓವರ್ ನಲ್ಲಿ ಅಫ್ಘಾನಿಸ್ತಾನ ತಂಡದ ಬೌಲರ್ ಫರೀದ್ ಅಹ್ಮದ್ ಬೌಲಿಂಗ್ನ ಕೊನೆಯ ಎಸೆತದಲ್ಲಿ ಅಸೀಫ್ ಅಲಿ ಔಟಾದರು. ಈ ವೇಳೆ ಫರೀದ್ ಅಹ್ಮದ್ ಮೈದಾನದಲ್ಲಿ ಸಂಭ್ರಮಿಸಿದರು. ಮೊದಲೇ ಔಟ್ ಆಗಿ ಬೇಜಾರಿನಲ್ಲಿದ್ದ ಅಸೀಫ್ ಅಲಿ ಅವರಿಗೆ ಫರೀದ್ ಅಹ್ಮದ್ ಅವರ ಸಂಭ್ರಮದಿಂದ ತಾಳ್ಮೆ ಕಳೆದುಕೊಂಡು ಜಗಳಕ್ಕೆ ಇಳಿದಿದ್ದಾರೆ. ಇವರು ಎಷ್ಟರ ಮಟ್ಟಿಗೆ ಕೋಪದಲ್ಲಿದ್ದರು ಎಂದರೆ ಅಫ್ಘಾನ್ ಪ್ಲೇಯರ್‌ಗೆ ಬ್ಯಾಟ್ನಿಂದ ಹೊಡೆಯಲು ಮುಂದಾಗಿದ್ದಾರೆ. ಅಲ್ಲೇ ನೆರೆದಿದ್ದ ಸಹ ಆಟಗಾರರು ಮತ್ತು ಅಂಪೈರ್ ಗಳು ಮಧ್ಯಪ್ರವೇಶ ಮಾಡಿ ಸನ್ನಿವೇಶವನ್ನು ನಿಯಂತ್ರಣಕ್ಕೆ ತಂದರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದು, ಇದರ ಕುರಿತು ನೆಟ್ಟಿಗರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
