ಗುಜರಾತಿ ಭಾಷೆಯ ಚಿತ್ರ ‘ಚೆಲೋ ಶೋ’ 2023ರ ಸಾಲಿನ 95ನೇ ಆಸ್ಕರ್ ಪ್ರಶಸ್ತಿಗೆ(Oscar 2023) ಭಾರತದಿಂದ ಅಧಿಕೃತವಾಗಿ ನಾಮ ನಿರ್ದೇಶನಗೊಂಡಿರುವ ಚಿತ್ರವಾಗಿದೆ. ಗುಜರಾತ್ ನ ಸೌರಾಷ್ಟ್ರದ ಹಳ್ಳಿಯೊಂದರಲ್ಲಿ ಚಿಕ್ಕ ಹುಡುಗನ ಸಿನಿಮಾದೊಂದಿಗಿನ ಪ್ರೇಮ ಸಂಬಂಧದ ಬಗ್ಗೆ ಕಥೆ ಹೇಳುವ ಸಿನಿಮಾವು 95 ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿಗೆ ಭಾರತದ ಅಧಿಕೃತ ಪ್ರವೇಶವಾಗಿದೆ.
ವಿಶೇಷ ಎಂದರೆ ಈ ಸಿನಿಮಾದಲ್ಲಿ ಕರ್ನಾಟಕದ ಪವನ್ ಭಟ್ ಸಂಕಲನಕಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ವಾಸವಾಗಿರುವ ಪವನ್ ಭಟ್ ಮೂಲತಃ ಉಪ್ಪಿನಂಗಡಿಯ ಹುಡುಗ. ಓದಿದ್ದು ಇಂಜಿನಿಯರಿಂಗ್. ಆದರೆ, ಆಸಕ್ತಿ ಬೆಳೆದದ್ದು ಸಿನಿಮಾ ಎಡಿಟಿಂಗ್ ನತ್ತ. ಈಗಾಗಲೇ ಇಪ್ಪತ್ತಕ್ಕೂ ಹೆಚ್ಚು ಸಿನಿಮಾಗಳಿಗೆ ಎಡಿಟಿಂಗ್ ಮಾಡಿದ ಹೆಗ್ಗಳಿಕೆ ಇವರದ್ದು.
ಈ ವಿಚಾರವಾಗಿ ಖಾಸಗಿ ಮಾಧ್ಯಮದ ಜೊತೆ ಖುಷಿ ಹಂಚಿಕೊಂಡಿರುವ ಪವನ್ ಭಟ್ “ಸೀನಿಯರ್ ಎಡಿಟರ್ ಜೊತೆಗೆ ಈ ಸಿನಿಮಾದಲ್ಲಿ ಕೆಲಸ ಮಾಡಲು ಒಂದು ಅವಕಾಶ ಸಿಕ್ಕಿತು. ಪರಿಶ್ರಮ ನಮಗೆ ದೊಡ್ಡ ಪ್ರತಿಫಲವನ್ನೇ ನೀಡಿದೆ. ಅಕ್ಟೋಬರ್ 14ಕ್ಕೆ ಈ ಚಿತ್ರ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ನಾನು 8 ವರ್ಷ ಮುಂಬೈನಲ್ಲಿದ್ದೆ. ಕಳೆದ ಎರಡು ವರ್ಷಗಳಿಂದ ನಾನು ಬೆಂಗಳೂರಿನಲ್ಲಿಯೇ ಇದ್ದುಕೊಂಡು ಕೆಲಸ ಮಾಡುತ್ತಿದ್ದೇನೆ.” ಎಂದು ಹೇಳಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
