fbpx
ಸಮಾಚಾರ

ನವರಾತ್ರಿಯಲ್ಲಿ ಯಾವ ಯಾವ ದಿನ ಯಾವ ಯಾವ ದೇವಿಯನ್ನ ಪೂಜಿಸಬೇಕು: ಪೂಜೆಯನ್ನು ಹೇಗೆ ಮಾಡಬೇಕು! ಇಲ್ಲಿದೆ ಕಂಪ್ಲೀಟ್ ಮಾಹಿತಿ

26 ನೇ ತಾರೀಖಿನಿಂದ ನವರಾತ್ರಿ ಆರಂಭ. ಆಶ್ವೀಜ ಮಾಸದ ನವರಾತ್ರಿಯನ್ನು ಶರನ್ನವರಾತ್ರಿ ಎಂದು ಕರೆಯಲಾಗುತ್ತದೆ. ನವರಾತ್ರಿಯಲ್ಲಿ ದುರ್ಗೆಯನ್ನು 9 ರೂಪಗಳಲ್ಲಿ ಪೂಜಿಸಲಾಗುತ್ತದೆ . ನವದೇವಿಯರ ಒಂಬತ್ತು ರೂಪಗಳ ವಿಶೇಷತೆ ಏನು ? 9 ದಿನ ಜಗನ್ಮಾತೆಯನ್ನು ಪೂಜಿಸುವುದು ಹೇಗೆ ?

ನವರಾತ್ರಿಯಲ್ಲಿ ನವದುರ್ಗೆಯರ ಪೂಜೆ.ನವರಾತ್ರಿಯ ಒಂಬತ್ತು ದಿನ ದುರ್ಗೆಯ ಒಂಬತ್ತು ರೂಪಗಳ ಪೂಜೆ.ನವರಾತ್ರಿಯ ಪ್ರಥಮ ದಿನ ಶೈಲಪುತ್ರಿಯ ಪೂಜೆ. ಎಲ್ಲೆಲ್ಲೂ ನವರಾತ್ರಿಯ ಸಂಭ್ರಮ, ಶಕ್ತಿದೇವತೆಯ ಆರಾಧನೆ, ದುರ್ಗಾಪೂಜೆ, ಪಾರಾಯಣ ,ನಿತ್ಯ ದುರ್ಗೆಯರನ್ನು ಹಾಡುವ ಕೊಂಡಾಡುವ ಈ ನವರಾತ್ರಿಯಲ್ಲಿ ದೇವಿಯ ಒಲುಮೆಗೆ ಪಾತ್ರವಾಗುವ ಸುಸಂದರ್ಭವಿದು. ಶರನ್ನವರಾತ್ರಿಯ ದಿನ ಒಂದೊಂದು ದಿನ ಒಂದೊಂದು ಶಕ್ತಿ ದೇವತೆಯ ಆರಾಧನೆಯನ್ನು ಮಾಡಲಾಗುತ್ತದೆ. ಶೈಲಪುತ್ರಿ, ಬ್ರಹ್ಮಚಾರಿಣಿ ,ಚಂದ್ರಘಂಟಾ, ಕೂಷ್ಮಾಂಡಾ ,ಕಾತ್ಯಾಯನಿ, ಕಾಲರಾತ್ರಿ ,ಮಹಾಗೌರಿ, ಸಿದ್ಧಿದಾತ್ರಿ ದೇವಿಯರನ್ನು ಒಂಬತ್ತು ದಿನ ಆರಾಧಿಸಲಾಗುತ್ತದೆ. ದೇವಿಯ 9 ಸ್ವರೂಪಗಳ ಆರಾಧನೆಯ ಪರ್ವವೇ ನವರಾತ್ರಿ. ನವರಾತ್ರಿಯ ಒಂಬತ್ತು ದಿನ ದುರ್ಗೆಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ. ಶಾಸ್ತ್ರಗಳ ಪ್ರಕಾರ ನವರಾತ್ರಿಯ ಒಂದೊಂದು ದಿನವೂ ಅತ್ಯಂತ ಮಹತ್ವವಿದೆ.

ನವರಾತ್ರಿಯ ಪ್ರಥಮ ದಿನ ಶೈಲಪುತ್ರಿ ಪೂಜೆ:ನವರಾತ್ರಿಯ ಮೊದಲನೇ ದಿನ ದುರ್ಗಾದೇವಿಯ ಮೊದಲನೇ ಸ್ವರೂಪ ಶೈಲಪುತ್ರಿ ಪರ್ವತರಾಜ ಹಿಮವಂತನ ಮಗಳು. ಆದ್ದರಿಂದ ಈಕೆಯನ್ನು ಶೈಲಪುತ್ರಿ ಎನ್ನಲಾಗುತ್ತದೆ. ಶೈಲಪುತ್ರಿಯ ರೂಪ ಅತ್ಯಂತ ಸುಂದರ. ಶೈಲಪುತ್ರಿ ಪಾರ್ವತಿ ದೇವಿಯ ಪ್ರತಿರೂಪ. ವೃಷಭ ವಾಹನೆಯಾದ ಈಕೆ ಬಲಗೈಯಲ್ಲಿ ತ್ರಿಶೂಲ ಎಡಗೈಯಲ್ಲಿ ಕಮಲವನ್ನು ಹಿಡಿದಿದ್ದಾಳೆ. ಇವಳದ್ದು ಸರಳ ವ್ಯಕ್ತಿತ್ವ, ಸೌಮ್ಯ ರೂಪದ ಶಾಂತ ರೂಪಿಯಾಗಿ ಭಕ್ತರಿಗೆ ದರ್ಶನ ಕೊಡುತ್ತಾರೆ. ಸತಿದೇವಿ ದಕ್ಷ ಪ್ರಜಾಪತಿಯ ಯಜ್ಞ ಕುಂಡಕ್ಕೆ ಹಾರಿ ಭಸ್ಮವಾಗುತ್ತಾರೆ. ಸತಿದೇವಿಗೆ ಮುಂದಿನ ಜನ್ಮದಲ್ಲಿ ಶೈಲೆಯಾಗಿ ಹಿಮವಂತನಿಗೆ ಪುತ್ರಿಯಾಗಿ ಜನಿಸಿ ಶೈಲಪುತ್ರಿ ಯಾದಳು. ನಂತರ ಶೈಲಪುತ್ರಿ ಕಠಿಣ ತಪಸ್ಸನ್ನು ಮಾಡಿ ಶಿವನೊಂದಿಗೆ ವಿವಾಹವಾದಳು.ರಾಕ್ಷಸರಿಂದ ತೊಂದರೆಯನ್ನು ಅನುಭವಿಸುತ್ತಿದ್ದ ದೇವಾನುದೇವತೆಗಳಿಗೆ ದುಷ್ಟರನ್ನು ಸಂಹಾರ ಮಾಡುವ ದುರ್ಗೆಯಾಗಿ ಅಭಯ ಹಸ್ತ ನೀಡುವವಳು ಈ ಶೈಲಪುತ್ರಿ. ನವರಾತ್ರಿಯ ಒಂಬತ್ತು ದಿನ ದೇವಿಯ ಮಂತ್ರವನ್ನು ಜಪಿಸಿ ದೇವಿಯ ಆರಾಧನೆಯನ್ನು ಮಾಡಿದರೆ ವಿಶೇಷ ಫಲಗಳು ಪ್ರಾಪ್ತಿಯಾಗುತ್ತದೆ.ಶೈಲಪುತ್ರಿ ಆರಾಧನೆಯಿಂದ ವಿಶೇಷವಾದ ಪೂಜಾ ಫಲಗಳು ಪ್ರಾಪ್ತಿಯಾಗುತ್ತವೆ .ಶೈಲಪುತ್ರಿ ನಾಮಸ್ಮರಣೆಯ ಅತ್ಯಂತ ಶಕ್ತಿದಾಯಕ ,ಇವಳ ಪೂಜೆಯಿಂದ ಕೋಮಲ ಚಿತ್ತದವರು ಬೆಟ್ಟದಷ್ಟು ಕಲ್ಲಾಗುತ್ತಾರೆ . ದೇಹ ಪರ್ವತದಂತೆ ಸದೃಢಗೊಳ್ಳುತ್ತದೆ, ಕಷ್ಟಗಳನ್ನು ಎದುರಿಸುವ ಕಠೋರ ಶಕ್ತಿಯನ್ನು ತಾಯಿ ಕರುಣಿಸುತ್ತಾಳೆ. ಇವಳ ಆರಾಧನೆಯಿಂದ ಸಾಮಾನ್ಯ ವ್ಯಕ್ತಿಯು ಮಹಾಪುರುಷನಾಗುತ್ತಾನೆ. ಯೋಗಸಾಧನೆಗೆ ನವರಾತ್ರಿ ಪ್ರಶಸ್ತವಾದ ಸಮಯ, ಹೀಗಾಗಿ ಯೋಗ ಗುರುಗಳು ನವರಾತ್ರಿಯ ಮೊದಲ ದಿನ ಶೈಲಪುತ್ರಿಯ ಆರಾಧನೆಯನ್ನು ಮಾಡುತ್ತಾರೆ. ಆ ಮೂಲಕ ತಮ್ಮ ಮನಸ್ಸನ್ನು ಮೂಲಾಧಾರ ಚಕ್ರದಲ್ಲಿ ತಲ್ಲಣಗೊಳ್ಳುವಂತೆ ಮಾಡುತ್ತಾರೆ. ಇದರಿಂದಲೇ ಅವರು ಯೋಗ ಸಾಧನೆ ಆರಂಭವಾಗುತ್ತದೆ.

 

ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ಆರಾಧನೆ:ನವದುರ್ಗೆಯರಲ್ಲಿ ಬ್ರಹ್ಮಚಾರಿಯದ್ದು ಎರಡನೆಯ ರೂಪ . ಈಕೆ ಸೃಷ್ಟಿಕರ್ತನಾದ ಬ್ರಹ್ಮನಿಗೆ ಜ್ಞಾನ ಕೊಟ್ಟವಳು, ಬ್ರಹ್ಮಚಾರಿಣಿಯದ್ದು ಸಾತ್ವಿಕ ಸುಂದರ ರೂಪ, ಬ್ರಹ್ಮಚಾರಿಣಿಯ ರೂಪ ಅತ್ಯಂತ ವಿಶಿಷ್ಟವಾದದ್ದು. ಇವಳು ಪೂರ್ಣ ಜ್ಯೋತಿರ್ಮಯ ಸ್ವರೂಪ, ಕೈಯಲ್ಲಿ ಜಪಮಾಲೆ, ಎಡಗೈಯಲ್ಲಿ ಕಮಂಡಲವನ್ನು ಹಿಡಿದಿದ್ದಾಳೆ , ಈಕೆ ಸದಾ ಧ್ಯಾನದಲ್ಲಿ ತಲ್ಲೀನಳಾಗಿರುತ್ತಾಳೆ. ಶಿವನನ್ನು ಪಡೆಯುವುದಕ್ಕೆ ಬ್ರಹ್ಮಚಾರಿ ನಾರದರ ಉಪದೇಶದಂತೆ ಅಖಂಡ ತಪಸ್ಸು ಮಾಡುತ್ತಾಳೆ. ತಪಸ್ಸನ್ನು ಮಾಡಿದ ಸಲುವಾಗಿ ಸದಾ ಧ್ಯಾನದಲ್ಲಿ ತಲ್ಲೀನಳಾಗಿರುತ್ತಾಳೆ.ನವರಾತ್ರಿಯ ಎರಡನೇ ದಿನ ಈ ತಾಯಿಯನ್ನು ಪೂಜಿಸಿದರೆ ವಿಶೇಷ ವರಗಳು ಸಿಗುತ್ತವೆ. ಸದಾ ಧ್ಯಾನಮಗ್ನಳಾದ ಬ್ರಹ್ಮಚಾರಿಣಿಗೆ ಭಕ್ತರ ಮೇಲೆ ಅಪಾರ ಕಾಳಜಿ , ನಿತ್ಯ ಕಲ್ಮಶವಿಲ್ಲದ ಮನಸ್ಸಿನಿಂದ ನವರಾತ್ರಿಯಲ್ಲಿ ಇವಳನ್ನು ಪೂಜಿಸಿದರೆ ಬೇಡಿದ ವರಗಳನ್ನು ಕರುಣಿಸುತ್ತಾಳೆ.ಬ್ರಹ್ಮಚಾರಿಣಿಯ ಆರಾಧನೆಯಿಂದ ಪೂಜೆಯ ಫಲಗಳು ಅನಂತವಾದವು. ಬ್ರಹ್ಮಚಾರಿಣಿ ತನ್ನನ್ನು ಪೂಜಿಸುವ ಭಕ್ತರಿಗೆ ಅನಂತ ಫಲಗಳನ್ನು ನೀಡುತ್ತಾಳೆ. ಇವಳ ಉಪಾಸನೆಯಿಂದ ಆಧ್ಯಾತ್ಮ ಸಾಧನೆ ಮಾಡಬಹುದು. ಇವಳ ಆರಾಧನೆಯಿಂದ ತ್ಯಾಗ ಮನೋಭಾವ, ವೈರಾಗ್ಯ, ಸದಾಚಾರ ಮತ್ತು ಸಂಯಮ ವೃದ್ಧಿಯಾಗುತ್ತದೆ. ಮನಸ್ಸು ಏಕಾಗ್ರತೆಯನ್ನು ಸಾಧಿಸುತ್ತದೆ.ಮನಸ್ಸು ಏಕಾಗ್ರತೆಯಲ್ಲಿ ಇರುತ್ತದೆ. ಇವಳ ಅನುಗ್ರಹವಿದ್ದರೆ ಸಕಲ ಕಾರ್ಯದಲ್ಲಿ ಜಯ ಸಾಧಿಸಬಹುದು. ನವರಾತ್ರಿಯ ಎರಡನೇ ದಿನ ಯೋಗಿಗಳು ಬ್ರಹ್ಮಚಾರಿಣಿಯ ಉಪಾಸನೆಯನ್ನು ಮಾಡುತ್ತಾರೆ ಎಂದು ಸಾಧಕನ ಮನಸ್ಸು ಸ್ವಾಧಿಷ್ಠಾನ ಚಕ್ರದಲ್ಲಿ ಸ್ಥಿತವಾಗಿರುತ್ತದೆ. ಈ ಚಕ್ರದಲ್ಲಿ ನೆಲೆನಿಂತ ಮನಸ್ಸುಳ್ಳ ಯೋಗಿಯೂ ಬ್ರಹ್ಮಚಾರಿಣಿಯ ಆಶೀರ್ವಾದಕ್ಕೆ ಪಾತ್ರನಾಗುತ್ತಾನೆ

 

 

 

ನವದುರ್ಗೆಯರಲ್ಲಿ ಮೂರನೇ ಶಕ್ತಿ ಚಂದ್ರಘಂಟ ದೇವಿ:ನವದುರ್ಗೆಯರಲ್ಲಿ ಮೂರನೆ ಶಕ್ತಿಯ ಹೆಸರು ಚಂದ್ರಘಂಟ ದೇವಿ. ಇವಳು ಶಿರದಲ್ಲಿ ಚಂದ್ರನನ್ನು ಕೂರಿಸಿಕೊಂಡಿದ್ದಾರೆ. ಅದಕ್ಕಾಗಿ ಈಕೆಯನ್ನು ಚಂದ್ರಘಂಟ ಎಂದು ಕರೆಯಲಾಗುತ್ತದೆ. ಚಂದ್ರಘಂಟಾಳ ರೂಪ ಅತ್ಯಂತ ವಿಶೇಷ.ಈಕೆ ಸಿಂಹದ ಮೇಲೆ ಕುಳಿತಿದ್ದಾಳೆ, ಗಂಟೆಯಾಕಾರದ ಅರ್ಧ ಚಂದ್ರ , ಹತ್ತು ಕೈಗಳಲ್ಲಿ ಖಡ್ಗ, ತ್ರಿಶೂಲ, ಶಸ್ತ್ರಗಳನ್ನು ಹಿಡಿದಿದ್ದಾಳೆ .ಯುದ್ಧಕ್ಕೆ ಸನ್ನದ್ಧಳಾಗಿ ಹೊರಟಂತೆ ಕಾಣುತ್ತಾಳೆ, ಚಂದ್ರಘಂಟ ದುಷ್ಟರ ದಮನ ಮಾಡಿ ಶಿಷ್ಟರ ರಕ್ಷಣೆಗೆ ಸದಾಕಾಲ ಸನ್ನದ್ಧಳಾಗಿರುತ್ತಾಳೆ. ಈ ದೇವಿಯ ಮಂತ್ರವನ್ನು ಜಪಿಸುವುದರಿಂದ ರಕ್ಷಣೆ ಸಿಗುತ್ತದೆ.ಚಂದ್ರಘಂಟ ಮಾತೆ ಸಕಲ ಐಶ್ವರ್ಯ ಅಧಿಕಾರವನ್ನು ಕರುಣಿಸುವ ದೇವತೆ. ನವರಾತ್ರಿಯ ಮೂರನೇ ದಿನ ಇವಳನ್ನು ಪೂಜಿಸಿದರೆ ಭಕ್ತರ ಕಷ್ಟಗಳು ಬಹುಬೇಗ ನಿವಾರಣೆಯಾಗುತ್ತವೆ.ಚಂದ್ರಘಂಟಳ ಆರಾಧನೆಯ ಫಲಗಳು ಹೀಗಿವೆ ಅವಳ ಕೃಪೆಯಿಂದ ಪಾಪ ಪರಿಹಾರವಾಗುತ್ತದೆ, ಚಂದ್ರಘಂಟಾ ದೇವಿಯ ಪೂಜೆಯಿಂದ ಭಯ ದೂರವಾಗುತ್ತದೆ, ದುಷ್ಟಶಕ್ತಿಗಳಿಂದ ರಕ್ಷಣೆ ಸಿಗುತ್ತದೆ, ಚಂದ್ರಘಂಟಳ ಆರಾಧನೆಯಿಂದ ಸಾಧಕರಿಗೆ ಆಧ್ಯಾತ್ಮಿಕ ದಿವ್ಯ ಅನುಭವ ಪಡೆಯಬಹುದು.ಈ ದೇವಿಯನ್ನು ಪೂಜಿಸುವುದರಲ್ಲಿ ಸಾಮ್ಯತೆ, ವಿನಮ್ರಭಾವ ಪ್ರಾಪ್ತಿಯಾಗುತ್ತದೆ. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಸಿಗುತ್ತದೆ. ಜೊತೆಗೆ ಇಹಲೋಕ ಮತ್ತು ಪರಲೋಕದಲ್ಲಿ ದೇವಿಯ ಕೃಪೆಯಿಂದ ಸದ್ಗತಿ ದೊರೆಯುತ್ತದೆ.ನವರಾತ್ರಿಯ ದುರ್ಗಾ ಉಪಾಸನೆಯಲ್ಲಿ ಮೂರನೇ ದಿನ ಪೂಜೆ ವಿಶೇಷವಾದದ್ದು ಈ ದಿನ ಸಾಧಕನ ಮನಸ್ಸು ಮಣಿಪುರ ಚಕ್ರವನ್ನು ಪ್ರವೇಶಿಸುತ್ತದೆ. ಚಂದ್ರಘಂಟಾಳ ಕೃಪೆಯಿಂದ ಸಾಧಕರಿಗೆ ವಿಶೇಷ ಅನುಭೂತಿಯಾಗುತ್ತದೆ.

ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡ ದೇವಿ ಆರಾಧನೆ:ನವದುರ್ಗೆಯರಲ್ಲಿ ಕೂಷ್ಮಾಂಡ ದೇವಿ ನಾಲ್ಕನೆಯವಳು, ಈಕೆ ತನ್ನ ಮಧುರ ನಗುವಿನಿಂದ ಬ್ರಹ್ಮಾಂಡವನ್ನು ರಚಿಸಿದ ಕಾರಣ ಇವಳನ್ನು ಕೂಷ್ಮಾಂಡ ದೇವಿ ಎನ್ನಲಾಗುತ್ತದೆ. ಇವಳು ಆದಿಶಕ್ತಿಯ ಪ್ರತಿರೂಪ, ಕೂಷ್ಮಾಂಡ ದೇವಿಯ ರೂಪ ವಿಶೇಷವಾಗಿ ಗಮನ ಸೆಳೆಯುತ್ತದೆ, ಇವಳು ಸಿಂಹವಾಹನೆಯಾಗಿದ್ದು, ತೇಜೋಮಯಿಯಾಗಿದ್ದಾಳೆ. ಇವಳಿಗೆ ಎಂಟು ಕೈಗಳು ತನ್ನ ಕೈಗಳಲ್ಲಿ ಕಮಂಡಲ, ಧನಸ್ಸು, ಬಾಣ, ಕಮಲ, ಅಮೃತ ತುಂಬಿದ ಕಲಶ, ಚಕ್ರ, ಗದೆ ಹಿಡಿದಿದ್ದಾಳೆ. ವಿಶೇಷ ಎಂದರೆ ಕೂಷ್ಮಾಂಡ ದೇವಿಯ ಪ್ರಭೆಯ ಕಾಂತಿ ಸೂರ್ಯನಿಗೆ ಸಮಾನಾಗಿರುತ್ತದೆ. ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡ ದೇವಿಯನ್ನು ಪೂಜಿಸಲಾಗುತ್ತದೆ. ಸಂಸ್ಕೃತದಲ್ಲಿ ಕುಂಬಳಕಾಯಿಯನ್ನು ಕೂಷ್ಮಾಂಡ ಎನ್ನಲಾಗುತ್ತದೆ. ಈ ದೇವಿಗೆ ಕುಂಬಳಕಾಯಿ ಅತ್ಯಂತ ಪ್ರಿಯ. ಈಕೆಯನ್ನು ಶ್ರದ್ಧೆಯಿಂದ ಪೂಜಿಸಿದರೆ ಕಷ್ಟ ಪರಿಹರಿಸುತ್ತಾಳೆ ಭಕ್ತರ ಅಜ್ಞಾನವನ್ನು ದೂರ ಮಾಡುತ್ತಾಳೆ. ಕೂಷ್ಮಾಂಡ ದೇವಿಯ ಆರಾಧನೆಯ ಪೂಜಾ ಫಲಗಳು ಅತ್ಯಂತ ವಿಶೇಷ….. ಈಕೆಯ ಆರಾಧನೆಯಿಂದ ರೋಗಗಳಿಂದ ಮುಕ್ತಿ ಪಡೆಯಬಹುದು.ಇವಳು ಭಕ್ತರ ದುಃಖ ದೂರ ಮಾಡುತ್ತಾಳೆ. ಆಯಸ್ಸು, ಆರೋಗ್ಯ ವೃದ್ಧಿಯಾಗುತ್ತದೆ, ಜೀವನದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ, ನವರಾತ್ರಿಯ ನಾಲ್ಕನೇ ದಿನ ಸಾಧಕರು ಕೂಷ್ಮಾಂಡ ದೇವಿಯ ಆರಾಧನೆ ಮಾಡುತ್ತಾರೆ. ಈ ದಿನ ಸಾಧಕನ ಮನಸ್ಸು ಅನಾಹತ ಚಕ್ರದಲ್ಲಿ ನೆಲೆನಿಲ್ಲುತ್ತದೆ. ಈ ದೇವಿಯ ಆರಾಧನೆಯಿಂದ ಮನಸ್ಸು ಏಕಾಗ್ರತೆಗೆ ಸಾಧಿಸುತ್ತದೆ.

 

ನವರಾತ್ರಿಯ ಐದನೇ ದಿನ ಸ್ಕಂದಮಾತಾ ದೇವಿಯ ಆರಾಧನೆ:ನವರಾತ್ರಿಯಲ್ಲಿ ಸ್ಕಂದಮಾತ ಳದ್ದು 5ನೇ ರೂಪ. ತಾರಕಾಸುರ ಎನ್ನುವ ರಾಕ್ಷಸನನ್ನು ಸಂಹಾರ ಮಾಡುವುದಕ್ಕೆ ದೇವಿ ಸ್ಕಂದಳಿಗೆ ಜನ್ಮ ಕೊಡುತ್ತಾಳೆ. ಅದಕ್ಕಾಗಿಯೇ ಈತನನ್ನು ಸ್ಕಂದಮಾತಾ ಎಂದು ಕರೆಯಲಾಗುತ್ತದೆ. ಸಿಂಹ ರೂಡೆಯಾಗಿರುವ ಶ್ವೇತವರ್ಣೆಗೆ 4 ಭುಜಗಳು, ಎರಡು ಕೈಗಳಲ್ಲಿ ಕಮಂಡಲಗಳಿವೆ, ಬಲತೊಡೆಯ ಮೇಲೆ ಬಾಲರೂಪಿಯಾದ ಸ್ಕಂದ ಕುಳಿತಿದ್ದಾನೆ. ಸ್ಕಂದಮಾತಳದ್ದು ಕರುಣೆ ತುಂಬಿದ ತಾಯಿಯ ಸುಂದರ ರೂಪ.ಸ್ಕಂದನ ತಾಯಿಯಾಗಿರುವ ಸ್ಕಂದ ಮಾತೆ ಮಾತೃಹೃದಯಿ. ಭಕ್ತರು ಈ ತಾಯಿಯ ಮಂತ್ರವನ್ನು ಜಪಿಸಿದರೆ ಶೀಘ್ರ ಫಲಗಳನ್ನು ಪಡೆಯಬಹುದು. ನವರಾತ್ರಿಯ ಪೂಜೆಯಲ್ಲಿ 5ನೇ ದಿನದ ಮಹತ್ವದ ಕುರಿತು ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಈ ದಿನ ಸ್ಕಂದಮಾತಾ ಪೂಜೆಯಿಂದ ಆದಿಶಕ್ತಿಯ ಸಂಪೂರ್ಣ ಕೃಪೆ ಮತ್ತು ಆಶೀರ್ವಾದ ಪ್ರಾಪ್ತಿಯಾಗುತ್ತದೆ. ಸ್ಕಂದಮಾತಾಳ ಆರಾಧನೆಯ ಫಲಗಳು ವಿಶೇಷವಾಗಿವೆ…ಏಕೆ ತಪ್ಪು ಮಾಡಿದ ತನ್ನ ಭಕ್ತರನ್ನು ಬೇಗ ಕ್ಷಮಿಸುತ್ತಾಳೆ. ಇವಳ ಆರಾಧನೆಯಿಂದ ಪರಮ ಶಾಂತಿ, ಸುಖ, ಪ್ರಾಪ್ತಿಯಾಗುತ್ತದೆ.ಈಕೆಯನ್ನು ಪೂಜಿಸಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ.ಇವಳನ್ನು ಪೂಜಿಸುವವರಿಗೆ ಮುಖದಲ್ಲಿ ಸಾತ್ವಿಕ ಕಳೆ ಇರುತ್ತದೆ. ನವರಾತ್ರಿಯ 5ನೇ ದಿನ ಸಾಧಕನ ಮನಸ್ಸು ವಿಶುದ್ಧ ಚಕ್ರದಲ್ಲಿ ನೆಲೆಸುತ್ತದೆ. ಇವರನ್ನು ಸ್ಕಂದಮಾತ ಆರಾಧನೆಯಿಂದ ಮಾಡುವ ಸಾಧಕನಿಗೆ ಮನಸ್ಸಿನ ಮೇಲೆ ಮಾನಸಿಕ ಹಿಡಿತವನ್ನು ಸಾಧಿಸುತ್ತಾನೆ. ಮನಸ್ಸು ದೇವಿಯಲ್ಲಿ ತಲ್ಲೀನವಾಗುತ್ತದೆ.

ನವರಾತ್ರಿಯ ಆರನೇ ದಿನ ಸಿಂಹವಾಹಿನಿ ಕಾತ್ಯಾಯಿನಿ ದೇವಿಯ ಪೂಜೆ:ನವರಾತ್ರಿಯ ಆರನೇ ದಿನ ಕಾತ್ಯಾಯಿನಿ ದೇವಿಯ ಆರಾಧನೆ ತುಂಬಾ ವಿಶೇಷ. ತ್ರಿಮೂರ್ತಿಗಳ ಅಂಶವೇ ಈ ದೇವಿ. ಈಕೆಯನ್ನು ಮೊದಲು ಕಾತ್ಯಾಯನ ಋಷಿ ಪೂಜಿಸಿದ್ದರಿಂದ ಇವಳಿಗೆ ಕಾತ್ಯಾಯಿನಿ ಎನ್ನುವ ಹೆಸರು ಬಂತು. ಕಾತ್ಯಾಯಿನಿ ಎಂದರೆ ಪರೋಪಕಾರದ ಪ್ರತಿರೂಪ. ಕಾತ್ಯಾಯಿನಿ ರೂಪ ಅತ್ಯಂತ ವಿಶೇಷವಾಗಿದ್ದು, ಇವಳು ಸಿಂಹವನ್ನು ವಾಹನವಾಗಿಸಿ ಕೊಂಡವಳು, ಕಾತ್ಯಾಯಿನಿಯದ್ದು ಒಂದು ಭವ್ಯ ಸ್ವರೂಪ, ಇವಳು ಸದಾ ಬಂಗಾರದಂತೆ ಹೊಳೆಯುವಳು, ಈ ದೇವಿಗೆ ನಾಲ್ಕು ಭುಜಗಳು ಬಲಗೈಯ ಮೇಲಿನ ಕೈ ಅಭಯಮುದ್ರೆಯಾಗಿದ್ದರೆ ಬಲಗಡೆಯ ಕೆಳಗಿನ ಕೈ ವರಮುದ್ರೆಯಲ್ಲಿದೆ. ಎಡಗಡೆಯ ಮೇಲಿನ ಕೈಯಲ್ಲಿ ಖಡ್ಗವನ್ನು ಹಿಡಿದಿದ್ದಾಳೆ, ಕೆಳಗಿನ ಕೈಯಲ್ಲಿ ಕಮಲವಿದೆ, ಕಾತ್ಯಾಯಿನಿ ದುಷ್ಟರನ್ನು ಸಂಹರಿಸುವ, ಶಿಷ್ಟರ ಉದ್ಧಾರ ಮಾಡುವ ಶಕ್ತಿದೇವತೆ. ಈಕೆಯನ್ನು ಆರಾಧಿಸಿದರೆ ದುಷ್ಟಶಕ್ತಿಗಳ ನಾಶವಾಗುತ್ತವೆ. ಕಾತ್ಯಾಯಿನಿ ಮೋಕ್ಷ ನೀಡುತ್ತಾಳೆ ಎಂದು ನಮ್ಮ ಪುರಾಣಗಳು ಹೇಳುತ್ತವೆ . ಶ್ರೀ ಕೃಷ್ಣನನ್ನು ಪತಿಯಾಗಿ ಪಡೆಯುವುದಕ್ಕೆ ಗೋಪಿಕೆಯರು ದೇವಿಯನ್ನು ಪೂಜಿಸಿದ್ದರು.ನವರಾತ್ರಿಯ ಆರನೇ ದಿನ ಕಾತ್ಯಾಯಿನಿಯನ್ನು ಪೂಜಿಸಿದರೆ ಶ್ರೇಷ್ಠ ಫಲಗಳನ್ನು ಪಡೆಯಬಹುದು. ಕಾತ್ಯಾಯಿನಿಯ ಆರಾಧನೆಯ ಫಲಗಳು ಅನೇಕ. ಇವಳು ಅಮೋಘ ಫಲಗಳನ್ನು ಕರುಣಿಸುತ್ತಾಳೆ. ಈಕೆಯನ್ನು ಪೂಜಿಸಿದರೆ ಧರ್ಮ, ಅರ್ಥ, ಕಾಮ, ಮೋಕ್ಷ ಪ್ರಾಪ್ತಿಯಾಗುತ್ತದೆ. ಭಾಯನಕ ರೋಗಗಳು ದೂರವಾಗುತ್ತವೆ. ಶೋಕ ಪರಿಹಾರವಾಗುತ್ತೆ,ದುಃಖ ನಿವಾರಣೆಯಾಗಿ ಜನ್ಮಜನ್ಮಾಂತರದ ಪಾಪಗಳು ಪರಿಹಾರವಾಗುತ್ತವೆ, ಜೀವನದಲ್ಲಿ ಉನ್ನತ ಪದವಿ ಪ್ರಾಪ್ತಿಯಾಗುತ್ತದೆ. ಈಕೆಯ ಪೂಜೆಯಿಂದ ಶತ್ರುಗಳ ಶತ್ರುತ್ವದ ಗುಣ ಧ್ವಂಸ ವಾಗುತ್ತದೆ. ಅಷ್ಟೇ ಅಲ್ಲ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯು ಪ್ರಾಪ್ತಿಯಾಗುತ್ತದೆ. ನವರಾತ್ರಿಯ ಆರನೇ ದಿನ ಕಾತ್ಯಾಯಿನಿ ದೇವಿಯ ಆರಾಧನೆ ಅತ್ಯಂತ ವಿಶಿಷ್ಟ. ಅಂದು ಸಾಧಕನ ಮನಸ್ಸು ಆಜ್ಞಾ ಚಕ್ರದಲ್ಲಿ ನೆಲೆಗೊಳ್ಳುತ್ತದೆ, ಯೋಗಸಾಧನೆಯಲ್ಲಿ ಆಜ್ಞಾ ಚಕ್ರದ ಸ್ಥಾನ ಅತ್ಯಂತ ಮಹತ್ವದ್ದು, ಕಾತ್ಯಾಯಿನಿ ಚರಣದಲ್ಲಿ ತಮ್ಮ ಸರ್ವಸ್ವವನ್ನು ಅರ್ಪಿಸಿಕೊಂಡರೆ ದೇವಿಯ ದರ್ಶನವಾಗುತ್ತದೆ.

 

 

 

ನವರಾತ್ರಿಯ ಏಳನೇ ದಿನ ಕಾಳರಾತ್ರಿ ಆರಾಧನೆ:ನವದುರ್ಗೆಯರಲ್ಲಿ ಕಾಳ ರಾತ್ರಿಯದ್ದು ಏಳನೇ ರೂಪ. ಕಾಳರಾತ್ರಿಯದ್ದು ಭಯಂಕರ ರೂಪ, ಈ ದೇವಿ ದುಷ್ಟರ ವಿನಾಶ ಮಾಡುವವಳು, ಕಾಳ ರಾತ್ರಿಯ ಸ್ವರೂಪ ಹೀಗಿದೆ… ಈ ದೇವಿ ನೋಡಲು ಅತ್ಯಂತ ಭಯಂಕರ, ವಿಶೇಷ ಎಂದರೆ ಕಾಳರಾತ್ರಿ ಕತ್ತೆಯ ಮೇಲೆ ಸವಾರಿ ಮಾಡುತ್ತಾಳೆ , ತಲೆಕೂದಲನ್ನು ಹರಡಿಕೊಂಡಿದ್ದಾಳೆ ನೋಡಲು ಭಯಂಕರವಾಗಿ ಕಾಣಿಸುತ್ತಾಳೆ,ಇವಳ ಕೊರಳಲ್ಲಿ ಧರಿಸಿರುವ ಹಾರ ಮಿಂಚಿನಂತೆ ಹೊಳೆಯುತ್ತದೆ,ಇವಳಿಗೆ ಮೂರು ಕಣ್ಣುಗಳಿವೆ,ಇವಳು ಉಸಿರಾಡಿದರೆ ಅಗ್ನಿ ಜ್ವಾಲೆ ಹೊರಹೊಮ್ಮುತ್ತದೆ, ಇವಳಿಗೆ ನಾಲ್ಕು ಭುಜಗಳು, ಬಲಭಾಗದ ಎರಡು ಕೈ ವರಮುದ್ರೆ, ಅಭಯಮುದ್ರೆಯಲ್ಲಿದೆ ಎಡಗೈಯಲ್ಲಿ ಖಡ್ಗ ಮತ್ತು ಕಬ್ಬಿಣದ ಅಸ್ತ್ರವಿದೆ. ಕಾಳರಾತ್ರಿ ದೇವಿ ದುಷ್ಟರಿಗೆ ಮೃತ್ಯು ದೇವತೆಯಾದ ರಕ್ಷಾ ಕವಚ. ಈಕೆ ತನ್ನವರನ್ನು ರಕ್ಷಣೆ ಮಾಡಿ ಪಾಪವನ್ನು ನಾಶ ಮಾಡುತ್ತಾಳೆ. ನವರಾತ್ರಿಯಲ್ಲಿ ಇವಳ ಉಪಾಸನೆ ಅತ್ಯಂತ ಫಲದಾಯಕವಾಗಿವೆ. ಇವಳ ಆರಾಧನೆಯಿಂದ ಸಮಸ್ತ ಪಾಪಗಳೂ ನಾಶವಾಗುತ್ತವೆ,ದುಃಖಗಳು ದೂರವಾಗುತ್ತವೆ,ಇವಳ ಪೂಜೆಯಿಂದ ಪುಣ್ಯ ಪ್ರಾಪ್ತಿಯಾಗುತ್ತದೆ, ಕಾಳರಾತ್ರಿಯ ಆರಾಧನೆಯಿಂದ ದುಷ್ಟ ಶಕ್ತಿಗಳ ಕಾಟ ದೂರವಾಗುತ್ತದೆ,ಸಕಲ ದುಃಖಗಳು ದೂರವಾಗುತ್ತವೆ. ನವರಾತ್ರಿಯ ಏಳನೇ ದಿನ ಸಾಧಕರಿಗೆ ಹೆಚ್ಚು ಮಹತ್ವದ ದಿನ, ಈ ದಿನ ಕಾಳರಾತ್ರಿಯ ಉಪಾಸನೆ ಮಾಡುವ ಸಾಧಕನಿಗೆ ಶಕ್ತಿಯು ಸಹಸ್ರಾನ ಚಕ್ರದಲ್ಲಿ ನೆಲೆಗೊಳ್ಳುತ್ತದೆ, ಅಂದು ಬ್ರಹ್ಮಾಂಡದ ಎಲ್ಲಾ ಸಿದ್ಧಿಗಳ ಬಾಗಿಲು ತೆರೆದುಕೊಳ್ಳುತ್ತದೆ.

ನವರಾತ್ರಿಯ ಕೊನೆಯ ಮೂರು ದಿನಗಳು ದೇವಿಗೆ ಇರುತ್ತದೆ ಸಾತ್ವಿಕ ರೂಪಾ ಸರ್ವ ದುಃಖಗಳನ್ನು ದೂರ ಮಾಡುತ್ತಾಳೆ ಮಹಾಗೌರಿ.ನವದುರ್ಗೆಯರಲ್ಲಿ ಮಹಾಗೌರಿಯದ್ದು ಎಂಟನೇ ರೂಪ.ಈಕೆ ಸಾಕ್ಷಾತ್ ಪರಮೇಶ್ವರನಿಗೆ ಶಕ್ತಿ ನೀಡಿದ ಮಹಾನ ತಾಯಿ. ಪಾರ್ವತಿಯ ರೂಪದಲ್ಲಿ ಶಿವನನ್ನು ಪತಿಯಾಗಿ ಪಡೆಯುವುದಕ್ಕೆ ತಪಸ್ಸು ಮಾಡಿದವಳು, ಮಹಾ ಗೌರಿಯನ್ನು ಆದಿಶಕ್ತಿಯ ಪ್ರತಿರೂಪ ಎನ್ನಲಾಗುತ್ತದೆ. ಇವಳ ರೂಪ ಅತ್ಯಂತ ಸುಂದರ, ವೃಷಭ ವಾಹನೆಯಾದ ಮಹಾಗೌರಿ ಶಾಂತ ಸ್ವರೂಪಿಣಿ, ಶ್ವೇತವರ್ಣೆಯಾದ ಇವಳ ವಸ್ತ್ರ ಮತ್ತು ಆಭರಣ ಶುಭ್ರ ಬಿಳಿಯ ಬಣ್ಣದ್ದು, ಮಹಾಗೌರಿ ಚತುರ್ಭುಜೆಯಾಗಿದ್ದಾಳೆ, ಬಲಗೈನ ಮೇಲಿನ ಕೈ ಅಭಯಮುದ್ರೆಯಲ್ಲಿದೆ, ಕೆಳಗಿನ ಬಲಗೈಯಲ್ಲಿ ತ್ರಿಶೂಲ ಹಿಡಿದಿದ್ದಾಳೆ, ಎಡಗೈಯ ಮೇಲಿನ ಕೈಯಲ್ಲಿ ಡಮರುಗ ಹಿಡಿದಿದ್ದಾಳೆ, ಎಡಗೈನ ಕೆಳಗಿನ ಕೈ ವರಮುದ್ರೆಯಲ್ಲಿದೆ. ಮಹಾಗೌರಿ ಶುಂಭ-ನಿಶುಂಭರನ್ನು ವದೆ ಮಾಡಿ ದೇವಾನುದೇವತೆಗಳನ್ನು ರಕ್ಷಿಸುತ್ತಾಳೆ. ನವರಾತ್ರಿಯ ಎಂಟನೇ ದಿನ ಅಂದರೆ ದುರ್ಗಾಷ್ಟಮಿಯ ದಿನ ಈಕೆಯನ್ನು ಪೂಜಿಸಿದರೆ ವಿಶೇಷ ಫಲ ಪ್ರಾಪ್ತಿಯಾಗುತ್ತದೆ.
ದುರ್ಗಾಷ್ಟಮಿ ದಿನ ಮಹಾಗೌರಿಯನ್ನು ಉಪಾಸನೆ ಮಾಡುವ ಪರಂಪರೆ ಇದೆ. ಅವಳ ಆರಾಧನೆ ಕೃಪೆಯಿಂದ ಲೌಕಿಕ ಮತ್ತು ಅಲೌಕಿಕ ಸುಖ ಪ್ರಾಪ್ತಿಯಾಗುತ್ತದೆ. ಮಹಾಗೌರಿಯ ಪೂಜೆಯ ಫಲ ವಿಶೇಷವಾಗಿವೆ. ಈಕೆ ಶೀಘ್ರ ಫಲ ಕೊಡುವವಳು, ಮಹಾಗೌರಿ ದುಃಖವನ್ನು ದೂರ ಮಾಡುತ್ತಾಳೆ, ತನ್ನನ್ನು ಪೂಜಿಸುವ ಭಕ್ತರಲ್ಲಿ ಇರುವ ಕೆಟ್ಟತನಗಳನ್ನು ದೂರ ಮಾಡುತ್ತಾಳೆ, ಪೂರ್ವ ಜನ್ಮದ ಪಾಪಗಳನ್ನು ಪರಿಹರಿಸುವ, ಕಷ್ಟಗಳನ್ನು ದೂರ ಮಾಡುವ, ಸಾಧ್ಯವಿಲ್ಲದ ಕಾರ್ಯಗಳು ನೆರವೇರುತ್ತವೆ, ದುಷ್ಟ ಶಕ್ತಿಗಳನ್ನು ನಾಶ ಮಾಡುವ ಶಕ್ತಿ ದೇವತೆ ದುರ್ಗಾಷ್ಟಮಿ. ಜಗತ್ ಜನನಿಯಾದ ಮಹಾಗೌರಿಗೆ ತುಂಬಾ ಶ್ರೇಷ್ಠವಾದ ದಿನವದು, ಇವಳ ಧ್ಯಾನ ,ಸ್ಮರಣೆ, ಪೂಜೆ ಆರಾಧನೆ ಮಾಡುವುದು ಅತ್ಯಂತ ಶ್ರೇಯಸ್ಕರ. ಇವಳ ಮಹಿಮೆಯನ್ನು ಪುರಾಣಗಳಲ್ಲಿ ಹಾಡಿ ಹೊಗಳಿದ್ದಾರೆ. ಯಾರು ಮಹಾಗೌರಿಯನ್ನು ಪೂಜಿಸುತ್ತಾರೋ, ಅವರು ಸಕಲ ಸಂಪತ್ತನ್ನು ಪಡೆಯಬಹುದು.

 

ನವರಾತ್ರಿಯ ಒಂಬತ್ತನೇ ದಿನ ಸಿದ್ಧಿದಾತ್ರಿ ಆರಾಧನೆ:ನವರಾತ್ರಿಯ ಒಂಬತ್ತನೇ ದಿನ ಸಿದ್ದಿದಾತ್ರಿ ಪೂಜೆ. ನವ ದುರ್ಗೆಯರಲ್ಲಿ ಕೊನೆಯವಳು ಸಿದ್ದಿದಾತ್ರಿ. ಮಾರ್ಕಂಡೇಯ ಪುರಾಣಗಳ ಪ್ರಕಾರ ಇವಳು ಎಲ್ಲಾ ರೀತಿಯ ಸಿದ್ದಿಯನ್ನು ಕರುಣಿಸುವಳು, ಆದ್ದರಿಂದಲೇ ಇವಳನ್ನು ಸಿದ್ಧಿದಾತ್ರಿ ಎನ್ನಲಾಗುತ್ತದೆ. ಸಿದ್ಧಿದಾತ್ರಿ ಸ್ವರೂಪ ಅತ್ಯಂತ ವಿಶಿಷ್ಟವಾಗಿದೆ. ಇವಳು ಕಮಲದ ಮೇಲೆ ಕುಳಿತಿದ್ದಾಳೆ, ಸಿದ್ಧಿದಾತ್ರಿ ಚತುರ್ಭುಜಗಳಿವೆ, ಮೇಲಿನ ಬಲಗೈಯಲ್ಲಿ ಚಕ್ರ, ಎಡಗೈಯಲ್ಲಿ ಶಂಕ ಹಿಡಿದಿದ್ದಾಳೆ , ಮತ್ತು ಕಮಲ ಪುಷ್ಪವನ್ನು ಹಿಡಿದುಕೊಂಡಿದ್ದಾಳೆ. ಸಿದ್ಧಿದಾತ್ರಿ ಮಹಾಲಕ್ಷ್ಮಿಯ ಸ್ವರೂಪ , ಭಕ್ತರ ಭಕ್ತಿಗೆ ಪ್ರಸನ್ನಳಾಗಿ ದೇವಿ ವರವನ್ನು ಕೊಡುತ್ತಾಳೆ. ನವರಾತ್ರಿಯ ಒಂಬತ್ತನೇ ದಿನ ಸಿದ್ಧಿದಾತ್ರಿಯನ್ನು ಆರಾಧನೆ ಮಾಡಿದರೆ ಶ್ರೇಯಸ್ಕರ, ಪ್ರತಿಯೊಬ್ಬ ಮನುಷ್ಯನು ತಾಯಿ ಸಿದ್ಧಿದಾತ್ರಿಯ ಕೃಪೆ ಪಡೆಯುವುದಕ್ಕೆ, ನಿರಂತರ ಪ್ರಯತ್ನ ಮಾಡಬೇಕು. ಈ ದೇವಿಯ ಉಪಾಸನೆಯಿಂದ ಭಕ್ತರ ಮತ್ತು ಸಾಧಕರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.ಈ ದೇವಿಯ ಆರಾಧನೆಯ ಪಲಗಳು ಹೀಗಿವೆ… ಸರ್ವ ಸಿದ್ಧಿಗಳನ್ನು ಕೊಡುವ ದೇವಿ ಸಿದ್ಧಿದಾತ್ರಿ.
ಈ ದೇವಿಯ ಉಪಾಸನೆಯಿಂದ ಅಷ್ಟ ಸಿದ್ಧಿಗಳು ಪ್ರಾಪ್ತಿಯಾಗುತ್ತವೆ.ಈ ದೇವಿಯನ್ನು ಪೂಜಿಸಿದರೆ ರಕ್ಷಣೆ ಸಿಗುತ್ತದೆ, ಸರ್ವ ಕಾರ್ಯದಲ್ಲಿ ವಿಜಯ ದೊರಕಿಸುವ ಸಾಮರ್ಥ್ಯ ಕರುಣಿಸುತ್ತಾಳೆ, ದುಃಖವನ್ನು ದೂರ ಮಾಡುತ್ತಾಳೆ, ಈ ಮಹಾತಾಯಿ ಭಕ್ತರಿಗೆ ಸುಖ ಭೋಗಗಳನ್ನು ನೀಡಿ ಮೋಕ್ಷವನ್ನು ದಯಪಾಲಿಸುವ ಶಕ್ತಿದೇವತೆ ಈಕೆ, ಸಿದ್ಧಿದಾತ್ರಿ ನವರಾತ್ರಿಯಲ್ಲಿ ನವದುರ್ಗೆಯರನ್ನು ಪೂಜಿಸುವ ಪದ್ಧತಿ ಅತ್ಯಂತ ವಿಶೇಷ. 9 ದಿನಗಳ ಕಾಲ 9 ದೇವಿಯರ ಪೂಜೆಯನ್ನು ನಿಷ್ಟೆಯಿಂದ ಮಾಡಿದರೆ ಯಶಸ್ಸು ಸಿಗುವುದು ಖಚಿತ. ಮಹಾನ್ ಶಕ್ತಿ ಸ್ವರೂಪಿಣಿಯರ ಆಶೀರ್ವಾದ ನಮ್ಮ ಮೇಲೆ ಇದ್ದರೆ ಜೀವನದಲ್ಲಿ ಕಷ್ಟಗಳು ಇರುವುದಿಲ್ಲ, ಶತ್ರುಗಳ ಭಯ ಇರುವುದಿಲ್ಲ, ಸಾಧನೆಗೆ ಬೇಕಾದ ಶಕ್ತಿ ದೊರೆಯುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top