ದೀಪಾವಳಿಯಲ್ಲಿನ ಕಾರ್ತಿಕ ಮಾಸದ ಪಾಡ್ಯ ಅಂದರೆ ಬಲಿಪಾಡ್ಯ. ಈ ದಿನದಂದು ಭಗವಂತನು ವಾಮನ ರೂಪದಲ್ಲಿ ಅವತರಿಸಿ ಸರ್ವಸ್ವ ವನ್ನು ಅರ್ಪಿಸಿ ದಾಸನಾಗುವ ಸಿದ್ಧತೆಯನ್ನೂ ತೋರಿಸಿದ್ದಾನೆ.
ಪೌರಾಣಿಕ ಕಥೆ:
ರಕ್ಕಸರ ಗುಂಪಿಗೆ ರಾಜನಾದ ಬಲಿ ಚಕ್ರವರ್ತಿಯು ಪಾತಾಳ ಮತ್ತು ಭೂ ಲೋಕವನ್ನು ಜಯಿಸಿ ಸ್ವರ್ಗಲೋಕ ಗೆಲ್ಲ ಬೇಕು ಎಂಬ ಮಹಾದಾಶೆಯಿಂದ ಅಶ್ವ ಮೇಧಯಾಗ ಕೈಗೊಂಡಾಗ ದೇವಾನು ದೇವತೆಗಳು ತತ್ತರಿಸಿ ವಿಷ್ಣುವಿಗೆ ಮೊರೆ ಹೋಗುವರು. ವಿಷ್ಣು ವಾಮನ ಅವತಾರ ತಾಳಿ ಯಾಗ ನಡೆದ ಸ್ಥಳಕ್ಕೆ ಬಂದು ಮೂರು ಹೆಜ್ಜೆಗಳನ್ನಿರಿಸಲು ಜಾಗವನ್ನು ಕೊಡು ಎಂದು ಬಲಿಗೆ ಕೇಳಿದ.
ವಿಷ್ಣು ವಾಮನರೂಪದಿಂದ ಬಂದಿದ್ದು ಬಲಿಚಕ್ರವರ್ತಿಯ ಗುರು ಶುಕ್ರಾಚಾರ್ಯರಿಗೆ ತಿಳಿಯಿತು. ನೀನು ಯಾವ ವಾಗ್ದಾನವನ್ನು ಮಾಡಬೇಡ ಎಂದರೂ ಸಹ ಬಲಿ ಕೊಟ್ಟ ಮಾತಿನ ಧರ್ಮದ ಮಾರ್ಗದಿಂದ ಹಿಂದೆ ಸರಿಯಲಿಲ್ಲ. ಕಮಂಡಲಿನಿಂದ ತೀರ್ಥವನ್ನು ಸುರಿದಾಗ ವಾಮನ ಬೃಹದಾಕಾರ ದಿಂದ ಭೂಮಿ–ಆಕಾಶದೆತ್ತರಕ್ಕೆ ಬೆಳೆದು ನಿಂತು ಒಂದು ಹೆಜ್ಜೆಯನ್ನು ಭೂಮಿಗೆ ಇನ್ನೊಂದು ಹೆಜ್ಜೆಯನ್ನು ಆಕಾಶದಲ್ಲಿಟ್ಟು ಮೂರನೇ ಹಜ್ಜೆ ಇಡಲು ಸ್ಥಳವಿಲ್ಲದ ಕಾರಣ ಹೆಜ್ಜೆಯನ್ನು ಎಲ್ಲಿರಿಸಬೇಕೆಂದು ಪ್ರಶ್ನಿಸಿದನು.
ಮೂರನೇ ಹೆಜ್ಜೆಯನ್ನು ತಲೆಯ ಮೇಲೆ ಇರಿಸೆಂದು ಬಲಿಯು ಹೇಳಿದಾಗ ವಾಮನ ಹೆಜ್ಜೆಯನ್ನಿರಿಸಿ ಪಾತಾಳಕ್ಕೆ ತಳ್ಳಿದ.
ವಾಸ್ತವದಲ್ಲಿ ಬಲಿಯು ಒಬ್ಬ ಅಸುರ ಕುಲದವನಾಗಿದ್ದಾನೆ. ಆದರೆ ಅವನ ಉದಾರ ಮನಸ್ಸಿನಿಂದ ಭಗವಂತನಿಗೆ ಶರಣಾಗಿ ತನ್ನ ಸರ್ವಸ್ವವನ್ನು ಅರ್ಪಿಸಿದ್ದರಿಂದ ಭಗವಂತನು ಅವನಿಗೆ ಯೋಗ್ಯ ಮಾರ್ಗದರ್ಶನವನ್ನು ಮಾಡಿ ಅವನ ಜೀವನಕ್ಕೆ ಹೊಸ ಸ್ವರೂಪವನ್ನು ನೀಡಿ ಅವನನ್ನು ಉದ್ಧರಿಸಿದನು. ಅವನ ರಾಜ್ಯದಲ್ಲಿ ಅಸುರೀ ವೃತ್ತಿಗೆ ಪೂರಕವಾದಂತಹ ಭೋಗಮಯ ವಿಚಾರಗಳನ್ನು ತೊಲಗಿಸಿ ಆ ಸ್ಥಾನದಲ್ಲಿ ತ್ಯಾಗದ ಭಾವನೆಯನ್ನು ಮೂಡಿಸಿ ಜನತೆಗೆ ದೈವೀವಿಚಾರಗಳನ್ನು ನೀಡಿ ಸುಖ ಹಾಗೂ ಸಮೃದ್ಧಿಯ ಜೀವನವನ್ನು ಪ್ರದಾನಿಸಿದನು.
ಅಮಾವಾಸ್ಯೆ ಮರುದಿನವೇ ಬಲಿಪಾಡ್ಯ. ಈ ದಿನದಂದು ಈಶ್ವರೀ ಕಾರ್ಯವೆಂದು ಜನತೆಯ ಸೇವೆಯನ್ನು ಮಾಡುತ್ತಾ ದೇವತ್ವವನ್ನು ತಲುಪಿದ ಬಲಿಯ ಸ್ಮರಣೆಯನ್ನು ಮಾಡಬೇಕು. ಬಲಿಪಾಡ್ಯದಂದು ಬಲಿಯ ಪೂಜೆಯನ್ನು ಮಾಡುತ್ತಾರೆ. ಬಲಿಯು ರಾಕ್ಷಸ ಕುಲದಲ್ಲಿ ಜನ್ಮವೆತ್ತಿದರೂ ಅವನ ಪುಣ್ಯದಿಂದಾಗಿ ವಾಮನ ರೂಪದಲ್ಲಿ ಅವತರಿಸಿದ ಭಗವಂತನ ಕೃಪೆಯು ಅವನ ಮೇಲಾಯಿತು. ಅವನು ಸಾತ್ತ್ವಿಕ ಪ್ರವೃತ್ತಿಯುಳ್ಳ ದಾನಿರಾಜನಾಗಿದ್ದನು. ಪ್ರತಿಯೊಬ್ಬ ಮನುಷ್ಯನು ಪ್ರಾರಂಭದಲ್ಲಿ ಅಜ್ಞಾನಿಯಾಗಿರುವುದರಿಂದ ಅವನಿಂದ ಕುಕರ್ಮಗಳು ಘಟಿಸುತ್ತಿರುತ್ತವೆ; ಆದರೆ ಜ್ಞಾನ ಹಾಗೂ ಈಶ್ವರೀಕೃಪೆಯಿಂದ ದೇವತ್ವವನ್ನು ತಲುಪಬಹುದು ಎಂಬುದು ಈ ಉದಾಹರಣೆಯಿಂದ ಕಂಡುಬರುತ್ತದೆ. ಈ ರೀತಿ ನಿರ್ಭಯತೆಯಿಂದ ಸತ್ಕರ್ಮವನ್ನು ಪಾಲಿಸಿದರೆ ಅವನಿಗೆ ಮೃತ್ಯು ಭಯವು ಇರುವುದಿಲ್ಲ. ಯಮನು ಸಹ ಅವನ ಬಂಧು ಮಿತ್ರನಾಗುತ್ತಾನೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
