ಹಿಂದೂ ಪಂಚಾಂಗದ ಪ್ರಕಾರ 12 ಮಾಸಗಳಿವೆ ಅದರಲ್ಲಿ ಚಳಿಗಾಲ ಆರಂಭವಾಗುವ ಮಾಸವೇ ಕಾರ್ತಿಕ ಮಾಸ. ಇದೀಗ ಕಾರ್ತಿಕ ಮಾಸ ಆರಂಭವಾಗಿದೆ.ಈ ಕಾರ್ತಿಕ ಮಾಸ ಅತ್ಯಂತ ಪವಿತ್ರ ಮತ್ತು ಶ್ರೇಷ್ಠ ಮಾಸ ಎಂದು ಹೇಳಲಾಗುತ್ತದೆ. ಕಾರ್ತಿಕ ಮಾಸದಲ್ಲಿ ಜ್ಯೋತಿ ಬೆಳಗುವ ಮೂಲಕ ಮನಸ್ಸಿನಲ್ಲಿರುವ ಅಂಧಕಾರವನ್ನು ದೂರ ಮಾಡಿಕೊಳ್ಳಬಹುದು. ಪರಮೇಶ್ವರನ ಆರಾಧನೆಗೆ ಇದು ಪರ್ವಕಾಲ.
ಕಾರ್ತಿಕ ಮಾಸದಲ್ಲಿ ದೀಪಾರಾಧನೆ ಅತ್ಯಂತ ಶ್ರೇಯಸ್ಕರ:ಕಾರ್ತಿಕ ಮಾಸದಲ್ಲಿ ದೀಪಾರಾಧನೆಗೆ ವಿಶೇಷ ಮಹತ್ವವಿದೆ. ಭಗವಂತನ ಪ್ರೀತ್ಯರ್ಥವಾಗಿರುವ ಕಾರ್ತಿಕ ಮಾಸದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ದೀಪ ಬೆಳಗಬೇಕು. ಕಾರ್ತಿಕ ಮಾಸದಲ್ಲಿ ದೀಪಾರಾಧನೆಯಿಂದ ಐಶ್ವರ್ಯ, ಸಂಪತ್ತು, ಆರೋಗ್ಯ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.ಕಾರ್ತಿಕ ಮಾಸದ ಹುಣ್ಣಿಮೆಯ ದಿನ ದೀಪಾರಾಧನೆ ಅತ್ಯಂತ ಶ್ರೇಷ್ಠ. ಹೀಗಾಗಿ ಪ್ರಸಿದ್ಧ ದೇವಾಲಯಗಳಲ್ಲಿ ಕಾರ್ತಿಕ ದೀಪೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ.
ಕಾರ್ತಿಕ ಮಾಸದ ಹಿನ್ನೆಲೆಯನ್ನು ನೋಡುವುದಾದರೆ ಈ ಮಾಸದ ಹೆಸರು ಕಾರ್ತಿಕ ಎಂಬ ಪದದಿಂದ ಬರಲಾಗಿದೆ ಎಂದು ಹೇಳಲಾಗುತ್ತದೆ ಎನ್ನುವುದು ಒಂದು ನಕ್ಷತ್ರದ ಹೆಸರು ಈ ತಿಂಗಳಲ್ಲಿ ಕಾರ್ತಿಕ ಎನ್ನುವ ನಕ್ಷತ್ರ ಚಂದ್ರನಿಗೆ ಬಹಳ ಸಮೀಪ ಬರುತ್ತದೆ. ಇದರ ಪರಿಣಾಮ ಈ ಮಾಸದಲ್ಲಿ ಹುಣ್ಣಿಮೆಯ ಚಂದ್ರ ಕಾರ್ತಿಕ ನಕ್ಷತ್ರದಲ್ಲಿ ಸಂಚರಿಸುತ್ತಾನೆ. ಹೀಗಾಗಿ ಕಾರ್ತಿಕ ಎನ್ನುವ ನಕ್ಷತ್ರದ ಹೆಸರನ್ನು ಈ ಮಾಸಕ್ಕೆ ಇಡಲಾಗಿದೆ. ಪ್ರತಿ ಮಾಸಕ್ಕೆ ಒಬ್ಬ ನಾಮಕ ದೇವರು ಇರುತ್ತಾನೆಂದು, ಆ ದೇವರ ಆರಾಧನೆಯಿಂದ ಅತ್ಯಂತ ಶುಭವಾಗುತ್ತದೆ.ಕಾರ್ತಿಕ ಮಾಸದ ಅಧಿಪತಿ ಪರಮೇಶ್ವರ ಈ ಮಾಸದಲ್ಲಿ ಶಿವಾಲಯಗಳಿಗೆ ಭೇಟಿ ನೀಡುವುದು ಪುಣ್ಯಪ್ರದ. ಈ ಮಾಸದಲ್ಲಿ ಶಿವ ಕ್ಷೇತ್ರಗಳಿಗೆ ಭೇಟಿ ನೀಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಶಿವಪುರಾಣದಲ್ಲಿ ಉಲ್ಲೇಖವಿದೆ.
ಕಾರ್ತಿಕ ಮಾಸದ ಪ್ರಮುಖ ಆಚರಣೆಗಳು ಏನು ? ಈ ಮಾಸದಲ್ಲಿ ಯಾವ್ಯಾವ ಪೂಜೆಗಳನ್ನು ಮಾಡಲೇಬೇಕು ?ಕಾರ್ತಿಕ ಮಾಸದಲ್ಲಿ ಮಾಡುವ ದೇವತಾರಾಧನೆಯ ಫಲಗಳೇನು ?
ಕಾರ್ತಿಕ ಮಾಸ ಎಂದರೆ ಅಧ್ಯಾತ್ಮ ಸಾಧಕರ ಮಾಸ. ಈ ಮಾಸದಲ್ಲಿ ಕೈಗೊಳ್ಳುವ ಪೂಜೆ ಮತ್ತು ವ್ರತಗಳಲ್ಲಿ ಹೆಚ್ಚು ಫಲ ಪ್ರಾಪ್ತಿಯಾಗುತ್ತದೆ. ಕಾರ್ತಿಕ ಮಾಸದಲ್ಲಿ ಬರುವ ಕೆಲವು ವಿಶೇಷ ದಿನಗಳನ್ನು ಆಚರಿಸುವುದರಿಂದ ನಮ್ಮ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎನ್ನಲಾಗುತ್ತದೆ.ಕಾರ್ತಿಕ ಮಾಸದ ಆಚರಣೆ ಇಂದು ನಿನ್ನೆಯದಲ್ಲ, ಈ ಮಾಸದ ಆಚರಣೆಯ ಬಗ್ಗೆ ಸೃಷ್ಟಿಕರ್ತನಾದ ಸಾಕ್ಷಾತ್ ಬ್ರಹ್ಮದೇವನೇ ಕೆಲವೊಂದು ನಿಯಮಗಳನ್ನು ಹೇಳಿದ್ದಾನೆ.ಈ ನಿಯಮಗಳ ಬಗ್ಗೆ ಕಾರ್ತಿಕ ಪುರಾಣದಲ್ಲಿ ಉಲ್ಲೇಖವಿದೆ. ಸಾಕ್ಷಾತ್ ಬ್ರಹ್ಮದೇವನೇ ಹೇಳಿರುವ ಮಾತುಗಳಿವು. ಕಾರ್ತಿಕ ಮಾಸದಲ್ಲಿ ನಿಯಮ ನಿಷ್ಠೆಯಿಂದ ಉಪವಾಸವಿದ್ದು ದೇವಸ್ಥಾನಕ್ಕೆ ಹೋಗಿ ದೀಪ ಹಚ್ಚಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ.
ಕಾರ್ತಿಕ ಮಾಸದ ಬಿದಿಗೆಯ ದಿನ ಬಗನಿ ಹಸ್ತ ಭೋಜನ:ಕಾರ್ತಿಕ ಮಾಸದ ಬಿದಿಗೆಯ ದಿನ ಸಹೋದರ ಸಹೋದರಿಯರ ಮನೆಗೆ ಹೋಗಿ ಅವರ ಕೈಯಿಂದ ಅಡುಗೆ ಮಾಡಿಸಿ ಭೋಜನ ಮಾಡಬೇಕು. ಅವಳಿಗೆ ತಮ್ಮ ಕೈಲಾದ ಕಾಣಿಕೆ ಮತ್ತು ಉಡುಗೊರೆಗಳನ್ನು ನೀಡಬೇಕು.ಶನಿ ಕಾಟ ಇರುವವರು ದಾನ ಮಾಡಿದರೆ ಶನಿ ಕಾಟದಿಂದ ಮುಕ್ತಿ ಸಿಗುತ್ತದೆ.
ಕಾರ್ತಿಕ ಶುಕ್ಲ ಪಂಚಮಿ ಗರುಡ ಪಂಚಮಿ:ಕಾರ್ತಿಕ ಮಾಸದ ಶುಕ್ಲ ಪಂಚಮಿಯನ್ನು ಗರುಡ ಪಂಚಮಿ ಎಂದು ಕರೆಯಲಾಗುತ್ತದೆ. ಗರುಡ ಕಶ್ಯಪ ಮುನಿಯ ಪುತ್ರ. ಅಷ್ಟೇ ಅಲ್ಲ ಪರಮಾತ್ಮ ವಿಷ್ಣುವಿನ ವಾಹನ. ಹೀಗಾಗಿ ಗರುಡನನ್ನು ದೇವತಾರೂಪಿ ಎನ್ನಲಾಗುತ್ತದೆ. ಆದ್ದರಿಂದ ಈ ದಿನ ಗರುಡ ದೇವರನ್ನು ವಿಶೇಷವಾಗಿ ಆರಾಧಿಸಲಾಗುತ್ತದೆ. ವಿಷ್ಣುವಿನ ದೇವಾಲಯಗಳಲ್ಲಿ ಗರುಡ ಪಂಚಮಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಕಾರ್ತಿಕ ಶುಕ್ಲ ಸಪ್ತಮಿ ಯಜ್ಞಾವಲ್ಕ್ಯ ಜಯಂತಿ:ಕಾರ್ತಿಕ ಶುಕ್ಲ ಸಪ್ತಮಿಯಂದು ಯಜ್ಞಾವಲ್ಕ್ಯ ಜಯಂತಿಯನ್ನು ಆಚರಿಸಲಾಗುತ್ತದೆ. ಯಜುರ್ವೇದದಲ್ಲಿ ಎರಡು ಭಾಗಗಳಿವೆ. ಒಂದು ಕೃಷ್ಣ ಯಜುರ್ವೇದ ಮತ್ತೊಂದು ಶುಕ್ಲ ಯಜುರ್ವೇದ. ಯಜ್ಞಾವಲ್ಕ್ಯರು ಸೂರ್ಯ ದೇವನಿಂದ ಶುಕ್ಲ ಯಜುರ್ವೇದವನ್ನು ಕಲಿತು ಈ ಭೂಲೋಕಕ್ಕೆ ತಂದರು ಎನ್ನಲಾಗುತ್ತದೆ.
ಕಾರ್ತಿಕ ಶುಕ್ಲ ಪಕ್ಷದ ದ್ವಾದಶಿ ಉತ್ತನ ದ್ವಾದಶಿ:ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ತುಳಸಿ ಹಬ್ಬವನ್ನು ಆಚರಿಸಲಾಗುತ್ತದೆ. ತುಳಸಿ ಹಬ್ಬವನ್ನು ಕಿರು ದೀಪಾವಳಿ ಎಂದೂ ಕೂಡ ಕರೆಯಲಾಗುತ್ತದೆ. ಶ್ರೀಹರಿಯ ಜೊತೆಯಲ್ಲಿ ತುಳಸಿಯ ಕಲ್ಯಾಣ ನಡೆಯುತ್ತದೆ. ತುಳಸಿ ಸಸ್ಯ ಒಂದು ಗಿಡಮೂಲಿಕೆ ಸಸ್ಯವಲ್ಲ. ಅದು ವಾತಾವರಣದಲ್ಲಿರುವ ಆಮ್ಲಜನಕವನ್ನು ಹೆಚ್ಚಿಸುವ ಶಕ್ತಿಯನ್ನು ಹೊಂದಿದೆ.ತುಳಸಿ ಆರಾಧನೆಯನ್ನು ಮಾಡುವ ಮಹಿಳೆಯರಿಗೆ ಸಕಲ ಸೌಭಾಗ್ಯ ಸಿದ್ಧಿಸುತ್ತದೆ ಎನ್ನಲಾಗುತ್ತದೆ. ಹಾಗಾಗಿ ಸುಮಂಗಲಿಯರೆಲ್ಲಾ ಸೇರಿ ತುಳಸಿ ಪೂಜೆಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಇನ್ನೂ ನಾಲ್ಕು ತಿಂಗಳು ಯೋಗ ನಿದ್ರೆಯಲ್ಲಿದ್ದ ನಾರಾಯಣ ಇದೇ ದಿನ ಯೋಗ ನಿದ್ರೆಯಿಂದ ಎಚ್ಚೆತ್ತು ಕೊಳ್ಳುತ್ತಾನೆ ಎಂದು ಹೇಳಲಾಗುತ್ತದೆ.
ಕಾರ್ತಿಕ ಶುಕ್ಲ ಪಕ್ಷದ ಹುಣ್ಣಿಮೆ ಚಂದ್ರ ಜಯಂತಿ:ಕಾರ್ತಿಕ ಮಾಸದ ಶುಕ್ಲಪಕ್ಷದ ಹುಣ್ಣಿಮೆಯ ದಿನವನ್ನು ಚಂದ್ರ ಜಯಂತಿಯೆಂದು ಆಚರಿಸಲಾಗುತ್ತದೆ.
ಕಾರ್ತಿಕ ಶುಕ್ಲ ಪಕ್ಷದ ಹುಣ್ಣಿಮೆಯ ದಿನ ಚಂದ್ರನ ಬೆಳಕು ಎಲ್ಲದಕ್ಕಿಂತ ಹೆಚ್ಚು.ಅಂದರೆ ಶೇಕಡ ಏಳರಷ್ಟು ಹೆಚ್ಚು ಪ್ರಕಾಶಮಾನವಾಗಿ ಇರುತ್ತದೆ . ಯಾಕೆಂದರೆ ಈ ದಿನ ಚಂದ್ರ ಭೂಮಿಗೆ ಅತ್ಯಂತ ಸಮೀಪದಲ್ಲಿ ಇರುತ್ತಾನೆ. ಈ ದಿನದ ಆಚರಣೆಯ ಹಿಂದೆ ಒಂದು ಪೌರಾಣಿಕ ಕಥೆಯೂ ಕೂಡ ಇದೆ.
ಚಂದ್ರನು ಶಿವನನ್ನು ಕುರಿತು ಹಲವು ವರ್ಷಗಳ ಕಾಲ ತಪಸ್ಸು ಮಾಡಿದ, ಆ ಸಮಯದಲ್ಲಿ ದೇವತೆಗಳು ಚಂದ್ರನ ತಪಸ್ಸನ್ನು ಭಂಗ ಪಡಿಸಲು ಪ್ರಯತ್ನಿಸಿದರು. ದೇವತೆಗಳು ಚಂದ್ರನ ತಪಸ್ಸನ್ನು ಕೆಡಿಸಲು ಮಾಡಿದ ಎಲ್ಲ ಪ್ರಯತ್ನಗಳು ವ್ಯರ್ಥವಾಗಿ ಏಕಾಗ್ರತೆಯಿಂದ ತಪಸ್ಸು ಮಾಡಿದ.ಚಂದ್ರನ ತಪಸ್ಸಿಗೆ ಮೆಚ್ಚಿದ ಶಿವ ವಿಶೇಷ ವರಗಳನ್ನು ಕರುಣಿಸುತ್ತಾನೆ.ನಿನ್ನ ಸೌಂದರ್ಯ ಹೀಗೆ ಇರಲಿ ನೀನು ನನ್ನ ಶಿರದ ಮೇಲೆ ಸದಾಕಾಲ ಇರು ಎಂದು ಶಿವ ಅನುಗ್ರಹಿಸಿದ. ಹೀಗಾಗಿ ಚಂದ್ರ ಶಿವನ ಶಿರದಲ್ಲಿ ಅರ್ಧ ಚಂದ್ರಾಕೃತಿಯಲ್ಲಿ ಶಾಶ್ವತವಾಗಿ ನೆಲೆಸಿದ್ದಾನೆ ಎನ್ನಲಾಗುತ್ತದೆ.
ಕಾರ್ತಿಕ ಮಾಸದ ಸೋಮವಾರಗಳು ಅತ್ಯಂತ ವಿಶೇಷ
ಕಾರ್ತಿಕ ಮಾಸದ ಸೋಮವಾರ ಗಳಿಗೆ ವಿಶೇಷ ಮಹತ್ವ ಇದೆ.ಶಿವನ ಮಾಸ ಎಂದೇ ಕರೆಯುವ ಕಾರ್ತಿಕ ಮಾಸದ ಸೋಮವಾರ ದಿನ ಶಿವನ ಪೂಜೆ ಮಾಡುವುದು ಅತ್ಯಂತ ಪುಣ್ಯಪ್ರದ. ಕಾರ್ತಿಕ ಸೋಮವಾರದ ಬ್ರಾಹ್ಮೀ ಮುಹೂರ್ತದಲ್ಲಿ ಶಿವನನ್ನು ಪೂಜಿಸಿದರೆ ಬೋಲೇನಾಥ ವಿಶೇಷ ವರಗಳನ್ನು ಕರುಣಿಸುತ್ತಾನೆ ಎನ್ನಲಾಗುತ್ತದೆ. ಕಾರ್ತಿಕ ಸೋಮವಾರಗಳ ದಿನ ಶಿವಲಿಂಗಕ್ಕೆ ಕ್ಷೀರಾಭಿಷೇಕ ಮಾಡುವುದರಿಂದ ಸಕಲ ಪಾಪಗಳು ಪರಿಹಾರವಾಗುತ್ತವೆ ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ. ಹೀಗಾಗಿ ಕಾರ್ತಿಕ ಸೋಮವಾರಗಳಂದು ಪ್ರದೋಷ ವ್ರತ ಆಚರಣೆ ಪುಣ್ಯಪ್ರದ. ಸೋಮವಾರದ ಅಧಿಪತಿ ಚಂದ್ರ, ಚಂದ್ರ ಮನೋಕಾರಕ ಎಂದರೆ ಮನಸ್ಸಿನ ಮೇಲೆ ಹಿಡಿತ ಸಾಧಿಸುವನು. ಯಾರು ತಮ್ಮ ಮನಸ್ಸನ್ನು ನಿಗ್ರಹದಲ್ಲಿ ಇಟ್ಟುಕೊಳ್ಳುತ್ತಾರೆ ಅಂತಹ ವ್ಯಕ್ತಿಗಳು ಉನ್ನತ ಸ್ಥಾನಕ್ಕೆ ಎರುತ್ತಾರೆ.ಚಂದ್ರನನ್ನು ಶಿರದಲ್ಲಿ ಧಾರಣೆ ಮಾಡಿಕೊಂಡಿರುವ ಶಿವನನ್ನು ಕುರಿತು ಧ್ಯಾನ ಮಾಡಿದರೆ ಅತ್ಯುತ್ತಮ ಜ್ಞಾನ ವಂತರಾಗುತ್ತಾರೆ ಎನ್ನಲಾಗುತ್ತದೆ.
ಕಾರ್ತಿಕ ಮಾಸದಲ್ಲಿ ನದಿ ಸ್ನಾನಕ್ಕೆ ವಿಶೇಷ ಪ್ರಾಮುಖ್ಯತೆ ಇದೆ.ಈ ಕಾರ್ತಿಕ ಮಾಸದಲ್ಲಿ ನದಿ ಸ್ನಾನಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ನಮ್ಮ ಹಿರಿಯರು ನೀಡಿದ್ದಾರೆ.
ಈ ಮಾಸದಲ್ಲಿ ಮಾಡುವ ನದಿ ಸ್ನಾನ ಭೌತಿಕ ಚಿಕಿತ್ಸೆಗೆ ಪೂರಕವಾಗಿದೆ. ಪವಿತ್ರ ಸ್ಥಾನ ಭೌತಿಕ ಕಲ್ಮಶವನ್ನು ಹೋಗಲಾಡಿಸುಸುವುದರ ಜೊತೆಗೆ ಮನುಷ್ಯನ ಕೋಪ ತಾಪಗಳನ್ನು ನಿಯಂತ್ರಿಸುತ್ತದೆ. ಹೀಗಾಗಿ ಈ ಮಾಸದಲ್ಲಿ ಕಾವೇರಿ ನದಿಯ ಸ್ನಾನ ಅತ್ಯಂತ ಶ್ರೇಯಸ್ಕರ ಎಂದು ಶಾಸ್ತ್ರಗಳು ಹೇಳಿವೆ.
ಕಾರ್ತಿಕ ಮಾಸದಲ್ಲಿ ಧಾತ್ರಿ ಹೋಮದ ಮಹತ್ವ:ಧಾತ್ರಿ ವೃಕ್ಷ ಎಂದರೆ ಬೆಟ್ಟದ ನೆಲ್ಲಿಕಾಯಿಯ ಮರ. ಬ್ರಹ್ಮ ದೇವರ ಆನಂದಬಾಷ್ಪ ಭೂಮಿಗೆ ಬಿದ್ದು ಹುಟ್ಟಿದ ವೃಕ್ಷವೇ ಬೆಟ್ಟದ ನೆಲ್ಲಿಕಾಯಿಯ ಮರ. ಕಾರ್ತಿಕ ಮಾಸದಲ್ಲಿ ಧಾತ್ರಿ ಹೋಮ ಅತ್ಯಂತ ವಿಶೇಷ ಆಚರಣೆಯಾಗಿದೆ. ಈ ಮಾಸದ ಹುಣ್ಣಿಮೆ, ತ್ರಯೋದಶಿ, ಚತುರ್ದಶಿಗಳಲ್ಲಿ ಧಾತ್ರಿ ಹೋಮವನ್ನು ಮಾಡಲಾಗುತ್ತದೆ. ಈ ಹೋಮವನ್ನು ಮಾಡಿದರೆ ಅಶ್ವಮೇಧ ಯಾಗ ಮಾಡಿದಷ್ಟೇ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
