ಐಸಿಸಿ ಟಿ20 ವಿಶ್ವಕಪ್‌ನ ಸೂಪರ್ 12 ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನ ತಂಡವನ್ನು ಜಿಂಬಾಬ್ವೆ ತಂಡವು ಮಣಿಸುವ ಮೂಲಕ ಜಗತ್ತಿಗೆ ಅಚ್ಚರಿ ಮೂಡಿಸಿದೆ. ಅದಾಗಲೇ ಮೊದಲ ಪಂದ್ಯವನ್ನ ಭಾರತದ ವಿರುದ್ಧ ಸೋತಿದ್ದ ಪಾಕಿಸ್ತಾನ ಹಾರ್ಟ್ ಮತ್ತಷ್ಟು ವೀಕ್ ಆಗಿದೆ.
ಜಿಂಬಾಬ್ವೆ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಆರಂಭವಾಗುವುದಕ್ಕೂ ಮೊದಲು ಮತ್ತು ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ‘ಫ್ರಾಡ್ ಪಾಕ್ ಮಿಸ್ಟರ್ ಬೀನ್’ ಎಂಬ ವಿಷಯ ಟ್ರೆಂಡ್ ಆಗಿತ್ತು. ಪಂದ್ಯ ಮುಗಿದ ಬಳಿಕ ಟ್ವೀಟ್ ಮಾಡಿದ್ದ ಜಿಂಬಾಬ್ವೆ ಅಧ್ಯಕ್ಷ ಎಮರ್ಸನ್ ‘ಮುಂದಿನ ಬಾರಿ ನಿಜವಾದ ಮಿಸ್ಟರ್ ಬೀನ್ ಅವರನ್ನು ಕಳುಹಿಸಿ’ ಎಂದು ಪಾಕಿಸ್ತಾನವನ್ನು ಮೂದಲಿಸಿದ್ದಾರೆ.
ಏನಿದು ವಿವಾದ:
ಫ್ರಾಡ್ ಪಾಕ್ ಮಿಸ್ಟರ್ ಬಿನ್ ಇಷ್ಟೊಂದು ವೈರಲ್ ಆಗಲು ಪ್ರಮುಖವಾಗಿ 2016ರಲ್ಲಿ ನಡೆದಿದ್ದ ಅದೊಂದು ಘಟನೆ ಪ್ರಮುಖ ಕಾರಣ. 2016 ರಲ್ಲಿ ಪಾಕ್ ಮೂಲದ ಹಾಸ್ಯನಟರಾಗಿರುವ ಆಸಿಫ್ ಮೊಹಮ್ಮದ್ ಎಂಬುವವರು ಜಿಂಬಾಬ್ವೆಯ ಹರಾರೆಯಲ್ಲಿ ನಡೆದಿದ್ದ ಇಂಟರ್‌ನ್ಯಾಷನಲ್ ಕಾನ್ಫರೆನ್ಸ್ನಲ್ಲಿ ಮಿಸ್ಟರ್ ಬೀನ್ ಹೆಸರಲ್ಲಿ ಹಾಸ್ಯ ಕಾರ್ಯಕ್ರಮವೊಂದನ್ನು ನಡೆಸಿಕೊಟ್ಟಿದ್ದರು. ಆದರೆ, ನಕಲಿ ಮಿಸ್ಟರ್ ಬೀನ್ ಎಂಬ ಸತ್ಯವರಿತ ಜಿಂಬಾಬ್ವೆ ಜನ ಈ ಕಾರ್ಯಕ್ರಮವನ್ನು ಅರ್ಧಕ್ಕೆ ತೊರೆದಿದ್ದರು. ಅಲ್ಲದೆ ಈ ನಕಲಿ ಬಿನ್ ಕಾರ್ಯಕ್ರಮವನ್ನು ಆಯೋಜಿಸಲು ನಮ್ಮ ಹಣವನ್ನು ವ್ಯರ್ಥ ಮಾಡಲಾಗಿದೆ ಎಂದು ಆಕ್ರೋಶಗೊಂಡಿದ್ದ ಜಿಂಬಾಬ್ವೆ ಜನ ಪಾಕಿಸ್ತಾನ ನಮಗೆ ವಂಚಿಸಿದೆ ಎಂದು ಆರೋಪಿಸಿದ್ದರು.
ಈ ಘಟನೆಗೆ ಸೇಡು ತೀರಿಸಿಕೊಂಡಿರುವುದಾಗಿ ಜಿಂಬಾಬ್ವೆ ಕ್ರಿಕೆಟ್ ಆಭಿಮಾನಿಗಳು ಈಗ ಟ್ವಿಟರ್‌ನಲ್ಲಿ ಪೋಸ್ಟ್ ಪ್ರಕಟಿಸಿದ್ದಾರೆ. ದೇಶದ ಅಧ್ಯಕ್ಷರೂ ಇದಕ್ಕೆ ಧ್ವನಿಗೂಡಿಸಿದ್ದಾರೆ. ಜಿಂಬಾಬ್ವೆ ವಿರುದ್ಧ ಪಾಕ್ ಸೋಲುತ್ತಿದ್ದಂತೆ ಮಿ. ಬೀನ್ ಟ್ರೆಂಡ್ ಆಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
