ಒಂದು ಕಾಲದಲ್ಲಿ ಕನ್ನಡವೂ ಸೇರಿದಂತೆ ನಾನಾ ಭಾಷೆಗಳಲ್ಲಿ ನಟಿಸಿ ಖ್ಯಾತಿಗಳಿಸಿದ್ದ ನಟಿ ರಂಭಾ ಅವರ ಕಾರು ಅಪಘಾತಕ್ಕೀಡಾಗಿದೆ. ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಹಿಂತಿರುಗುತ್ತಿದ್ದಾಗ ರಂಭಾ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದಿದ್ದು ಕಾರು ನುಜ್ಜುಗುಜ್ಜಾಗಿದೆ. ಈ ಅಪಘಾತದಲ್ಲಿ ರಾಂಬಾ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು ಅವರ ಮಗಳು ಸಾಶಾ ತೀವ್ರವಾಗಿ ಗಾಯಗೊಂಡಿದ್ದಾರೆ. ಸದ್ಯ ಸಾಶಾ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಂಭಾ ಮತ್ತು ಪತಿ ಇಂದ್ರಕುಮಾರ್ ಪದ್ಮನಾಥನ್ ಕೆನಡಾದ ಒಂಟಾರಿಯೊ ಪ್ರಾಂತ್ಯದ ರಾಜಧಾನಿ ಟೊರೊಂಟೊದಲ್ಲಿ ನೆಲೆಸಿದ್ದಾರೆ. ಈ ದಂಪತಿಗೆ ಇಬ್ಬರು ಪುತ್ರಿಯರಿದ್ದು, ಓರ್ವ ಪುತ್ರನಿದ್ದಾನೆ. ಟೊರೊಂಟೊದಲ್ಲೇ ಅವರು ಮಕ್ಕಳಿಗೆ ಶಿಕ್ಷಣ ಕೂಡ ಕೊಡಿಸುತ್ತಿದ್ದಾರೆ. ಶಾಲೆ ಮುಗಿಸಿಕೊಂಡು ಮಕ್ಕಳನ್ನು ಕರೆತರುವಾಗ ಕಾರು ಅಪಘಾತಕ್ಕೀಡಾಗಿದೆ. ರಂಭಾ ಚಲಾಯಿಸುತ್ತಿದ್ದ ಕಾರಿನಲ್ಲಿ ಇಬ್ಬರು ಮಕ್ಕಳು ಮತ್ತು ಮಕ್ಕಳನ್ನು ನೋಡಿಕೊಳ್ಳುತ್ತಿರುವ ಕೆಲಸದಾಕೆ ಇದ್ದರು ಎಂದು ಹೇಳಲಾಗುತ್ತಿದ್ದು, ಕಿರಿಯ ಪುತ್ರಿ ಸಾಶಾಗೆ ತೀವ್ರ ಗಾಯಗಳಾಗಿವೆ ಎನ್ನಲಾಗಿದೆ. ಉಳಿದಂತೆ ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ.ಈ ಎಲ್ಲ ವಿವರಗಳನ್ನು ಸ್ವತಃ ರಂಭಾ ಅವರೇ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.
ರಂಭಾ ಪೋಸ್ಟ್:
” ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಹೋಗುವ ಮಾರ್ಗದಲ್ಲಿ ನಮ್ಮ ಕಾರಿಗೆ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಸಣ್ಣ ಪುಟ್ಟ ಗಾಯಗಳೊಂದಿಗೆ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ನನ್ನ ಪುಟ್ಟ ಸಾಶಾ ಇನ್ನೂ ಆಸ್ಪತ್ರೆಯಲ್ಲಿ ಕೆಟ್ಟ ದಿನಗಳು ಕೆಟ್ಟ ಸಮಯ ಅನುಭವಿಸುತ್ತಿದ್ದಾಳೆ. ದಯವಿಟ್ಟು ನಮಗಾಗಿ ಪ್ರಾರ್ಥಿಸಿ ನಿಮ್ಮ ಪ್ರಾರ್ಥನೆಗಳು ಬಹಳಷ್ಟು ಮುಖ್ಯ” ಎಂದು ನಟಿಯ ಮಗಳು ಸಶಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
