fbpx
ಸಮಾಚಾರ

ನಿಮ್ಮ ಸ್ಮಾರ್ಟ್ ಫೋನ್ ಬ್ಯಾಕ್ ಕೇಸ್ ಹಳದಿ ಬಣ್ಣಕ್ಕೆ ತಿರುಗಿದೆಯಾ? ಚಿಂತಿಸಬೇಡಿ ಸ್ವಚ್ಛಗೊಳಿಸಲು ಈ ಸುಲಭ ವಿಧಾನವನ್ನು ಅನುಸರಿಸಿ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಸ್ಮಾರ್ಟ್ ಫೋನ್ ಬಳಸುತ್ತಾರೆ. ಹೀಗಾಗಿ ತಮ್ಮ ಸ್ಮಾರ್ಟ್ ಫೋನ್ ಗಳಿಗೆ ಹಲವು ರೀತಿಯ ಸುರಕ್ಷಿತ ಕ್ರಮಗಳನ್ನು ಸಹ ಅನುಸರಿಸುತ್ತಾರೆ. ಟೆಂಪೆರ್ ಗ್ಲಾಸ್ ಇಂದ ಹಿಡಿದು ಬ್ಯಾಕ್ ಕೇಸ್ ವರೆಗೂ ಪ್ರತಿಯೊಂದರಲ್ಲೂ ಸಹ ಜನ ಹೆಚ್ಚಿನ ಸುರಕ್ಷತೆಯನ್ನು ಕೈಗೊಳ್ಳುತ್ತಾರೆ. ಆದರೆ ಇದೀಗ ಮಾರುಕಟ್ಟೆಯಲ್ಲಿ ಹಲವು ಬಗೆಯ ಬ್ಯಾಕ್ ಕವರ್ ಗಳು ಸಿಗುತ್ತದೆ. ಡಿಸೈನ್ ಗಳಿಂದ ಹಿಡಿದು ಪಾರದರ್ಶಕತೆಯಿಂದ ಕೂಡಿದ ಬ್ಯಾಕ್ ಕವರ್ ಗಳು ಲಭ್ಯವಾಗುತ್ತದೆ.

ಕೆಲವರು ತಮ್ಮ ಮೊಬೈಲ್ ಚೆನ್ನಾಗಿ ಕಾಣಲು ಪಾರದರ್ಶಕ ಪೌಚ್‌ಗಳನ್ನು ಬಳಸುತ್ತಾರೆ. ಆದರೆ ಈ ಪೌಚ್ ಗಳನ್ನು ನೀವು ಗಮನಿಸಿದರೆ ಕೆಲವು ದಿನಗಳ ನಂತರ ಆ ಬ್ಯಾಕ್ ಕವರ್ ಹಳದಿ ಬಣ್ಣಕ್ಕೆ ತಿರುಗುತ್ತದೆ. ಈ ರೀತಿಯ ಸಮಸ್ಯೆಗಳನ್ನು ಹಲವಾರು ಜನರು ಅನುಭವಿಸುತ್ತಾರೆ. ಆದರೆ ಇದರ ಕುರಿತು ಯಾರಿಗೂ ಸಹ ನಿಜವಾದ ಕಾರಣ ತಿಳಿದಿಲ್ಲ ಮತ್ತು ಬ್ಯಾಕ್ ಕವರ್ ಈ ರೀತಿಯಾದರೆ ಅದನ್ನು ಹೇಗೆ ಸ್ವಚ್ಛಗೊಳಿಸಬೇಕೆಂದು ಸಹ ತಿಳಿದಿರಲಿಲ್ಲ. ಇದೀಗ ಇದರ ಕುರಿತು ನಾವು ನಿಮಗೆ ತಿಳಿಸಿಕೊಡುತ್ತೇವೆ.

ಸಾಮಾನ್ಯವಾಗಿ ಈ ಟ್ರಾನ್ಪರೆಂಟ್ ಕವರ್‌ಗಳನ್ನು TPU (ಥರ್ಮೋ ಪ್ಲಾಸ್ಟಿಕ್ ಪಾಲಿ ಯುರೆಥೇನ್) ವಸ್ತುಗಳಿಂದ ತಯಾರಿಸುತ್ತಾರೆ. ಸೂರ್ಯನ ಶಾಖದಿಂದ ಬರುವ ಯುವಿ ಕಿರಣಗಳು ಬ್ಯಾಕ್ ಕವರ್​ನ ಬಣ್ಣ ಹಳದಿಗೆ ತಿರುಗಲು ಮುಖ್ಯ ಕಾರಣ. ಕವರ್‌ನಲ್ಲಿರುವ TPU ರಾಸಾಯನಿಕಗಳು ಸೂರ್ಯನ ಕಿರಣಗಳನ್ನು ತಡೆದು ನಿಲ್ಲುವ ಶಕ್ತಿ ಹೊಂದಿಲ್ಲ. ಹೀಗಾಗಿ ಇದು ಬಣ್ಣವನ್ನು ಬದಲಾಯಿಸುತ್ತದೆ.

ಇದಲ್ಲದೆ ನೀವು ಮೊಬೈಲ್ ಚಾರ್ಜ್ ಮಾಡುವಾಗ ಅಥವಾ ಸತತವಾಗಿ ಮೊಬೈಲ್ ಬಳಸುತ್ತಿರುವಾಗ ಉಂಟಾಗುವ ಶಾಖದಿಂದ ಕೂಡ ಈ ರೀತಿ ನಿಮ್ಮ ಮೊಬೈಲ್ ಕವರ್ ಹಳದಿ ಬಣ್ಣಕ್ಕೆ ತಿರುಗುವ ಸಾದ್ಯತೆಗಳಿದೆ.

ಇದನ್ನು ಸ್ವಚ್ಛಗೊಳಿಸುವುದು ಹೇಗೆ?
ಇದೀಗ ಹಳದಿ ಬಣ್ಣಕ್ಕೆ ತಿರುಗಿದ ಬ್ಯಾಕ್ ಕವರ್ ಅನ್ನು ಸ್ವಚ್ಛಗೊಳಿಸಲು ಬಿಸಿ ನೀರಿನಲ್ಲಿ ಎರಡರಿಂದ ಮೂರು ಹನಿಗಳು ಪಾತ್ರೆ ತೊಳೆಯುವ ಸೋಪ್ ಹಾಕಿ. ನಂತರ ಹಳೆಯ ಬ್ರಷ್ ಬಳಸಿಕೊಂಡು ಬ್ಯಾಕ್ ಕವರ್ ಅನ್ನು ಉಜ್ಜಿ. ಇದಾದ ನಂತರ ನೀರಿನಲ್ಲಿ ಇದನ್ನು ಮತ್ತೆ ತೊಳೆಯಿರಿ. ಈಗ ನಿಮ್ಮ ಬ್ಯಾಕ್ ಕವರ್ ಮತ್ತೆ ಹಳೆಯ ಬಣ್ಣಕ್ಕೆ ಮರಳಿ ಬರುತ್ತದೆ. ಇದಲ್ಲದೆ ನಿಮ್ಮ ಮನೆಯಲ್ಲಿ ಅಡುಗೆ ಸೋಡಾ ಇದ್ದರೆ ಅದನ್ನು ನೀರಿನಲ್ಲಿ ಬೆರೆಸಿ ಬ್ರಷ್ ಇಂದ ಉಜ್ಜಿ ನಂತರ ತೊಳೆದರೆ ಬ್ಯಾಕ್ ಕವರ್ ಮತ್ತೆ ಹಳೆಯ ಬಣ್ಣಕ್ಕೆ ಮರಳಿ ಬರಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top