ಈಗಿನ ಕಾಲದಲ್ಲಿ ನಾವೆಲ್ಲ ಮನೆಗಳಿಗೆ ಮೊದಲು ಬಾಗಿಲು ಕೂಡಿಸುತ್ತೇವೆ. ನಂತರ ಹೆಚ್ಚಿನ ಭದ್ರತೆಗೆ ಬಾಗಿಲಿಗೆ ವಿಧವಿಧವಾದ ಬೀಗಗಳು, ಲಾಕ್ ಗಳು ನಂತರ ಗ್ರೀಲ್ ಗಳನ್ನು ಜೊಡಿಸುತ್ತೇವೆ. ಆದರೆ ಇಲ್ಲೊಂದು ಊರಿನಲ್ಲಿ ಮನೆಗಳಿಗೆ ಬಾಗಿಲುಗಳೇ ಇಲ್ಲ! ಇನ್ನು ಬೀಗ್ ಗ್ರೀಲ್ ದೂರದ ಮಾತು. ಬಾಗಿಲುಗಳೇ ಇಲ್ಲದೆ ಈ ಜನ ಶತಮಾನಗಳಿಂದ ಬದುಕುತ್ತಿದ್ದಾರೆ. ಇದರ ಹಿಂದಿದೆ ಒಂದು ಬಲವಾದ ನಂಬಿಕೆಯ ಸತ್ಯ ಕಥೆ
ಬರೋಬ್ಬರಿ 4000 ಮಂದಿ ವಾಸಿಸುತ್ತಿರುವ ಮಹಾರಾಷ್ಟ್ರದ ಶನಿ ಶಿಂಗ್ನಾಪುರದಲ್ಲಿ ಇದುವರೆಗೇ ಯಾವ ಮನೆಗೂ ಬಾಗಿಲೂ ಇಲ್ಲ, ಬೀಗವೂ ಇಲ್ಲ. ಶನಿ ಶಿಂಗ್ನಾಪುರ ದೇವಾಲಯವು ಮಹಾರಾಷ್ಟ್ರದ ಅಹ್ಮದಾನಗರ ವ್ಯಾಪ್ತಿಯಲ್ಲಿ ಬರುವ ನೆವಾಸ ತಾಲೂಕಿನ ಶಿಂಗ್ನಾಪುರ ಗ್ರಾಮದಲ್ಲಿದೆ. ಈ ಗ್ರಾಮವು ಅಹ್ಮದಾನಗರದಿಂದ ಸುಮಾರು 35 ಕಿ.ಮೀ. ದೂರದಲ್ಲಿದೆ.
ಈ ಊರಿನಲ್ಲಿ ಶನಿ ದೇವರ ದೇಗುಲ ನಿರ್ಮಿಸಿದ ಮೇಲೆ ಯಾವುದೇ ಕಳ್ಳತನ, ಹಿಂಸಾಚಾರ ಅಥವಾ ತಪ್ಪು ಕೆಲಸಗಳು ಜನರಿಂದ ನಡೆದಿಲ್ಲ. ಇಂದಿಗೂ ಇಲ್ಲಿಯ ಜನರು ಯಾವುದೇ ಭಯವಿಲ್ಲದೆ ಬದುಕುತ್ತಿದ್ದಾರೆ. ಜನ ನಿಬಿಡ ಪ್ರದೇಶಗಳಿಂದ ಕೂಡಿರುವ ಈ ಊರಿನಲ್ಲಿ ಮನೆಗಳು, ಅಂಗಡಿಗಳು, ಕಚೇರಿಗಳಲ್ಲೂ ಬಾಗಿಲುಗಳಿಲ್ಲ. ಮನೆಯಿಂದ ಆಚೆ ಹೋಗುವಾಗ ಮನೆಗೆ ಬೀಗ ಹಾಕುವುದು ಅಥವಾ ಬಾಗಿಲನ್ನು ಮುಚ್ಚುವ ಪದ್ಧತಿ ಇಲ್ಲಿನ ಜನರಿಗೆ ಇಲ್ಲ. ಶನಿಯ ರಕ್ಷಣೆ ಮತ್ತು ಕಾವಲು ಇರುವುದರಿಂದ ಇಲ್ಲಿ ಯಾವುದೇ ಕಳ್ಳತನನ ಅಥವಾ ಹಿಂಸಾಚಾರ ನಡೆಯದು ಎನ್ನುವ ನಂಬಿಕೆಯನ್ನು ಜನರು ಹೊಂದಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಇಂದಿಗೂ ಇಲ್ಲಿಯ ಪೋಲೀಸ್ ಠಾಣೆಯಲ್ಲಿ ಯಾವುದೇ ಕಳ್ಳತನ ಹಾಗೂ ಹಿಂಸಾರ ನಡೆದಿರುವ ದಾಖಲೆಗಳಿಲ್ಲ.
ಶನಿಯನ್ನು ಆರಾಧಿಸಲು ಬೆರಳೆಣಿಕೆಯ ದೇವಸ್ಥಾನಗಳಿವೆ. ಅವುಗಳಲ್ಲಿ ಶನಿ ಶಿಂಗ್ನಾಪುರದಲ್ಲಿ ಇರುವ ದೇವಸ್ಥಾನವು ಅತ್ಯಂತ ಪವಿತ್ರತೆ ಹಾಗೂ ಪವಾಡಶಕ್ತಿಯಿಂದ ಕೂಡಿದೆ. ಶನಿ ಲೀಲೆಯ ಪ್ರಕಾರ ಶನಿಯು ಕೆಲವು ಶಾಪಗಳಿಗೆ ಒಳಗಾಗಿದ್ದನು. ಹಾಗಾಗಿ ಅವನಿಗಾಗಿ ವಿಶೇಷ ದೇವಸ್ಥಾನಗಳ ಸಂಖ್ಯೆ ಕಡಿಮೆ ಎನ್ನಲಾಗುವುದು. ಆದರೆ ಅದೇ ಶನಿ ದೇವರನ್ನು ಅಥವಾ ಗ್ರಹವನ್ನು ಆರಾಧಿಸಿದರೆ ಜೀವನದಲ್ಲಿ ಸಾಕಷ್ಟು ಕಷ್ಟಗಳು ದೂರವಾಗುತ್ತವೆ ಎನ್ನುವ ನಂಬಿಕೆಯಿದೆ.
ಒಮ್ಮೆ ಕುರುಬನೊಬ್ಬ ಕಬ್ಬಿಣದ ಮೊನಚಾದ ಕಬ್ಬಿಣದ ಸಲಾಕೆಯಿಂದ ಕಲ್ಲನ್ನು ಕೀಳಲು ಹೋದನು. ಆಗ ಆ ಕಲ್ಲಿನಿಂದ ರಕ್ತಸ್ರಾವ ಉಂಟಾಯಿತು. ಈ ಪವಾಡವನ್ನು ಕಂಡು ಊರಿನ ಜನರು ಬೆರಗಾದರು. ಎಂತಹ ಲೀಲೆ ಎನ್ನುವುದರ ಬಗ್ಗೆಯೂ ಚಿಂತಿಸುತ್ತಿದ್ದರು. ಆ ರಾತ್ರಿ ಕುರುಬನು ನಿದ್ರೆ ಮಾಡಿರುವಾಗ ಕನಸಿನಲ್ಲಿ ಶನಿ ದೇವನು ಕಾಣಿಸಿಕೊಂಡನು. ನಾನು ಶನೀಶ್ವರ, ಅನನ್ಯವಾದ ಕಪ್ಪು ಕಲ್ಲುಗಳು ನನ್ನ ಸ್ವಯಂ ರೂಪ. ನನಗಾಗಿ ಒಂದು ದೇವಾಲಯವನ್ನು ಅಲ್ಲಿ ಕಟ್ಟಿಸಬೇಕು ಎಂದು ಹೇಳಿದನು. ಜೊತೆಗೆ ದೇವಾಲಯಕ್ಕೆ ಆಕಾಶವೇ ಛಾವಣಿಯಾಗಿರಬೇಕು. ಅದಕ್ಕಾಗಿ ಯಾವುದೇ ಕೃತಕ ಛಾವಣಿಯ ಅಗತ್ಯವಿಲ್ಲ. ತೆರೆದ ಆಕಾಶದ ಅಡಿಯಲ್ಲಿ ನನ್ನ ದೇಗುಲ ಇರಬೇಕು. ಶನಿವಾರ ತೈಲಾಭಿಷೇಕ ನಡೆಯಬೇಕು. ಈ ಊರಿನ ಜನರು ಸಹ ಯಾವುದೇ ಆತಂಕಗಳಿಗೆ ಒಳಗಾಗುವ ಅಗತ್ಯವಿಲ್ಲ. ಇಲ್ಲಿ ಯಾವುದೇ ಕಳ್ಳತನ ಅಥವಾ ಹಿಂಸಾಚಾರ ನಡೆಯದಂತೆ ನಾನು ರಕ್ಷಣೆ ನೀಡುವೆನು ಎಂದು ಹೇಳಿದನು ಎಂಬ ನಂಬಿಕೆ ಇದೆ. ನಂತರದ ದಿನಗಳಲ್ಲಿ ಕುರುಬ ಕಂಡ ಕನಸಿನ ಅನುಸಾರವೇ ದೇವಾಲಯವನ್ನು ಸೃಷ್ಟಿಸಲಾಯಿತು. ಹಾಗಾಗಿ ಆ ದೇವಾಲಯಕ್ಕೆ ಛಾವಣಿಗಳು ಇಲ್ಲದೆ ಇರುವುದು ಹಾಗು ಇಲ್ಲಿನ ಸುತ್ತ ಮುತ್ತ ಮನೆಗಳಿಗೆ ಬಾಗಿಲು ಇಲ್ಲದೆ ಇರುವುದು ಒಂದು ವಿಶೇಷವಾದ ಸಂಗತಿಯಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
