ಹನಿಟ್ರ್ಯಾಪ್ ಅಂದರೆ ಸುಂದರಿಯರನ್ನು ಕಳಿಸಿ, ಇನ್ನೊಬ್ಬ ಶ್ರೀಮಂತ, ಪ್ರತಿಭಾವಂತ ಅಥವಾ ಸಾಧಕನನ್ನು ಅವನ ನೆಲೆಯಿಂದ ಪದಚ್ಯುತಗೊಳಿಸುವುದು, ಸಿಕ್ಕಿಸಿ ಹಾಕುವುದು, ಅಥವಾ ಮನಸ್ಸು ಕ್ಷೋಭೆಗೀಡಾಗಿ ಗುರಿಯಿಂದ ವಿಚಲಿತನಾಗಿ ಹಾಳಾಗುವಂತೆ ಮಾಡುವುದು. ಈಗಿನ ಕಾಲದಲ್ಲಿ ಇನ್ನೊಬ್ಬ ಪ್ರತಿಭಾವಂತ, ಶ್ರೀಮಂತನನ್ನು ಹಗರಣದಲ್ಲಿ ಸಿಕ್ಕಿಸಿ ಹಾಕಲು ಹನಿಟ್ರ್ಯಾಪ್ ಮಾಡುತ್ತಿರುವಂತೆ,ಇತಿಹಾಸ, ಪುರಾಣ ಕಾಲದಲ್ಲೂ ನಡೆಯುತ್ತಿತ್ತು ಗೊತ್ತೇ?
ಇತಿಹಾಸದಲ್ಲೂ ಹಲವು ರಾಜರು ಹೀಗೆ ಹನಿಟ್ರ್ಯಾಪ್ ಬಳಸುತ್ತ ಇದ್ದುದಕ್ಕೆ ಕೆಲವು ದೃಷ್ಟಾಂತಗಳು ಸಿಗುತ್ತವೆ.
ಚಂದ್ರಗುಪ್ತ ಮೌರ್ಯನ ಮಹಾಮಂತ್ರಿಯಾಗಿದ್ದ ಚಾಣಕ್ಯ, ಶತ್ರುನಾಶಕ್ಕೆ ಹಾಗೂ ಶತ್ರುರಾಜರ ರಹಸ್ಯಗಳನ್ನು ತಿಳಿಯಲು ಅವರೆಡೆಗೆ ಸುಂದರಿಯರಾದ ವೇಶ್ಯೆಯರನ್ನು ಕಳುಹಿಸುತ್ತಿದ್ದನಂತೆ. ಅವರು ಆ ರಾಜ ಅಥವಾ ಮಂತ್ರಿಯೊಡನೆ ಮಲಗಿ, ಅವರ ರಹಸ್ಯಗಳನ್ನು ಇವರಿಗೆ ತಿಳಿಸುತ್ತಿದ್ದರು. ಇದನ್ನು ಚಾಣಕ್ಯ ಅವರ ವಿರುದ್ಧ ಬಳಸಿಕೊಳ್ಳುತ್ತಿದ್ದ. ಇದು ಅವನ ಕೌಟಿಲ್ಯ ನೀತಿಯಲ್ಲೂ ನಿರೂಪಿತವಾಗಿದೆ.
ಪುರಾಣದಲ್ಲಿ ಹನಿಟ್ರಾಪ್ ಬಳಸಿದ ಎರಡು ಉದಾಹರಣೆ ಇಲ್ಲಿದೆ. ಗೌತಮ ಮಹರ್ಷಿಯ ಮೊಮ್ಮಗ ಶರದ್ವನ ಎಂಬ ಋಷಿ ಘೋರ ತಪಸ್ಸನ್ನು ಮಾಡುತ್ತಿದ್ದಾಗ, ಜನಪದಿ ಎಂಬ ಅಪ್ಸರೆಯನ್ನು ಇಂದ್ರ ಕಳಿಸಿದ. ಆಕೆ ಅವನ ಬಳಿಗೆ ಬಂದಾಗ, ಆಕೆಯ ಸೌಂದರ್ಯವನ್ನು ನೋಡಿ ಶರದ್ವನನ ಇಂದ್ರಿಯ ಸ್ಖಲಿಸಿತು. ಅತನ ವೀರ್ಯ ಅಲ್ಲೇ ಇದ್ದ ಬೀಜವೊಂದರ ಮೇಲೆ ಬಿತ್ತು. ಬೀಜ ಎರಡಾಗಿ ಒಡೆದು, ಎರಡು ಮಕ್ಕಳು ಅಲ್ಲೇ ಹುಟ್ಟಿದರು. ಈ ಮಕ್ಕಳೇ ಮಹಾಭಾರತದಲ್ಲಿ ಬರುವ ಕೃಪಾಚಾರ್ಯ ಮತ್ತು ಕೃಪಿ. ಈ ಕೃಪಿ, ದ್ರೋಣಾಚಾರ್ಯರ ಹೆಂಡತಿ.
ಕೌಶಿಕ ಮಹಾರಾಜ, ಬ್ರಹ್ಮರ್ಷಿ ವಸಿಷ್ಠರೊಡನೆ ಛಲಕ್ಕೆ ಬಿದ್ದು ಘೋರ ತಪಸ್ಸು ಮಾಡಿದ. ಇನ್ನೇನು ಆತ ಬ್ರಹ್ಮರ್ಷಿಯಾಗೇ ಬಿಡುತ್ತಾನೆ ಎಂದಾದಾಗ ಸ್ವರ್ಗದಲ್ಲಿದ್ದ ಇಂದ್ರನಿಗೆ ಚಿಂತೆ ಶುರುವಾಯಿತು. ಕೌಶಿಕ ಕ್ಷತ್ರಿಯ ಹಿನ್ನೆಲೆಯಿಂದ ಬಂದವನು. ಅವನು ಬ್ರಹ್ಮರ್ಷಿಯಾದ ಬಳಿಕ ಇಂದ್ರಭೋಗಕ್ಕೆ ಕಣ್ಣು ಹಾಕಲಾರ ಎಂದು ಹೇಗೆ ಹೇಳುವುದು? ಹೀಗಾಗಿ ಅವನ ತಪಸ್ಸನ್ನು ಕೆಡಿಸಲು ಮೇನಕೆ ಎಂಬ ಹೆಸರಿನ ಅಪ್ಸರೆಯನ್ನು ಕಳುಹಿಸಿದ. ಅಪ್ಸರೆಯರೆಂದರೆ ಸ್ವರ್ಗದ ಆಸ್ಥಾನ ನರ್ತಕಿಯರು. ಇಂದ್ರನೂ ಸೇರಿದಂತೆ ದೇವತೆಗು ಬಯಸಿದಾಗ ಭೋಗವನ್ನು ಒದಗಿಸಿಕೊಡುವವರು. ಮೇನಕೆ ನೇರವಾಗಿ ಕೌಶಿಕನ ಬಳಿ ಹೋದಳು, ವಸಂತ ಮಾಸ, ಮನ್ಮಥನ ಬಾಣ ಕೌಶಿಕನಿಗೂ ತಾಗಿತು. ಕಣ್ತೆರೆದರೆ ಎದುರಲ್ಲಿ ಸೆರಗು ಜಾರಿಸಿದ ಮೇನಕೆ. ಮುನಿಯ ಚಿತ್ತ ವಿಚಲಿತವಾಯ್ತು, ತಪಸ್ಸು ಬಿಟ್ಟ. ಮೇನಕೆಯೊಡನೆ ಸಂಸಾರ ಹೂಡಿದ. ಎಷ್ಟೋ ವರ್ಷಗಳ ಕಾಳ ಸಂಸಾರದಲ್ಲಿ ಮುಳುಗಿ ತಪಸ್ಸನ್ನು ಮರೆತೇ ಬಿಟ್ಟ. ಇಂದ್ರ ನಿರಾಳನಾದ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
