ಸನಾತನ ಧರ್ಮದ ಪರಂಪರೆಯಲ್ಲಿ ವ್ರತಗಳ ಆಚರಣೆಗಳು ಮಹತ್ತರವಾದ ಸ್ಥಾನವನ್ನು ಹೊಂದಿದೆ. ಮೋಕ್ಷ ಸಾಧನೆಗೆ ಈ ಆಚರಣೆಗಳು ಅನುಕೂಲಕರವಾಗಲಿದೆ ಎಂಬ ನಂಬಿಕೆಯನ್ನು ಹಿಂದೂ ಧರ್ಮ ಹೊಂದಿದೆ. ಇಂದು ಪವಿತ್ರ ಆಷಾಡ ಏಕಾದಶಿ. ಇದನ್ನು ಪ್ರಥಮ ಏಕಾದಶಿ, ಶಯನಿ ಏಕಾದಶಿ ಎಂದೂ ಕರೆಯುತ್ತಾರೆ.
ಏಕಾದಶಿ ಎಂದೊಡನೆ ಉಪವಾಸ ನೆನಪಾಗುತ್ತದೆ. ಉಪ” ಎಂದರೆ ಹತ್ತಿರ ಎಂದರ್ಥ, “ವಾಸ” ಎಂದರೆ ಇರುವುದು ಎಂದರ್ಥ. ಅಂದರೆ ಭಗವಂತನ ಸಮೀಪ ಹೋಗಲಿಕ್ಕಾಗಿ ಇರುವ ಮಾರ್ಗದಲ್ಲಿ ಉಪವಾಸ ಆಚರಣೆ ಸಹಾಯಕ. ವೈಜ್ಞಾನಿಕವಾಗಿ ಉಪವಾಸದಿಂದ ಜೀರ್ಣಾಂಗ ಸಮಸ್ಯೆ, ರಕ್ತದೊತ್ತಡ, ರಕ್ತಹೀನತೆ ಸೇರಿದಂತೆ ಹಲವಾರು ಸಮಸ್ಯೆಗಳು ನಿವಾರಣೆಯಾಗುತ್ತದೆ.
ಏಕಾದಶಿಯ ಹಿಂದಿನ ರಾತ್ರಿಯಿಂದಲೇ, ಅಂದರೆ ದಶಮಿ ತಿಥಿಯ ರಾತ್ರಿಯಿಂದಲೇ ಉಪವಾಸ ಆರಂಭವಾಗುತ್ತದೆ. ಮಾರನೇ ದಿನ ಏಕಾದಶಿ ಸಂಪೂರ್ಣ ಉಪವಾಸ ಇದ್ದು, ಅದರ ಮರುದಿನ, ದ್ವಾದಶಿಯಂದು ಬೆಳಗ್ಗೆ ಭೋಜನ ಮಾಡುತ್ತಾರೆ.
ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯ ಈ ದಿನವನ್ನು ಕರೆಯುವರು. ಈ ಪ್ರಥಮ ಏಕಾದಶಿಗೆ ತನ್ನದೇ ಆದ ಮಹತ್ವವಿದೆ. ಯಾರು ಈ ದಿನ ಉಪವಾಸವನ್ನು ಮಾಡುತ್ತಾರೋ, ನಾನು ಅಂಥವರು ಮಾಡಿದ ಪಾಪವನ್ನೆಲ್ಲ ಸುಟ್ಟುಬಿಡುತ್ತೇನೆ, ಅಷ್ಟೆ ಅಲ್ಲದೆ ಅಂತವರ ಹೃದಯದಲ್ಲಿ ನಾನು ವಾಸಿಸುತ್ತೇನೆ. ಎಂದು ಸ್ವತಃ ಶ್ರೀ ಕೃಷ್ಣ ಬೋಧಿಸಿದ್ದಾನೆ.
ಇವತ್ತಿನ ದಿನದಿಂದ ನಾಲ್ಕು ಮಾಸಗಳ(ತಿಂಗಳು) ಪರ್ಯಂತ ಕ್ಷೀರ ಸಾಗರದಲ್ಲಿ ಆದಿಶೇಷನ ಮೇಲೆ ಮಹಾವಿಷ್ಣು ನಿದ್ರಿಸುತ್ತಾನೆ ಎಂಬ ನಂಬಿಕೆ ಇದೆ. ಹಾಗಾಗಿ ಯಾವುದೇ ವಿಶೇಷ ಶುಭ ಕೆಲಸವನ್ನು ಈ ಸಮಯದಲ್ಲಿ ಆಚರಿಸುವುದಿಲ್ಲ. ಕೇವಲ ದೇವರ ಧ್ಯಾನದಂತಹ ಕಾರ್ಯಗಳು, ವ್ರತಗಳು, ವಿಶೇಷವಾಗಿ ಇಂದಿನಿಂದ ನಾಲ್ಕು ತಿಂಗಳುಗಳ ಆಚರಿಸುತ್ತಾರೆ ಹಾಗಾಗಿ ಈ ನಾಲ್ಕು ತಿಂಗಳು ಚಾತುರ್ಮಾಸ್ಯ ಎಂದು ಕರೆಯುತ್ತಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
