ಧರ್ಮಸ್ಥಳ ಮಂಜುನಾಥ ಕ್ಷೇತ್ರಕ್ಕೆ ಹೆಚ್ಚಿನವರು ಭೇಟಿ ನೀಡಿರುತ್ತಾರೆ. ದೂರ ದೂರದ ಊರುಗಳಿಂದ ಸಾಕಷ್ಟು ಜನ ಭಕ್ತರು ಮಂಜುನಾಥನ ದರ್ಶನಕ್ಕೆಂದು ಆಗಮಿಸುತ್ತಾರೆ. ಆದರೆ ನೀವು ಧರ್ಮಸ್ಥಳದಲ್ಲಿರುವ ರಾಮ ಮಂದಿರವನ್ನು ನೋಡಿದ್ದೀರಾ? ರಾಮನಿಗಾಗಿ ನಿರ್ಮಿಸಲಾಗಿರುವ ಈ ಮಂದಿರವು ಧರ್ಮಸ್ಥಳದಲ್ಲಿ ಪ್ರಸಿದ್ಧವಾಗಿದೆ. ನೋಡಲೂ ಸುಂದರವಾಗಿರುವ ಈ ದೇವಾಲಯವು ನಿಜಕ್ಕೂ ಅದ್ಭುತವಾಗಿದೆ.
ದಕ್ಷಿಣದ ಅಯೋಧ್ಯೆ ಎಂದೇ ಕರೆಯಲ್ಪಡುವ ಶ್ರೀರಾಮ ಕ್ಷೇತ್ರ ಧರ್ಮಸ್ಥಳದಿಂದ ಸುಮಾರು ಮೂರ್ನಾಲ್ಕು ಕಿಲೋ ಮೀಟರ್ ದೂರದಲ್ಲಿದೆ.
ಕನ್ಯಾಡಿಯ ನಿತ್ಯಾನಂದ ನಗರದಲ್ಲಿ ನಿರ್ಮಾಣಗೊಂಡ ಈ ದೇವಾಲಯವು ನೇತ್ರಾವತಿ ನದಿಯ ಸಮೀಪದ ಪುಣ್ಯಕ್ಷೇತ್ರವಾಗಿದ್ದು ಸಂಪೂರ್ಣವಾಗಿ ದಕ್ಷಿಣೋತ್ತರ ಶಿಲ್ಪಕಲೆಯನ್ನು ಇಲ್ಲಿ ಬಿಂಬಿಸಲಾಗಿದೆ.
ದೇವಾಲಯದ ಹೊರ ಭಾಗಗಳಲ್ಲಿ ರಾಮಾಯಣದ ಕಥೆಗಳನ್ನು ಸಾರುವ ಕೆತ್ತನೆಗಳನ್ನು ಕೆತ್ತಲಾಗಿದ್ದು ಇಲ್ಲಿನ ಪ್ರತಿಯೊಂದು ಶಿಲ್ಪಕಲೆಯು ಕಣ್ಮನ ಸೆಳೆಯುತ್ತದೆ. ಸೀತಾನ್ವೇಷಣೆಯ ಸಂದರ್ಭದಲ್ಲಿ ಶ್ರೀರಾಮನು ಹೆಜ್ಜೆ ಇಟ್ಟಲ್ಲೆಲ್ಲಾ ಒಂದೊಂದು ದೇವಾಲಯಗಳನ್ನು ನಿರ್ಮಿಸಲಾಗಿದೆ ಎಂಬುದು ಪುರಾಣ ಕಥೆಗಳಲ್ಲಿ ಉಲ್ಲೇಖಗೊಂಡಿದೆ. ಹಾಗೆಯೇ ಕನ್ಯಾಡಿಯ ಈ ಪ್ರದೇಶದಲ್ಲಿ ಶ್ರೀರಾಮನು ವನವಾಸದ ಸಂದರ್ಭದಲ್ಲಿ ಬಂದಿದ್ದಾನೆಂದು ನಂಬಿಕೆ.
ಶ್ರೀಮಂತ ವಿನ್ಯಾಸ ಕಲಾತ್ಮಕ ಸೌಂದರ್ಯದಿಂದ ಸಮೃದ್ಧವಾಗಿರುವ ಈ ದೇವಾಲಯದಲ್ಲಿ ತಮಿಳುನಾಡಿನ ‘ವಾಸ್ತು’, ರಾಜಸ್ಥಾನದ ಶ್ರೀಮಂತ ಗ್ರಾನೈಟ್ ಕಲ್ಲುಗಳು, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ, ತಮಿಳುನಾಡು ಮತ್ತು ರಾಜಸ್ಥಾನದ ಶಿಲ್ಪಿಗಳು ಕೆತ್ತಿದ ಸುಂದರ ವಿನ್ಯಾಸಗಳಿವೆ. 3-ಅಂತಸ್ತಿನ ರಚನೆಯನ್ನು ಕಾರ್ಯಗಳು ಮತ್ತು ಭಜನೆಗಳಿಗಾಗಿ ಬಳಸಲಾಗುತ್ತದೆ, ಆದರೆ II ಮಹಡಿಯಲ್ಲಿ ಗರ್ಭಗುಡಿಗಳು ಮತ್ತು III ಮಹಡಿಯ ಮನೆಗಳು ‘ಪಟ್ಟಾಭಿರಾಮ ಸನ್ನಿಧಿ’. ಈ ಸುಂದರ ದೇವಾಲಯದಲ್ಲಿ ಹನುಮಾನ್, ‘ನವದುರ್ಗ’ ಮತ್ತು ‘ನವಗ್ರಹ’ ವನ್ನು ಪೂಜಿಸಲಾಗುತ್ತಿದೆ.
2007 ರಲ್ಲಿ ನಿರ್ಮಿಸಲಾದ ಮೂರು ರಥಗಳು ಕ್ಷೇತ್ರದ ವಿಶೇಷ ಆಕರ್ಷಣೆ. ಭಗವಾನ್ ರಾಮನಿಗೆ ಶಿಲ್ಪಿಗಳು 72 ಅಡಿ ಎತ್ತರದ ‘ಬ್ರಹ್ಮರಥ’ ಕೆತ್ತಿದ್ದಾರೆ. 36 ಅಡಿ ಎತ್ತರವಿರುವ ಮತ್ತೊಂದು ರಥವನ್ನು ಭಗವಾನ್ ಆಂಜನೇಯನಿಗಾಗಿ ಅರ್ಪಿಸಲಾಗಿದೆ. ಕ್ಷೇತ್ರದಲ್ಲಿ 18 ಅಡಿ ಎತ್ತರದ ಬೆಳ್ಳಿಯ ರಥವೂ ಇದೆ . ಈ ದೇವಾಲಯದಲ್ಲಿ ಎರಡು ಮಹಡಿಗಳಲ್ಲಿ 36 ದೇವತೆಗಳ ಪ್ರತಿಮೆಗಳಿವೆ. ಈ ದೇವಾಲಯವು ಭಗವಾನ್ ರಾಮ, ಲಕ್ಷ್ಮಣ ಮತ್ತು ಸೀತೆ ದೇವಿಯ ಪ್ರಾಚೀನ ಅಮೃತಶಿಲೆಯ ವಿಗ್ರಹಗಳಿಂದ ಮತ್ತು ಸೂಕ್ಷ್ಮಕೆತ್ತನೆಗಳಿಂದ ಅಲಂಕರಿಸಲ್ಪಟ್ಟಿದೆ.
ಇಂದು ಪವಿತ್ರ ಕ್ಷೇತ್ರ ಎಂದೆ ಕರೆಸಿಕೊಳ್ಳುವ ಶ್ರೀ ರಾಮಕ್ಷೇತ್ರದಲ್ಲಿ 1978 ರವರೆಗೆ ಏನೂ ಇರಲಿಲ್ಲ ಕೇವಲ ಚಿಕ್ಕದಾದ ನಿತ್ಯಾನಂದ ಮಂದಿರ ಮಾತ್ರವಿತ್ತು. ಪ್ರಸ್ತುತ ಶ್ರೀ ರಾಮ ದೇವಸ್ಥಾನಕ್ಕೆ 1978 ರಲ್ಲಿ ಬೆಂಗಳೂರಿನ ಶ್ರೀ ಶ್ರೀ ಶಿವ ಬಾಲಯೋಗಿ ಮಹರಾಜರು ಭೂಮಿಪೂಜೆ ನೆರವೇರಿಸಿ ನಂತರ ರಾಮ ಮಂದಿರದ ರಚನೆಯನ್ನು ಶ್ರೀ ಆತ್ಮಾನಂದ ಸ್ವಾಮೀಜಿಗಳು ನಿರ್ದೇಶಿಸಿದರು. ಅಲ್ಲಿಂದ ದೇವಾಲಯದ ನಿರ್ಮಾಣ ಕಾರ್ಯ ಭರದಿಂದ ಸಾಗಿತು.
ಶ್ರೀ ನಿತ್ಯಾನಂದ ಸ್ವಾಮಿಗಳು ತಮ್ಮ ಧರ್ಮಸ್ಥಳ ಯಾತ್ರೆಯ ಸಂದರ್ಭದಲ್ಲಿ ಪ್ರಸ್ತುತ ಕ್ಷೇತ್ರಕ್ಕೆ ಬಂದಿದ್ದರು ಹಾಗೂ ಒಂದು ದಿನ ಇಲ್ಲಿ ತಂಗಿದ್ದರು. ಆ ಸಮಯದಲ್ಲೆ ಅವರಿಗೆ ಶ್ರೀರಾಮನ ಪ್ರೇರಣೆಯಾಗಿ ಇಲ್ಲೊಂದು ರಾಮನ ದೇವಾಲಯ ನಿರ್ಮಾಣ ಮಾಡಬೇಕೆಂಬ ಮನೋಕಾಮನೆ ಬೇರೊಡೆಯಿತು.
ಗುರುಗಳ ಈ ಬಯಕೆಯನ್ನು ಈಡೇರಿಸಬೇಕೆಂದು ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರು ಅಪೇಕ್ಷಿಸಿದ್ದರು. ಅದರಂತೆ 1969 ರಲ್ಲಿ ಶ್ರೀಗಳು ಧರ್ಮಸ್ಥಳಕ್ಕೆ ಬಂದು ತಮ್ಮ ಪ್ರಯತ್ನವನ್ನು ಪ್ರಾರಂಭಿಸಿದರು. ಮುಂದೆ 1971 ರಲ್ಲಿ ಪ್ರದೇಶದ ಶಾನುಭೋಗರಿಂದ ಪ್ರಸ್ತುತ ಸ್ಥಳವನ್ನು ಬಳುವಳಿಯಾಗಿ ಪಡೆದು ದೇವಾಲಯ ಕಾರ್ಯಕ್ಕೆ ನಾಂದಿ ಹಾಡಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
