ರಾಕಿ ಭಾಯ್ ಯಶ್ ಅಭಿನಯದ ಕಿಜಿಎಫ್ ಸಿನಿಮಾ ಪ್ರಪಂಚದಾದ್ಯಂತ ಸಕತ್ ಸೌಂಡ್ ಮಾಡಿರುವ ವಿಷಯ ನಮಗೆಲ್ಲರಿಗೂ ಗೊತ್ತು. ಇತ್ತೀಚಿನ ದಿನಗಳಲ್ಲಿ ನಾವು ಕೆಲವು ಸಂದರ್ಶನಗಳನ್ನು ನೋಡಿದರೆ ಅದರಲ್ಲಿ ಗೊತ್ತಿದ್ದು ಗೊತ್ತಿಲ್ಲದೇ ಕೆಲವು ಸೆಲೆಬ್ರಿಟಿಗಳು ಆಡುವ ಮಾತು ಬಹಳಷ್ಟು ಚರ್ಚೆಗೆ ಕಾರಣವಾಗುತ್ತದೆ. ಇದೀಗ ಇದಕ್ಕೆ ಮತ್ತೊಂದು ಉದಾಹರಣೆ ಎಂದರೆ ತೆಲುಗಿನ ನಿರ್ದೇಶಕ ವೆಂಕಟೇಶ್ ಮಹಾ.
ಪ್ರೇಮ ದ ಜರ್ನಲಿಸ್ಟ್ ಎಂಬ ಯುಟ್ಯೂಬ್ ಚಾನೆಲ್‌ನಲ್ಲಿ ನಡೆದ ನಿರ್ದೇಶಕರ ರೌಂಡ್ ಟೇಬಲ್ ಚರ್ಚೆಯಲ್ಲಿ ಭಾಗವಹಿಸಿದ್ದ ವೆಂಕಟೇಶ್ ಮಹಾ ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಶನ್‌ನ ಚಿತ್ರ ಕೆಜಿಎಫ್ ಬಗ್ಗೆ ಪರೋಕ್ಷವಾಗಿ ತೀರಾ ಕೆಳಮಟ್ಟದ ಪದಗಳನ್ನು ಬಳಸಿದ್ದು, ಇದೀಗ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಪರೋಕ್ಷವಾಗಿ ಇವರು ಕೆಜಿಎಫ್ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಇಡೀ ಪ್ರಪಂಚದಲ್ಲಿ ಯಾವ ತಾಯಿಯಾದರೂ ದೊಡ್ಡವನಾದ ಮೇಲೆ ಒಳ್ಳೆಯ ಹೆಸರು ಮಾಡು, ನಾಲ್ಕು ಜನರಿಗೆ ಅನ್ನ ಹಾಕು ಎಂದು ಮಗನಿಗೆ ಸಲಹೆ ನೀಡುತ್ತಾಳೆ, ಆದರೆ ಇಲ್ಲಿ ಈ ಮಹಾತಾಯಿ ದೊಡ್ಡ ಮಟ್ಟದಲ್ಲಿ ಚಿನ್ನ, ಹಣ ಸಂಪಾದಿಸು ಎಂದು ಹೇಳುತ್ತಾಳೆ ಎಂದು ಟೀಕಿಸಿದ್ದಾರೆ. ಇಷ್ಟಕ್ಕೆ ಸುಮ್ಮನಿರದೆ ತಾಯಿ ಮಾತಿನಂತೆ ಆತ ಕೆಲಸಗಾರರ ಸಹಾಯ ಪಡೆದುಕೊಂಡು ಲೋಡ್‌ಗಟ್ಟಲೆ ಚಿನ್ನವನ್ನು ಹೊರತೆಗೆದು ಆ ಜನರಿಗೆ ಮನೆಗಳನ್ನು ನೀಡಿ, ಆ ಚಿನ್ನವನ್ನೆಲ್ಲಾ ತೆಗೆದುಕೊಂಡು ಹೋಗಿ ನೀರಿನಲ್ಲಿ ಮುಳುಗಿಸಿಬಿಡುತ್ತಾನೆ, ಎಂತಹ ಕಂತ್ರಿ ನಾಯಿ ಇರಬೇಡ ಆತ, ಇಂತಹ ಕಂತ್ರಿ ನಾಯಿಯ ಕಥೆಯನ್ನು ಸಿನಿಮಾ ಮಾಡಿದ್ದಾರೆ, ಅದನ್ನು ನೋಡಿ ನಾವು ಚಪ್ಪಾಳೆ ತಟ್ಟಿ ಗೆಲ್ಲಿಸುತ್ತೇವೆ ಎಂದಿದ್ದಾರೆ. ಈ ಮೂಲಕ ಇವರು ಕೆಜಿಎಫ್ ಸಿನಿಮಾದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಲ್ಲದೆ ರಾಕಿ ಭಾಯ್ ಯಶ್ ಅವರನ್ನು ನಾಯಿಗೆ ಹೋಲಿಸಿದ್ದಾರೆ.
— Venkatesh Maha (@mahaisnotanoun) March 6, 2023
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಯಶ್ ಅಭಿಮಾನಿಗಳು ವೆಂಕಟೇಶ್ ಮಹಾ ಅವರನ್ನು ಟ್ವಿಟ್ಟರ್ ನಲ್ಲಿ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇದಾದ ಬಳಿಕ ವೆಂಕಟೇಶ್ ಮಹಾ ಕ್ಷಮೆಯನ್ನು ಕೇಳಿದರು ಸಹ ತಾವು ಹೇಳಿದ್ದೆ ಸರಿ ಎಂಬಂತೆ ಹೇಳಿದ್ದಾರೆ.
ಕ್ಷಮೆ ಕೇಳಿದ ನಿರ್ದೇಶಕ ವೆಂಕಟೇಶ್ ಮಹಾ!
” ಹಾಯ್ ಎಲ್ರಿಗೂ ನಮಸ್ಕಾರ. ಇತ್ತೀಚೆಗೆ ಒಂದು ಸಂದರ್ಶನದ ಒಂದು ಸಂದರ್ಭದಲ್ಲಿ ನಾನು ವ್ಯಕ್ತಪಡಿಸಿದ ಅಭಿಪ್ರಾಯ ಹಲವಾರು ಮಂದಿಗೆ ಬೇಸರತಂದಿದೆ ಎಂಬ ವಿಷಯ ನನಗೆ ತಿಳಿಯಿತು. ಆ ವಿಷಯದ ಕುರಿತು ಮಾತನಾಡಲು ಈ ದಿನ ನಾನು ನಿಮ್ಮ ಮುಂದೆ ಬಂದಿದ್ದೇನೆ. ನಾನು ನನ್ನ ಅಭಿಪ್ರಾಯವನ್ನು ಹಿಂದಕ್ಕೆ ತೆಗೆದುಕೊಳ್ಳುವ ಮಾತಿಲ್ಲ. ಈಗಲೂ ನಾನು ನನ್ನ ಅಭಿಪ್ರಾಯದ ಜತೆ ನಿಲ್ಲುತ್ತೇನೆ. ಆದರೆ ಒಂದು ಸಂದರ್ಭದಲ್ಲಿ ನಾನು ಬಳಸಿದ ಭಾಷೆ ಸರಿಯಾಗಿ ಇರಲಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತಿದ್ದೇನೆ. ಓರ್ವ ಜವಾಬ್ದಾರಿಯುತ ನಿರ್ದೇಶಕನಾಗಿ ಅಂತಹ ಪದ ಬಳಕೆಯನ್ನು ಮಾಡಬಾರದಿತ್ತು. ಇದು ಸಿನಿಮಾ ಇಷ್ಟಪಡುವ ಹಲವಾರು ಮಂದಿಗೆ ಬೇಸರ ತಂದಿದೆ. ಮೊದಲಾಗಿ ಇದು ಒಂದು ನಿರ್ದಿಷ್ಟ ಭಾಷೆ ಅಥವಾ ಇಂಡಸ್ಟ್ರಿಯನ್ನು ಹೀಯಾಳಿಸಲು ಆಡಿದ ಮಾತುಗಳಲ್ಲ. ಅದೇ ವಿಡಿಯೊದಲ್ಲಿ ಮತ್ತೊಂದು ಕನ್ನಡ ಚಿತ್ರವನ್ನು ಹೊಗಳಿದ್ದೇನೆ. ಮತ್ತೆ ಹೇಳುತ್ತಿದ್ದೇನೆ, ಇದು ನನ್ನ ಅಭಿಪ್ರಾಯವಷ್ಟೇ, ಚಿತ್ರಗಳು ಹೇಗೆ ಎಂದು ಹೇಳುವ ಹಕ್ಕು ನನಗಿದೆ” ಎಂದು ಹೇಳಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
