ಕಿಚ್ಚ ಸುದೀಪ್ ನೆನ್ನೆ ನಡೆದ ಸುದ್ದಿಘೋಷ್ಠಿಯಲ್ಲಿ ನಾನು ಬಿಜೆಪಿ ಪರ ಪ್ರಚಾರಮಾಡುತ್ತೇನೆ ಎಂದು ಹೇಳಿದರು. ಈ ಮಾತು ಇದೀಗ ಸುದೀಪ್ ಅವರಿಗೆ ಮುಳ್ಳಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಏಕೆಂದರೆ ಈಗಾಗಲೇ ಇದರ ವಿರುದ್ಧ ಪ್ರಕಾಶ್ ರಾಜ್ ಪ್ರತಿಕ್ರಿಯೆ ನೀಡಿದ್ದು, ನನಗೆ ಸುದೀಪ್ ನಡೆ ಇಷ್ಟವಾಗಿಲ್ಲ ಎಂದು ಹೇಳಿದರು. ಇದೀಗ ಚುನಾವಣಾ ಆಯೋಗಕ್ಕೆ ವಕೀಲರೊಬ್ಬರು ಪತ್ರ ಬರೆದಿದ್ದಾರೆ.
ಸುದೀಪ್ ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿಗಳಿಗೆ ಪ್ರಚಾರ ಮಾಡುವುದಾಗಿ ತಿಳಿಸಿದ್ದರಿಂದ, ಅವರ ನಟನೆಯ ಚಿತ್ರಗಳನ್ನು ಪ್ರಸಾರ ಮಾಡದಂತೆ ತಡೆಯಬೇಕು ಎಂದು ಶಿವಮೊಗ್ಗದ ವಕೀಲರಾದ ಕೆ.ಪಿ ಶ್ರೀಪಾಲ್ ಚುನಾವಣೆ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ವಕೀಲರು ಚುನಾವಣಾ ಅಧಿಕಾರಿಗಳಿಗೆ ನೀಡಿದ ಪತ್ರದಲ್ಲಿ ‘ಕನ್ನಡದ ಚಲನಚಿತ್ರ ನಟ ಕಿಚ್ಚ ಸುದೀಪ್ ಅವರು ಭಾರತೀಯ ಜನತಾ ಪಕ್ಷದ ಸ್ಟಾರ್ ಪ್ರಚಾರಕರಾಗಿರುವುದರಿಂದ ಚುನಾವಣೆ ಮುಗಿಯುವವರೆಗೂ ಅವರ ನಟನೆಯ ಯಾವುದೇ ಚಲನಚಿತ್ರಗಳು ಚಿತ್ರ ಮಂದಿರಗಳಲ್ಲಿ ಮತ್ತು ಟಿವಿಗಳಲ್ಲಿ ಪ್ರದರ್ಶನವಾಗದಂತೆ, ಅವರು ನಡೆಸಿಕೊಡುವ ಟಿವಿಶೋಗಳು ಪ್ರಸಾರವಾಗದಂತೆ ಮತ್ತು ಅವರು ನಟಿಸಿರುವ ಜಾಹೀರಾತುಗಳು ಸಹ ಪ್ರಸಾರವಾಗದಂತೆ ಚುನಾವಣಾ ಆಯೋಗ ಕಟ್ಟು ನಿಟ್ಟಿನ ಕ್ರಮಜರುಗಿಸಬೇಕು’ ಎಂದು ಬರೆದಿದ್ದಾರೆ.
ಅಲ್ಲದೇ, ‘ಅವರು ಒಂದು ರಾಜಕೀಯ ಪಕ್ಷದ ಪರವಾಗಿ ಪ್ರಚಾರಮಾಡುತ್ತಿರುವುದನ್ನು ಅವರೆ ಘೋಷಣೆ ಮಾಡಿದ್ದರಿಂದ ಅವರ ನಟನೆಯ ಚಲನಚಿತ್ರಗಳು ಮತ್ತು ಟಿವಿಶೋಗಳು ಹಾಗೂ ಜಾಹೀರಾತುಗಳು ಮತದಾರರ ಮೇಲೆ ಪ್ರಭಾವ ಬೀರುವುದರಿಂದ ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಆಗಿರುತ್ತದೆ. ಆದ್ದರಿಂದ ತಕ್ಷಣದಿಂದ ಚುನಾವಣಾ ಆಯೋಗ ಈ ವಿಷಯಕ್ಕೆ ಸಂಬಂದಿಸಿದಂತೆ ತುರ್ತು ಕ್ರಮ ಜರುಗಿಸಬೇಕೆಂದು ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಒತ್ತಾಯಿಸುತ್ತಿದ್ದೇನೆ’ ಎಂದು ಬರೆದಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
