ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಜಯಭೇರಿ ಬಾರಿಸಿದೆ. ಒಪಿನಿಯನ್ ಪೋಲ್ ಗಳು, ಎಕ್ಸಿಟ್ ಪೋಲ್ ಗಳು ನೀಡಿದ್ದಕ್ಕಿಂತ ಹೆಚ್ಚಿನ ಸ್ಥಾನಗಳನ್ನ ಕಾಂಗ್ರೆಸ್ ಪಕ್ಷವು ಗೆಲ್ಲುವ ಮೂಲಕ ರಾಜ್ಯದಲ್ಲಿ ಹೊಸ ಅಲೆಯನ್ನೇ ಹುಟ್ಟುಹಾಕಿದೆ.
224 ಸ್ಥಾನಗಳ ಪೈಕಿ ಕಾಂಗ್ರೆಸ್ 136 ಸ್ಥಾನಗಳನ್ನು ಗೆದ್ದಿದೆ. ಮ್ಯಾಜಿಕ್ ಫಿಗರ್‌ಗಿಂತ 23 ಸ್ಥಾನಗಳನ್ನು ಹೆಚ್ಚು ಗೆದ್ದಿದೆ. ಬಿಜೆಪಿ 65 ಸ್ಥಾನಗಳನ್ನು ಗೆದ್ದು ಎರಡನೇ ಸ್ಥಾನಕ್ಕೆ ಸೀಮಿತವಾಗಿದೆ. ಕಿಂಗ್‌ಮೇಕರ್ ಆಗಿದ್ದ ಜೆಡಿಎಸ್ 19 ಸ್ಥಾನಗಳಲ್ಲಿ ಮಾತ್ರ ಜಯಭೇರಿ ಬಾರಿಸಿತ್ತು. ಇತರರು ನಾಲ್ಕು ಸ್ಥಾನಗಳನ್ನು ಗೆದ್ದಿದ್ದಾರೆ.
ಕಳೆದ ಮೂವತ್ತು ವರ್ಷಗಳಲ್ಲೇ ಅತಿ ಹೆಚ್ಚು ಸ್ಥಾನ ಗೆದ್ದಿರುವುದಕ್ಕೆ ಕಾಂಗ್ರೆಸ್ ಪಕ್ಷದ ವರಿಷ್ಠರು ಸಹಜವಾಗಿ ಸಂತಸಗೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೊರಟಿದ್ದ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಅಧಿಕಾರದಿಂದ ಕಿತ್ತೊಗೆಯಲು ಆಯಾ ವಲಯಗಳಲ್ಲಿ ಶ್ರಮಿಸಿದ ಕಾಂಗ್ರೆಸ್ ನ ಹಲವಾರು ನಾಯಕರು ತೆರೆ ಹಿಂದೆ ಕೂಡ ಹೋರಾಡಿದ್ದಾರೆ.
ಕೆಸಿ ವೇಣುಗೋಪಾಲ್:
ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ‘ಗೆಲುವಿನ ಶಿಲ್ಪಿ’ ಎಂದು ಹೇಳಲಾಗುತ್ತಿದೆ. ಪಕ್ಷ ಸಂಘಟನೆ ಸೇರಿದಂತೆ ನಾಯಕರುಗಳ ಮಧ್ಯೆಯ ಭಿನ್ನಾಭಿಪ್ರಾಯ ಶಮನ ಮಾಡಿ ಸಮನ್ವಯ ಸಾಧಿಸುವಲ್ಲಿ ವೇಣುಗೋಪಾಲ್ ಅವರ ಪಾತ್ರ ಬಹು ದೊಡ್ಡದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಕನಿಷ್ಠ ನಾಲ್ವರು ಮುಖ್ಯಮಂತ್ರಿ ಆಕಾಂಕ್ಷಿಗಳನ್ನು ಹೊಂದಿದ್ದು, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜೊತೆ ಕಾಂಗ್ರೆಸ್ ಪ್ರಚಾರ ಸಮಿತಿ ಮುಖ್ಯಸ್ಥ ಎಂ.ಬಿ.ಪಾಟೀಲ್ ಮತ್ತು ದಲಿತ ನಾಯಕ ಜಿ. ಪರಮೇಶ್ವರ ಅವರು ಉನ್ನತ ಹುದ್ದೆಯ ಇತರ ಇಬ್ಬರು ಆಕಾಂಕ್ಷಿಗಳಾಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ತಕ್ಷಣದ ಸವಾಲಿನ ಮೇಲೆ ನಾಲ್ವರೂ ಗಮನಹರಿಸುವಂತೆ ಮಾಡುವ ಪ್ರಯಾಸದಾಯಕ ಕೆಲಸ ವೇಣುಗೋಪಾಲ್ ಅವರ ಮೇಲಿತ್ತು. ವೇಣುಗೋಪಾಲ್ ಅವರು ಎಲ್ಲಾ ಕ್ಷೇತ್ರಗಳು ಮತ್ತು ಅಭ್ಯರ್ಥಿಗಳ ಕಾಳಜಿಯನ್ನು ನೋಡಿಕೊಂಡರು ಮತ್ತು ಅವರು ಟಿಕೆಟ್ ಹಂಚಿಕೆ, ಪಕ್ಷದ ತಂತ್ರ ಮತ್ತು ಪ್ರಚಾರದಿಂದ ಕಾರ್ಯಚಟುವಟಿಕೆಯಲ್ಲಿದ್ದರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಜಿಸಿ ಚಂದ್ರಶೇಖರ್:
ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಜೆಡಿಎಸ್ ಭದ್ರಕೋಟೆ ಎನಿಸಿಕೊಂಡಿದ್ದ ಮಂಡ್ಯ ಮತ್ತು ತುಮಕೂರು ಜಿಲ್ಲೆಗಳಲ್ಲಿ ಅತ್ಯತ್ತಮ ಸಾಧನೆ ಮಾಡಿದೆ. ತುಮಕೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಜೆಡಿಎಸ್‌ನ ಭದ್ರಕೋಟೆಯನ್ನು ಭೇದಿಸಿದ ಕೀರ್ತಿ ಕಾಂಗ್ರೆಸ್ ನ ರಾಜ್ಯಸಭಾ ಸಂಸದ ಜಿಸಿ ಚಂದ್ರಶೇಖರ್ ಅವರಿಗೆ ಸಲ್ಲುತ್ತದೆ. ಮೂಲತಃ ಒಕ್ಕಲಿಗ ಜಾತಿಯವರಾಗಿರುವ ಜಿ ಸಿ ಚಂದ್ರಶೇಖರ್ ಅವರು ಚಂದ್ರಶೇಖರ್ ಎರಡು ಜಿಲ್ಲೆಗಳಲ್ಲಿ ಒಕ್ಕಲಿಗ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.. ಚಂದ್ರಶೇಖರ್ ಉಸ್ತುವಾರಿಯಲ್ಲಿದ್ದ ಎರಡು ಜಿಲ್ಲೆಗಳಲ್ಲಿ ಕಾಂಗ್ರೆಸ್ 13 ವಿಧಾನಸಭಾ ಸ್ಥಾನಗಳನ್ನು ಗೆದ್ದಿದೆ. ಅಂದಹಾಗೆ ಚಂದ್ರಶೇಖರ್ ಗಂಗಾಟ್ಕರ್ ಒಕ್ಕಲಿಗ ಜಾತಿಗೆ ಸೇರಿದವರು ಎಂದು ಹೇಳಲಾಗಿದ್ದು ಕಾಂಗ್ರೆಸ್ ಹಿರಿಯರಾದ ಮಾಜಿ ಸಿಎಂ ಎಸ್ ಎಂ ಕೃಷ್ಣ ಮತ್ತು ಡಿಕೆ ಶಿವಕುಮಾರ್ ಕೂಡ ಗಂಗಾಟ್ಕರ್ ಒಕ್ಕಲಿಗ ಜಾತಿಯಿಂದ ಬಂದವರು.
2018ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ 07 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು ಕೇವಲ ಒಂದೇ ಒಂದು ಸೀಟ್ ಕೂಡ ಗೆದ್ದಿರಲಿಲ್ಲ. ಹಾಗೆಯೆ ತುಮಕೂರು ಜಿಲ್ಲೆಯ ಒಟ್ಟು 11 ಕ್ಷೇತ್ರಗಳಲ್ಲಿ ಕೇವಲ ಎರಡು ಸ್ಥಾನಗಳನ್ನ ಗೆಲ್ಲುವಲ್ಲಿ ಮಾತ್ರ ಸಫಲವಾಗಿತ್ತು. ಆದರೆ ಈ ಭಾರಿಯ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಿಂದ ನಾಲ್ಕು+ ಒಂದು ಪಕ್ಷೇತರ (ಕಾಂಗ್ರೆಸ್ ಬೆಂಬಲಿತ) ಮತ್ತು ತುಮಕೂರು ಜಿಲ್ಲೆಯಿಂದ ಏಳು ಕಡೆ ಕಾಂಗ್ರೆಸ್ ಗೆಲುವು ಸಾಧಿಸಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
