ಜಾನುವಾರು ಸಾಗಾಣೆ ಪ್ರಕರಣದ ಸಂದರ್ಭದಲ್ಲಿ ಇದ್ರೀಶ್ ಪಾಷಾ ಎಂಬುವವರ ಮೇಲೆ ದಾಳಿ ಮಾಡಿ ಕೊಲೆ ಮಡಿದ ಆರೋಪದಲ್ಲಿ ಜೈಲು ಹಕ್ಕಿಯಾಗಿದ್ದ ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕುಮಾರ್ ಅಲಿಯಾಸ್ ಪುನೀತ್ ಕೆರೆಹಳ್ಳಿ ಹಾಗೂ ಇತರೆ ನಾಲ್ವರು ಆರೋಪಿಗಳಿಗೆ ಹೈಕೋರ್ಟ್ ಮಂಗಳವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಆರೋಪಿಗಳು ಪ್ರತ್ಯೇಕವಾಗಿ ಸಲ್ಲಿಸಿದ್ದ ಮೂರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ. ಆರೋಪಿಗಳಾದ ಪುನೀತ್ ಕೆರೆಹಳ್ಳಿ, ಗೋಪಿ, ಸುರೇಶ್, ಪವನ್ ಕುಮಾರ್ ಎ.ಎನ್.ಪಿ ಲಿಂಗಪ್ಪ ಎಂಬವರಿಗೆ ಜಾಮೀನು ಮಂಜೂರು ಮಾಡಿ ನ್ಯಾಯಾಲಯ ಆದೇಶಿಸಿದೆ.
ಅರ್ಜಿದಾರ ಪರ ಹಿರಿಯ ವಕೀಲ ಅರುಣ ಶ್ಯಾಮ್, ‘ಮರಣೋತ್ತರ ಪರೀಕ್ಷೆಯಲ್ಲಿ ಇದ್ರೀಶ್ ಪಾಷಾ ಅವರ ದೇಹದಲ್ಲಿ ತರಚಿದ ಗಾಯಗಳ ಬಗ್ಗೆ ಮಾತ್ರ ಉಲ್ಲೇಖವಾಗಿದೆ. ಆದರೆ, ಗಂಭೀರ ಗಾಯಗಳ ಬಗ್ಗೆ ಏನೂ ಮಾಹಿತಿ ಇಲ್ಲ. ಈಗ ತನಿಖೆ ಪೂರ್ಣಗೊಂಡಿದೆ. ಹೀಗಾಗಿ ಜಾಮೀನು ಮಂಜೂರು ಮಾಡಬೇಕು’ ಎಂದು ಕೋರಿದ್ದರು.
ಏನಿದು ಘಟನೆ?
ರಾಮನಗರ ಜಿಲ್ಲೆಯಲ್ಲಿ ದನಗಳನ್ನು ಸಾಗಿಸುತ್ತಿದ್ದ ವಾಹನದ ಚಾಲಕನನ್ನು ಕಿಡಿಗೇಡಿಗಳ ಗುಂಪೊಂದು ಅಡ್ಡ ಹಾಕಿ ಥಳಿಸಿ ಹತ್ಯೆಗೈದಿತ್ತು. ಮಂಡ್ಯ ನಿವಾಸಿ ಇದ್ರೀಸ್ ಪಾಷಾ (39) ಮೃತದೇಹ ಸಾತನೂರು ಪೊಲೀಸ್ ಠಾಣೆಯಿಂದ ಸ್ವಲ್ಪ ದೂರದಲ್ಲೇ ಪತ್ತೆಯಾಗಿತ್ತು. ಈ ಸಂಬಂಧ ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಎಲ್ಲಾ ಆರೋಪಿಗಳನ್ನು ಏಪ್ರಿಲ್ 5ರಂದು ರಾಜಸ್ಥಾನದಲ್ಲಿ ಬಂಧಿಸಲಾಗಿತ್ತು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
