ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದನ್ನು ನಾವು ಗಮನಿಸಿದ್ದೇವೆ. ಇದಕ್ಕಾಗಿ ಸರ್ಕಾರ ಕೂಡ ಜನರಿಗೆ ಎಲೆಕ್ಟ್ರಿಕ್ ವಾಹನಗಳ ಉಪಯೋಗದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ, ಇದಲ್ಲದೆ ಸರ್ಕಾರ ಕೂಡ ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳನ್ನು ಸಾರಿಗೆ ವ್ಯವಸ್ಥೆಯಲ್ಲಿ ಬಳಸುತ್ತಿರುವುದನ್ನು ನಾವು ಗಮನಿಸಬಹುದು.
ಮೊದಲನೆಯದಾಗಿ BMTC ಇತ್ತೀಚಿಗೆ ಎಲೆಕ್ಟ್ರಿಕ್ ಬಸ್ ಬಿಟ್ಟಿರುವುದನ್ನು ನಾವು ನೋಡಿದ್ದೇವೆ. ಜನರು ಇದರ ಉಪಯೋಗವನ್ನು ಸಕ್ರಿಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಇದೀಗ KSRTC ಕೂಡ ಎಲೆಕ್ಟ್ರಿಕ್ ಬಸ್ ಗಳನ್ನು ಬಿಟ್ಟಿದ್ದು, ಇದೀಗ ಇದರ ಕುರಿತು ಕೆಲವು ವಿಶೇಷತೆಗಳನ್ನು ನಾವು ನಿಮ್ಮ ಗಮನಕ್ಕೆ ತರಲು ಇಚ್ಚಿಸುತ್ತೇವೆ.
ಶಿವಮೊಗ್ಗ–ಬೆಂಗಳೂರು ಮಧ್ಯೆ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭವಾಗಿದೆ. ಶಿವಮೊಗ್ಗ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಮೊದಲ ಎಲೆಕ್ಟ್ರಿಕ್ ಬಸ್ ಈಗಾಗಲೇ ಬೆಂಗಳೂರಿಗೆ ತೆರಳಿದ್ದು, ಡಿಪೋ ಸಿಬ್ಬಂದಿ ಪೂಜೆ ಸಲ್ಲಿಸಿ ಬಸ್‌ಗೆ ಚಾಲನೆ ನೀಡಿದ್ದರು. ಇನ್ನು ಬಸ್ ಟಿಕೆಟ್ ದರ ಎಷ್ಟು? ಬಸ್ ಟೈಮಿಂಗ್ ಮತ್ತು ಇದರ ವೈಶಿಷ್ಯತೆ ಬಗ್ಗೆ KSRTC ಮಾಹಿತಿ ತಿಳಿಸಿದೆ.
ಶಿವಮೊಗ್ಗ-ಬೆಂಗಳೂರು ನಡುವಿನ KSRTC ಎಲೆಕ್ಟ್ರಿಕ್ ಬಸ್‌ನ ದರವನ್ನು 600 ರೂ. ನಿಗದಿ ಮಾಡಲಾಗಿದೆ. KSRTC ವೆಬ್‌ಸೈಟ್‌ನಲ್ಲಿ ಸಾಮಾನ್ಯ ಬಸ್‌ನ ಟಿಕೆಟ್ ಬುಕ್ ಮಾಡುವ ಮಾದರಿಯಲ್ಲಿಯೇ ಎಲೆಕ್ಟ್ರಿಕ್ ಬಸ್ ಟಿಕೆಟ್‌ಗಳನ್ನು ಸಹ ಬುಕ್ ಮಾಡಬಹುದಾಗಿದೆ. ಶಿವಮೊಗ್ಗ-ಬೆಂಗಳೂರು ನಡುವಿನ ಎಲೆಕ್ಟ್ರಿಕ್ ಬಸ್ ಪ್ರತಿದಿನ ಮಧ್ಯಾಹ್ನ 12ಕ್ಕೆ ಶಿವಮೊಗ್ಗದಿಂದ ಸಂಚಾರ ಆರಂಭಿಸಲಿದೆ, ಸಂಜೆ 6 ಗಂಟೆಗೆ ಬೆಂಗಳೂರು ತಲುಪಲಿದೆ. ಬೆಂಗಳೂರು ನಗರದಿಂದ ರಾತ್ರಿ 11ಕ್ಕೆ ಹೊರಟು ಮರುದಿನ ಬೆಳಗ್ಗೆ 5 ಗಂಟೆಗೆ ಶಿವಮೊಗ್ಗ ನಗರ ತಲುಪಲಿದೆ. https://awatar.ksrtc.in ವೆಬ್‌ಸೈಟ್‌ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.
ಇದರ ವೈಶಿಷ್ಯತೆ:
ಇವಿ ಪ್ಲಸ್ ಬಸ್ಸುಗಳು ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಹೊಂದಿದೆ. ಸಿಸಿ ಕ್ಯಾಮರಾ, ಅಗ್ನಿಶಾಮಕ ಸಾಧನ, ಎಮರ್ಜನ್ಸಿ ಬಟನ್‌ಗಳು, ಪ್ರಥಮ ಚಿಕಿತ್ಸೆ ಕಿಟ್, ಗ್ಲಾಸ್ ಹ್ಯಾಮರ್ ಸೇರಿದಂತೆ ಹಲವು ಸೌಲಭ್ಯಗಳಿವೆ. ಎಲೆಕ್ಟ್ರಿಕ್ ಬಸ್ಸುಗಳು ಅತ್ಯಾಧುನಿಕ ಲಿ-ಆನ್ ಫಾಸ್ಪೇಟ್ ಬ್ಯಾಟರಿ ಹೊಂದಿದೆ. ಒಮ್ಮೆ ಬ್ಯಾಟರಿ ಚಾರ್ಜ್ ಆಗಲು ಸುಮಾರು ಎರಡೂವರೆ ಗಂಟೆ ಸಮಯ ಹಿಡಿಯಲಿದೆ. ಶಿವಮೊಗ್ಗ ಡಿಪೋದಲ್ಲಿ ಬಸ್ ಚಾರ್ಜಿಂಗ್ ಪಾಯಿಂಟ್ ನಿರ್ಮಿಸಲಾಗಿದೆ. ಒಮ್ಮೆ ಚಾರ್ಜ್ ಮಾಡಿದರೆ 300 ಕಿ.ಮೀವರೆಗೆ ಬಸ್ ಸಂಚರಿಸಲಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
