ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ಅಪಘಾತದಿಂದ ಪಾರಾಗಿದ್ದಾರೆ. ಪ್ರವೀಣ್ ಕುಮಾರ್ ಅವರ ಲ್ಯಾಂಡ್ ರೋವರ್ ಕಾರು ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಮೀರತ್ ನಲ್ಲಿ ಅಪಘಾತಕ್ಕೀಡಾಗಿದೆ. ಅಪಘಾತದ ವೇಳೆ ಪ್ರವೀಣ್ ಕುಮಾರ್ ಮತ್ತು ಅವರ ಮಗ ಕಾರಿನಲ್ಲಿದ್ದರು. ಅದೃಷ್ಟವಶಾತ್ ಅಪಘಾತದಲ್ಲಿ ಪ್ರವೀಣ್ ಹಾಗೂ ಅವರ ಪುತ್ರನಿಗೆ ಯಾವುದೇ ಗಾಯಗಳಾಗಿಲ್ಲ.
ಪ್ರವೀಣ್ ಕುಮಾರ್ ಮಂಗಳವಾರ ರಾತ್ರಿ ಉತ್ತರ ಪ್ರದೇಶದ ಪಾಂಡವನಗರದಿಂದ ಮೀರತ್‌ಗೆ ತಮ್ಮ ಲ್ಯಾಂಡ್ ರೋವರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಮೀರತ್‌ನಲ್ಲಿರುವ ಕಮಿಷನರ್ ಬಂಗಲೆಯನ್ನು ತಲುಪಿದಾಗ, ವೇಗವಾಗಿ ಬಂದ ಟ್ರಕ್ ಪ್ರವೀಣ್ ಕುಮಾರ್ ಅವರ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಪ್ರವೀಣ್ ಕುಮಾರ್ ಅವರ ಕಾರು ನಜ್ಜುಗುಜ್ಜಾಗಿದೆ. ಅಪಘಾತ ಸಂಭವಿಸಿದ ತಕ್ಷಣ ಕಾರಿನಲ್ಲಿದ್ದ ಏರ್ ಬಲೂನ್ ತೆರೆದುಕೊಂಡಿದ್ದರಿಂದ ಪ್ರವೀಣ್ ಕುಮಾರ್ ಮತ್ತು ಅವರ ಪುತ್ರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತ ಸಂಭವಿಸಿದ ಕೂಡಲೇ ಪಕ್ಕದಲ್ಲಿದ್ದವರು ಸ್ಥಳಕ್ಕೆ ತಲುಪಿದ್ದಾರೆ. ಪ್ರವೀಣ್ ಕುಮಾರ್ ತನ್ನ ಮಗನನ್ನು ರಕ್ಷಿಸಿ ಲಾರಿ ಚಾಲಕನನ್ನು ಹಿಡಿದಿದ್ದಾರೆ. ಮಾಹಿತಿ ಪಡೆದ ಸ್ಥಳೀಯ ಪೊಲೀಸರು ತಕ್ಷಣ ಸ್ಥಳಕ್ಕೆ ಬಾರದೆ ಆರೋಪಿ ಟ್ರಕ್ ಚಾಲಕನನ್ನು ಬಂಧಿಸಿದ್ದಾರೆ.
ಪ್ರವೀಣ್ ಕುಮಾರ್ ಮೀರತ್‌ನ ಬಾಗ್ಪತ್ ರಸ್ತೆಯಲ್ಲಿರುವ ಮುಲ್ತಾನ್ ನಗರದಲ್ಲಿ ವಾಸವಾಗಿದ್ದಾರೆ. ಮತ್ತೊಂದೆಡೆ, ಪ್ರವೀಣ್ ಕುಮಾರ್ ರಸ್ತೆ ಅಪಘಾತಕ್ಕೀಡಾಗಿರುವುದು ಇದೇ ಮೊದಲಲ್ಲ. 2007ರಲ್ಲಿ ಕೂಡ ಪ್ರವೀಣ್ ರಸ್ತೆ ಅಪಘಾತಕ್ಕೀಡಾಗಿದ್ದರು. ವೇಗದ ಬೌಲರ್ ಆಗಿರುವ 36 ವರ್ಷದ ಪ್ರವೀಣ್ ಕುಮಾರ್ 2007 ಮತ್ತು 2012 ರ ನಡುವೆ ಭಾರತ ತಂಡವನ್ನು ಪ್ರತಿನಿಧಿಸಿದ್ದರು. 6 ಟೆಸ್ಟ್, 68 ODI ಮತ್ತು 10 T20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 27, ಏಕದಿನದಲ್ಲಿ 77 ಮತ್ತು ಟಿ20ಯಲ್ಲಿ 8 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪ್ರವೀಣ್ ಐಪಿಎಲ್‌ನಲ್ಲಿ 119 ಪಂದ್ಯಗಳನ್ನು ಆಡಿದ್ದು, 90 ವಿಕೆಟ್ ಪಡೆದಿದ್ದಾರೆ. ಬ್ಯಾಟ್ಸ್‌ಮನ್ ಆಗಿಯೂ ಅವರು ಏಕದಿನ ಪಂದ್ಯಗಳಲ್ಲಿ ಅರ್ಧಶತಕ ಗಳಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
