ಶೀತಲೀ ಅಥವಾ ಶಿತ್ಕಾರಿ ಪ್ರಾಣಾಯಾಮದಿಂದ ದೇಹದ ಉಷ್ಣಾಂಶವನ್ನು ಒಡೆದೋಡಿಸಿ.
ಪ್ರಾಣ ಎಂದರೆ ‘ಉಸಿರು’ ಎಂದರ್ಥ ಹಾಗೆಯೇ ಆಯಾಮ ಎಂದರೆ ‘ಹಿಗ್ಗಿಸು ಅಥವಾ ಕುಗ್ಗಿಸು’ ಎಂದರ್ಥ.ಹಾಗಾಗಿ ಪ್ರಾಣಾಯಾಮ ಎಂದರೆ “ಉಸಿರನ್ನು ಹಿಗ್ಗಿಸುವುದು ಅಥವಾ ವಿಸ್ತರಿಸುವುದು”ಎಂಬ ಅರ್ಥ ಬರುತ್ತದೆ. ಪ್ರಾಣಾಯಾಮವು ಯೋಗದ ಅಸ್ಟಾಂಗಗಳಲ್ಲಿ ಒಂದಾಗಿದೆ.ಪ್ರಾಣಾಯಾಮವು ದೈಹಿಕ, ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಸಾಧನೆಗೆ ಸಹಕಾರಿಯಾಗಿ ಕೆಲಸ ನಿರ್ವಹಿಸುತ್ತದೆ.
ಈ ಪ್ರಾಣಾಯಾಮಗಳಲ್ಲಿ ಇರುವ ಪ್ರಮುಖ ವಿಧಗಳಲ್ಲಿ ಶೀತಲೀ ಪ್ರಾಣಾಯಾಮವು ಸಹ ಒಂದು. ಶೀತಲೀ ಎಂದರೆ ದೇಹ ಮತ್ತು ಮನುಸ್ಸುಗಳೆರಡನ್ನು ತಂಪಾಗಿ ಇಡು ಎಂದರ್ಥ. ಶೀತಲೀ ಪ್ರಾಣಾಯಾಮವನ್ನು ಮಾಡುವುದರಿಂದ ದೇಹವನ್ನು ಸುಲಭವಾಗಿ ತಂಪುಗೊಳಿಸಬಹುದು.
ಶೀತಲೀ ಪ್ರಾಣಾಯಾಮವನ್ನು ಅಭ್ಯಾಸಮಾಡುವ ಕ್ರಮ:
ಯಾವುದಾದರೊಂದು ಸುಖಕರವಾದ ಆಸನದಲ್ಲಿ ಬೆನ್ನು ಮತ್ತು ಕುತ್ತಿಗೆ ನೇರಮಾಡಿ ನೆಟ್ಟಗೆ ಕುಳಿತುಕೊಳ್ಳಬೇಕು. ಕೈಗಳು ಚಿನ್ಮುದ್ರೆಯಲ್ಲಿರಬೇಕು.ನಾಲಗೆಯನ್ನು ಹೊರಗೆ ಚಾಚಿ ಅದರ ಪಕ್ಕಗಳನ್ನು ಮಡಚಿ ಕೊಳವೆಯಾಕಾರ ಮಾಡಿ.(ಚಿತ್ರದಲ್ಲಿ ತೋರಿಸುರುವಂತೆ) ನಂತರ ನಿಧಾನವಾಗಿ, ದೀರ್ಘವಾಗಿ ಗಾಳಿಯನ್ನು ನಾಲಗೆಯ ಮೂಲಕ ಒಳಕ್ಕೆಳೆದುಕೊಂಡು ಕೆಲವು ಕ್ಷಣಗಳ ಕಾಲ ಗಾಳಿಯನ್ನು ದೇಹದ ಒಳಗೆ ಹಿಡಿದಿಡಿ. ನಂತರ ಮೂಗಿನ ಮುಖಾಂತರ ನಿಧಾನವಾಗಿ ಉಸಿರನ್ನು ಹೊರಕ್ಕೆ ಬಿಡಿ. ಈ ರೀತಿ ಹತ್ತು ಭಾರಿ ಮಾಡಿದರೆ ಸಾಕು
ಶಿತ್ಕಾರಿ ಪ್ರಾಣಾಯಾಮವನ್ನು ಅಭ್ಯಾಸಮಾಡುವ ಮತ್ತೊಂದು ಕ್ರಮ:
ಯಾವುದಾದರೊಂದು ಸುಖಕರವಾದ ಆಸನದಲ್ಲಿ ಬೆನ್ನು ಮತ್ತು ಕುತ್ತಿಗೆ ನೇರಮಾಡಿ ನೆಟ್ಟಗೆ ಕುಳಿತುಕೊಂಡು ನಿಮ್ಮ ತುಟಿಗಳನ್ನು ಮಾತ್ರ ತೆರೆದು ಎಲ್ಲ ಹಲ್ಲುಗಳನ್ನು ಕಚ್ಚಿಕೊಂಡು(ಚಿತ್ರದಲ್ಲಿ ತೋರಿಸಿರುವಂತೆ) ಸ್ವಲ್ಪ ಪ್ರಮಾಣದ ವೇಗದಲ್ಲಿ ದೀರ್ಘ ಉಸಿರನ್ನು ಹಲ್ಲುಗಳಮೂಲಕ ಎಳೆದುಕೊಂಡು ಕೆಲವು ಕ್ಷಣಗಳವರೆಗೆ ಒಳಗಿಟ್ಟುಕೊಂಡು ಮೂಗಿನ ಮೂಲಕ ಹೊರಬಿಡಿ. ಹೀಗೆ ಸುಮಾರು ಹತ್ತು ಭಾರಿ ಮಾಡಿದರೆ ಸಾಕು.
ಶೀತಲೀ ಪ್ರಾಣಾಯಾಮವನ್ನು ಅಭ್ಯಾಸ ಮಾಡುವುದರಿಂದಾಗುವ ಪ್ರಯೋಜನಗಳು:
ಶೀತಲೀ ಪ್ರಾಣಾಯಾಮ ಮಾಡುವುದರಿಂದ ದೇಹವನ್ನು ತಂಪಾಗಿಸಿಕೊಳ್ಳಬಹುದು. ಮನಸ್ಸಿನ ಒತ್ತಡವನ್ನು ಹೋಗಲಾಡಿಸಲು ಇದು ಸಹಕಾರಿಯಾಗಿದೆ. ಅಲ್ಲದೆ ಶ್ವಾಸಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಪರಿಹಾರವಾಗಲು ಸಹಕಾರಿಯಾಗಿದೆ. ನಿದ್ರಾ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಈ ಪ್ರಾಣಾಯಾಮ ಮಾಡುವುದರ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
