ಕನ್ನಡದಲ್ಲಿ ಕಿಚ್ಚ ಸುದೀಪ್ ನಟನೆಯ ಹೆಬ್ಬುಲಿ ಚಿತ್ರದಲ್ಲಿ ನಟಿಸಿರುವ ಅಮಲಾ ಪೌಲ್ ಅವರ ಬಗೆಗಿನ ನ್ಯೂಸ್ ಒಂದು ಸದ್ಯ ಸೌತ್ ಸಿನಿ ದುನಿಯಾದಲ್ಲಿ ಗಿರಕಿ ಹೊಡೆಯುತ್ತಿದೆ. ಅದೇನೆಂದರೆ ನಟಿ ಅಮಲಾ ಪೌಲ್ ವಂಚನೆ ಮತ್ತು ಕಿರುಕುಳದ ಆರೋಪದ ಮೇಲೆ ತಮ್ಮ ಬಾಯ್ ಫ್ರೆಂಡ್ ಭವೀಂದರ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವಿಲುಪುರಂ ಜಿಲ್ಲೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಭವೀಂದರ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
2018ರಲ್ಲಿ ಅಮಲಾ ಮತ್ತು ಭವ್ನಿಂದರ್ ಜಂಟಿಯಾಗಿ ಒಂದು ಪ್ರೊಡಕ್ಷನ್ ಹೌಸ್ ಶುರು ಮಾಡಿದ್ದರು. ಆದರೆ ಈ ಜೋಡಿ ಕಾರಣಾಂತರಗಳಿಂದ ದೂರವಾಯಿತು. ಆದ್ದರಿಂದ ಕೊನೆಗೆ ಈ ಪ್ರೊಡಕ್ಷನ್ ಹೌಸ್ ಅನ್ನು ಅಮಲಾ ಒಬ್ಬರೇ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಪ್ರೊಡಕ್ಷನ್ ಹೌಸ್‌ನಿಂದ ಹೊರಗಿದ್ದರೂ ಭವೀಂದರ್ ಸಿಂಗ್ ನಕಲಿ ದಾಖಲೆಗಳನ್ನು ಸೃಷ್ಟಿಸಿ ನಟಿಯಿಂದ ಹಣ ಲಪಟಾಯಿಸಿದ್ದಾರೆ. ಭವೀಂದರ್ ತನಗೆ ಬೆದರಿಕೆಯ ಮೂಲಕ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಅಮಲಾ ದೂರಿನಲ್ಲಿ ಹೇಳಿಕೊಂಡಿದ್ದಾರೆ.
ಇದಕ್ಕೂ ಮೊದಲು, 2020 ರಲ್ಲಿ, ಭವೀಂದರ್ ಅವರು ಮತ್ತು ಅಮಲಾ ಪೌಲ್ ಇಬ್ಬರು ಮದುವೆಯ ಉಡುಪಿನಲ್ಲಿರುವ ಚಿತ್ರಗಳನ್ನು ಬಿಡುಗಡೆ ಮಾಡಿದ್ದರು. ಈ ಫೋಟೋಗಳು ವೈರಲ್ ಆಗಿದ್ದವು, ಇಬ್ಬರು ಮದುವೆಯಾಗಿದ್ದಾರೆ ಎಂಬ ವದಂತಿ ಹಬ್ಬಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಅಮಲಾ, ಈ ಚಿತ್ರಗಳು 2018 ರಲ್ಲಿ ನಡೆದ ಫೋಟೋಶೂಟ್‌ನಿಂದ ಬಂದವು ಮತ್ತು ನಾವು ಮದುವೆಯಾಗಿಲ್ಲ ಎಂದು ಹೇಳಿದ್ದರು. ನಂತರ ಅವರು ಭಾವಿಂದರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು, ನಂತರ ಬಾವಿಂದರ್ ಅವರು ಚಿತ್ರಗಳನ್ನು ಡಿಲೀಟ್ ಮಾಡಿದ್ದರು.